ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ನಾಪೋಕ್ಲು ಕೊಡವ ಸಮಾಜದ ಸಂಯುಕ್ತ ಆಶಯದಲ್ಲಿ ಮಕ್ಕಳ ನಮ್ಮೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ನಾಪೋಕ್ಲು ಕೊಡವ ಸಮಾಜದ ಸಂಯುಕ್ತ ಆಶಯದಲ್ಲಿ ಮಕ್ಕಳ ನಮ್ಮೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಇಲ್ಲಿಯ ಕೊಡವ ಸಮಾಜದಲ್ಲಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಾಗೂ ಸ್ಥಳೀಯ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಮುಂದಾಳತ್ವದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು. ಈ ವರ್ಷದ ಅ. 24, 25ರಂದು ಆಯೋಜಿಸಲು ಉದ್ದೇಶಿಸಿರುವ ಮಕ್ಕಳ ನಮ್ಮೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲ ಕೊಡವ ಸಂಸ್ಕೃತಿ ಭಾಷೆಯ ಪಾಲಕರ ಜನಾಂಗಗಳ ಒಗ್ಗೂಡುವಿಕೆಯೊಂದಿಗೆ ಎರಡು ದಿನಗಳ ಮಕ್ಕಳ ನಮ್ಮೆಯನ್ನು ನಡೆಸುವಂತೆ ತೀರ್ಮಾನಿಸಲಾಯಿತು.

ಎಲ್ಲ ಕೊಡವ ಸಮಾಜಗಳು ಸಂಘ-ಸಂಸ್ಥೆಗಳು ಹಾಗೂ ಕೊಡವ ಭಾಷೆಗೆ ಸಮಾಜಗಳು ಸಂಘ ಸಂಸ್ಥೆಗಳಿಂದ ತಮ್ಮ ಪರಿಮಿತಿಯಲ್ಲಿ ಮಕ್ಕಳ ಸಾಂಸ್ಕೃತಿಕ ತಂಡವನ್ನು ಮಕ್ಕಳ ನಮ್ಮೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುವಂತೆ ತೀರ್ಮಾನಿಸಲಾಯಿತು. ಬಾಳೋ ಪಾಟ್, ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್, ಕಪ್ಪೆಯಾಟ್, ತಾಲಿಪಾಟ್, ಪರೆಯಕಳಿ ಸೇರಿದಂತೆ ಕೊಡವ ಹಾಡಿಗೆ ಭರತನಾಟ್ಯ ಅಪ್ಪಚ್ಚಕವಿಯ ನಾಲ್ಕು ಹಾಡುಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಅಕಾಡೆಮಿ ಅಧ್ಯಕ್ಷ ಅಜಿನಿಕಂಡ ಸಿ. ಮಹೇಶ್ ನಾಚಯ್ಯ ತಿಳಿಸಿದರು. ಅಕಾಡೆಮಿ ಸದಸ್ಯರಾದ ಪೊನ್ನೀರ ಗಗನ್, ಚಟ್ಟೆಯಂಡ ಸಂಜು ಕಾವೇರಪ್ಪ, ನಾಪೋಕ್ಲು ಕೊಡವ ಸಮಾಜದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ಕೊಡವ ಸಮಾಜದ ಕಾರ್ಯದರ್ಶಿ, ಕುಲ್ಲೇಟಿರ ಅಜಿತ್ ನಾಣಯ್ಯ ಸ್ವಾಗತಿಸಿ ವಂದಿಸಿದರು.