ನ್ಯಾನೋ ತಂತ್ರಜ್ಞಾನದಿಂದ ಭೂಮಿಯ ಫಲವತ್ತತೆ ಹೆಚ್ಚುವುದು: ತಹಸೀಲ್ದಾರ್ ವೈ.ಎಂ.ರೇಣುಕುಮಾರ್

| Published : Aug 01 2025, 12:00 AM IST

ನ್ಯಾನೋ ತಂತ್ರಜ್ಞಾನದಿಂದ ಭೂಮಿಯ ಫಲವತ್ತತೆ ಹೆಚ್ಚುವುದು: ತಹಸೀಲ್ದಾರ್ ವೈ.ಎಂ.ರೇಣುಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಇಲಾಖೆ ರೈತ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಇಲಾಖೆಯ ಸಲಹೆ ಹಾಗೂ ಮಾರ್ಗದರ್ಶನವನ್ನು ಪಾಲನೆ ಮಾಡುವ ಮೂಲಕ ಹೆಚ್ಚಿನ ಆದಾಯ ಜತೆಗೆ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ರೈತರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಇಳುವರಿ ಸಲುವಾಗಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ಕಂಡಿದ್ದೇವೆ. ಆದ್ದರಿಂದ ನ್ಯಾನೋ ತಂತ್ರಜ್ಞಾನದ ಮೂಲಕ ರೈತರ ಬೆಳೆಗೆ ಅವಶ್ಯವಾಗಿ ಬೇಕಿರುವ ರಾಸಾಯನಿಕ ಗೊಬ್ಬರವನ್ನು ಕೊಡುವುದರಿಂದ ಭೂಮಿಯ ಫಲವತ್ತತೆ, ರೈತರ ಹಣ ಹಾಗೂ ಸಮಯದ ಉಳಿತಾಯವಾಗಲಿದೆ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಸಲಹೆ ನೀಡಿದರು.

ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ರೈತರಾದ ಕುಮಾರ್ ಅವರ ಜಮೀನಿನಲ್ಲಿ ಡ್ರೋನ್ ಮೂಲಕ ನ್ಯಾನೋ ತಂತ್ರಜ್ಞಾನದೊಂದಿಗೆ ಗೊಬ್ಬರ ಸಿಂಪಡಿಕೆ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒಂದು ಎಕರೆ ಜಮೀನಿಗೆ ಕನಿಷ್ಠ ನಾಲ್ಕು ಮೂಟೆ ರಾಸಾಯನಿಕ ಗೊಬ್ಬರ ಪಡೆಯುವದರ ಜೊತೆಗೆ ಎರಡ್ಮೂರು ರೈತರ ಶ್ರಮವೂ ಖರ್ಚಾಗುತ್ತಿತ್ತು, ಇಂದು ಹೊಸದಾಗಿ ಬಂದಿರುವ ಡ್ರೋನ್ ನ ಮೂಲಕ ಪ್ರತಿ ಎಕರೆಗೆ ನ್ಯಾನೋ ರಸಗೊಬ್ಬರನ್ನು ಕೇವಲ ಹತ್ತು ನಿಮಿಷಗಳಲ್ಲಿ ಸಿಂಪಡಿಸುವುದರಿಂದ ಶೇ. ೫೦ರಷ್ಟು ಹಣವನ್ನು ಉಳಿಸಬಹುದಾಗಿದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಮಾತನಾಡಿ, ಕೃಷಿಯಲ್ಲಿ ಯುರಿಯಾದ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ವಿವಿಧ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಯುರಿಯಾ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಮೂಲವಾದರೂ ಅದನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಆಮ್ಮಿಯತೆ, ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳವಾಗಬಹುದು. ಹೆಚ್ಚಾಗಿ ಬಳಕೆ ಮಾಡಿದರೆ ಇಳುವರಿ ಕಡಿಮೆ ಆಗಬಹುದು, ಪೋಷಕಾಂಶಕಗಳ ಅಸಮತೋಲನ ಉಂಟಾಗಬಹುದು ಹಾಗೂ ಹೆಚ್ಚಿನ ಸಾರಜನಕ ಪ್ರಮಾಣದಿಂದ ಸಸ್ಯಗಳ ಬೆಳವಣಿಗೆಗೆ ಮಾರಕವೂ ಆಗಬಹುದು. ಆದ್ದರಿಂದ ರೈತರು ಹರಳು ರೂಪದ ಯುರಿಯಾ ಬಳಕೆ ಪ್ರಮಾಣ ಕಡಿಮೆ ಮಾಡಬೇಕು, ಸಾರಜನಕದ ಜೊತೆ ಪಾಸ್‌ಪರಸ್ ಮತ್ತು ಪೋಟ್ಯಾಷಿಯಂ ಮುಂತಾದ ಮುಖ್ಯ ಪೋಷಕಾಂಶಕಗಳನ್ನು ಒಳಗೊಂಡಿರುವ ರಸಗೊಬ್ಬರಗಳನ್ನು ಬಳಸುವುದು ಅಗತ್ಯವಾಗಿದೆ. ಇದರಿಂದ ಮಣ್ಣಿನ ಆರೋಗ್ಯವೂ ಸುಧಾರಿಸುತ್ತದೆ. ಆಯಾ ಬೆಳೆಗೆ ತಕ್ಕಂತೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡುವಂತೆ ಹಾಗೂ ಮಣ್ಣು ಪರೀಕ್ಷೆ ಆಧಾರದಲ್ಲಿ ಅವಶ್ಯವಿರುವಷ್ಟು ಮಾತ್ರ ರಾಸಾಯನಿಕ ಗೊಬ್ಬರಗಳನ್ನು ಬಳಸುವುದು ಅತಿ ಸೂಕ್ತ ಎಂದು ಸಲಹೆ ನೀಡಿದರು.

