ಚೆಯ್ಯಂಡಾಣೆ ಗ್ರಾಮದ ಮಕ್ಕಿಮನೆ ಸುಧೀರ್‌ ಕುಮಾರ್ ಅವರು ಕೃಷಿಯಲ್ಲಿ ಹೊಸ ಪ್ರಯೋಗ ಹಾಗೂ ವೈವಿಧ್ಯತೆ ಮೈಗೂಡಿಸಿಕೊಂಡು ಗಮನ ಸೆಳೆದಿದ್ದಾರೆ.

ದುಗ್ಗಳ ಸದಾನಂದ

ನಾಪೋಕ್ಲು: ಚೆಯ್ಯಂಡಾಣೆ ಗ್ರಾಮದ ಮಕ್ಕಿಮನೆ ಸುಧೀರ್‌ ಕುಮಾರ್ ಅವರು ಕೃಷಿಯಲ್ಲಿ ಹೊಸ ಪ್ರಯೋಗ ಹಾಗೂ ವೈವಿಧ್ಯತೆ ಮೈಗೂಡಿಸಿಕೊಂಡು ಗಮನ ಸೆಳೆದಿದ್ದಾರೆ.ತಮ್ಮ 15 ಎಕರೆ ಜಾಗದಲ್ಲಿ ಕಾಫಿ, ಕಾಳುಮೆಣಸು, ಭತ್ತ ಹಾಗೂ ಶುಂಠಿ ಬೆಳೆಯೊಂದಿಗೆ ಕೃಷಿ ಪಯಣ ಆರಂಭಿಸಿದ ಸುಧೀರ್ ಕುಮಾರ್, ಹಣ್ಣಿನ ಬೆಳೆಗಳತ್ತ ಗಮನಹರಿಸಿ ಮೂರು ಎಕರೆ ಜಮೀನಿನಲ್ಲಿ ಬರೋಬ್ಬರಿ 210ಕ್ಕೂ ಹೆಚ್ಚು ದೇಶಿಯ ಹಾಗೂ ವಿದೇಶಿ ತಳಿಗಳ ಹಣ್ಣುಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಮಿರಾಕಲ್ ಫ್ರೂಟ್, ವಾಟರ್ ಆಪಲ್, ಆಸ್ಟ್ರೇಲಿಯನ್ ಪೇರಲ, ಬ್ಲಾಕ್ ಬೆರಿ , ಬ್ಲೂ ಬೆರಿ, ಬಿಳಿ ಸಪೋಟ, ಮ್ಯಾಂಗೋಸ್ಟಿನ್ ಸೇರಿದಂತೆ ಹಲವು ಅಪರೂಪದ ಹಣ್ಣುಗಳು ಅವರ ತೋಟದಲ್ಲಿ ಸಮೃದ್ಧವಾಗಿ ಬೆಳೆದಿವೆ. ಸುಧೀರ್‌ ತಮ್ಮ ಕಾಫಿ ಮತ್ತು ಅಡಿಕೆ ತೋಟವನ್ನು ಹೂವಿನ ತೋಟದಂತೆ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದು, ಇತರ ಕೃಷಿಕರಿಗೂ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಮಗಳು ಮೈತ್ರೆಯಿ ಸಾಧನೆ: ಇತ್ತೀಚೆಗೆ ಬೆಂಗಳೂರಿನ ಹೆಸರಘಟ್ಟದ ಐಸಿಎಆರ್‌-ಐಐಎಚ್‌ಆರ್‌ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಮಟ್ಟದ ಹಣ್ಣು ಮತ್ತು ತರಕಾರಿ ವಸ್ತು ಪ್ರದರ್ಶನದಲ್ಲಿ ಸುಧೀರ್ ಕುಮಾರ್ ಅವರ ಪುತ್ರಿ ಮೈತ್ರೆಯಿ ಭಾಗವಹಿಸಿ, ತಮ್ಮ ತೋಟದಲ್ಲಿ ಬೆಳೆದ ವಿವಿಧ ವಿದೇಶಿ ಹಣ್ಣುಗಳನ್ನು ಪ್ರದರ್ಶಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಅವರು ಪ್ರದರ್ಶನ ವೀಕ್ಷಿಸಿ ಕುಟುಂಬದ ಕೃಷಿ ಆಸಕ್ತಿ

ಪ್ರಶಂಸಿಸಿದ್ದಲ್ಲದೆ, ವಿಶಿಷ್ಟ ಬೆಳೆಗಾಗಿ ನೀಡಲಾಗುವ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದ್ದರು.

ವಿಜ್ಞಾನಿಗಳ ತಂಡ ಭೇಟಿ: ಪ್ರದರ್ಶನದಲ್ಲಿ ಸುಧೀರ್‌ ಸಾಧನೆಯನ್ನು ಮೆಚ್ಚಿದ ರಾಜ್ಯ ತೋಟಗಾರಿಕಾ ಇಲಾಖೆ ನಿರ್ದೇಶಕ ಟಿ.ಕೆ.ಬೆಹೇರಾ, ಹಿರಿಯ ವಿಜ್ಞಾನಿ ಕರುಣಾಕರನ್ ಹಾಗೂ ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದ ನಿರ್ದೇಶಕ ಮುರಳೀಧರ ಇತ್ತೀಚೆಗೆ ಸುಧೀರ್ ಅವರ ತೋಟಕ್ಕೆ ಖುದ್ದಾಗಿ ಭೇಟಿ ನೀಡಿ, ಬೆಳೆಗಳನ್ನು ವೀಕ್ಷಿಸಿ ಅಭಿನಂದಿಸಿದ್ದರು.

ಪುರಸ್ಕಾರ: ಸುಧೀರ್‌ ಅವರ ಕೃಷಿ ಸಾಧನೆಗೆ ಬೆಂಗಳೂರಿನ ಹವ್ಯಕ ಮಹಾಸಭಾವತಿಯಿಂದ ವಿವೇಕ ಕೃಷಿ ರತ್ನ ಪ್ರಶಸ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಗತಿಪರ ಕೃಷಿಕ ಪ್ರಶಸ್ತಿ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಉತ್ತಮ ಕೃಷಿಕ ಪ್ರಶಸ್ತಿ, ಚೆಟ್ಟಳ್ಳಿಯ ಐಸಿಎಆರ್‌ ಸಂಸ್ಥೆಯಿಂದ ವಿದೇಶಿ ಹಣ್ಣುಗಳ ಬೆಳೆ ಪ್ರಶಸ್ತಿ ಹಾಗೂ ಐಸಿಎಆರ್‌ ಬೆಂಗಳೂರು ವತಿಯಿಂದ ಮಿಶ್ರ ಬೆಳೆ ಪ್ರಗತಿಪರ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.