ಹಸಿರೆಲೆ ಗೊಬ್ಬರಗಳನ್ನು ಬೆಳಸಿ ಮಣ್ಣಿನಲ್ಲಿ ಬೆರೆಸುವುದರಿಂದ, ದ್ವಿದಳ ಧಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಹಾಗೂ ಬೆಳೆ ಪರಿವರ್ತನೆಯಾಗಿ ಬೆಳೆಯುವುದರಿಂದ ಯುರಿಯಾ ರಸಗೊಬ್ಬರದ ಬಳಕೆ ಕಡಿಮೆ ಮಾಡಬಹುದು. ದ್ವಿದಳಧಾನ್ಯಗಳು ವಾತಾವರಣದಲ್ಲಿರುವ ಸಾರಜನಕವನ್ನು ಸ್ತ್ರೀರಿಕರಣಗೊಳಿಸುವುದರಿಂದ ಸಾರಜನಕ ಬಳಕೆ ತಗ್ಗಿಸಬಹುದು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ರೈತ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಇಲಾಖೆಯ ಸಲಹೆ ಹಾಗೂ ಮಾರ್ಗದರ್ಶನವನ್ನು ಪಾಲನೆ ಮಾಡುವ ಮೂಲಕ ಹೆಚ್ಚಿನ ಆದಾಯ ಜತೆಗೆ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಹಾಸನ ತೋಟಗಾರಿಕೆ ಇಲಾಖೆಯ ಅಧಿಕಾರಿ ನಾಗೇಶ್ ರಾವ್, ಕೃಷಿ ಇಲಾಖೆಯ ಹೇಮಾ, ಧನು, ಬೋರೇಗೌಡ, ರೈತರಾದ ಕಟ್ಟೆಬೆಳಗುಲಿಯ ಕುಮಾರಸ್ವಾಮಿ ಹಾಗೂ ಹರೀಶ್, ತೆರಣ್ಯದ ಧರ್ಮರಾಜ್, ಚಿಕ್ಕನಹಳ್ಳಿಯ ಸತೀಶ್, ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ, ಅಗತ್ಯ ಮಾಹಿತಿ ಪಡೆದರು.