ನಾಪೋಕ್ಲು: ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟ ಉದ್ಘಾಟನೆ

| Published : Apr 19 2024, 01:04 AM IST

ನಾಪೋಕ್ಲು: ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಪೋಕ್ಲು ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿದ್ದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟ ಗುರುವಾರ ಆರಂಭವಾಯಿತು. ಮಡಿಕೇರಿ ಕೊಡ ಸಮಾಜ ಮತ್ತು ನಾಪೋಕ್ಲು ಕೊಡ ಸಮಾಜ ಮಹಿಳಾ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ನಾಪೋಕ್ಲು ತಂಡ ಗೆಲವು ಸಾಧಿಸಿದರೆ, ನಾಪೋಕ್ಲು ಮತ್ತು ಅಮ್ಮತಿ ಕೊಡವ ಸಮಾಜದ ಪುರುಷರ ತಂಡ ಪಂದ್ಯಾಟದಲ್ಲಿ ನಾಪೋಕ್ಲು ತಂಡ ಗೆಲವು ಸಾಧಿಸಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಜಿಲ್ಲೆಯಲ್ಲಿ ಕೊಡವ ಹಾಕಿ ಉತ್ಸವದಂತೆ ಹಗ್ಗಜಗ್ಗಾಟ ಕ್ರೀಡೆಯೂ ಪ್ರಸಿದ್ದಿ ಹೊಂದಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ ಆಶಿಸಿದ್ದಾರೆ.

ಇಲ್ಲಿನ ಕೆಪಿಎಸ್ ಶಾಲೆಯ ಆಟದ ಮೈದಾನದಲ್ಲಿ ಬೊಟ್ಟೋಳಂಡ ಕುಟುಂಬಸ್ಥರು ಆಯೋಜಿಸಿದ್ದ ಮೂರನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಮೊದಲ ಬಾರಿ ಪೊನ್ನೋಲತಂಡ ಕುಟುಂಬಸ್ಥರು ಕೊಡವ ಹಗ್ಗಜಗ್ಗಾಟ ಕ್ರೀಡಾಕೂಟ ಆರಂಭಿಸಿದ್ದರು. ನಂತರದ ದಿನಗಳಲ್ಲಿ ಇದು ಹಾಕಿ ನಮ್ಮೆಯಂತೆ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ,. ಈ ಬಾರಿ 9 ಮಹಿಳಾ ತಂಡಗಳು ಕೂಡ ಪಾಲ್ಗೊಂಡಿರುವುದು ವಿಶೇಷ ಎಂದರು

ಕೊಡವ ಜನಾಂಗದಲ್ಲಿ ಹಬ್ಬದ ರೂಪದಲ್ಲಿ ಕ್ರೀಡೆ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಐದು ತಂಡಗಳು ಸ್ಪರ್ಧೆ ಆಯೋಜಿಸಲು ಮುಂದೆ ಬಂದಿರುವುದು ಹೆಮ್ಮೆಯ ವಿಷಯ ಎಂದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕಕ್ಕಬ್ಬೆಯಲ್ಲಿ ಮೊದಲ ಬಾರಿಗೆ ಪೊನ್ನೋಲತಂಡ ಕುಟುಂಬಸ್ಥರು ಕೌಟುಂಬಿಕ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಿದರು. ಕೊಡವ ಕುಟುಂಬಗಳ ನಡುವಿನ ಬಲಾಬಲಗಳನ್ನು ಪ್ರದರ್ಶಿಸಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ಅದರೊಂದಿಗೆ ಕುಟುಂಬಗಳ ನಡುವಿನ ಪರಸ್ಪರ ಸ್ನೇಹ, ಸಾಮರಸ್ಯಕ್ಕೂ ನಾಂದಿಯಾಗಲಿದೆ ಎಂದರು.

ಕೊಡಗು ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, ಕ್ರೀಡೆಯಿಂದ ಸಮಾಜದಲ್ಲಿ ಪರಸ್ಪರ ಸಮರಸ್ಯ ಮೂಡಲು ಸಹಕಾರಿ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮೇದುರ ವಿಶಾಲ ಕುಶಾಲಪ್ಪ ಮಾತನಾಡಿ, ಪೊನ್ನೋಲತಂಡ ಕುಟುಂಬಸ್ಥರು ಕೊಡವ ಜನಾಂಗದ ದೈಹಿಕ ಸಾಮರ್ಥ್ಯ ಪ್ರದರ್ಶಿಸಲು ಆರಂಭಿಸಿದ ಹಗ್ಗಜಗ್ಗಾಟ ಸ್ಪರ್ಧೆ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ. ಕುಟುಂಬಗಳ ನಡುವೆ ಬಾಂಧವ್ಯ ವೃದ್ಧಿಸಲು ಕ್ರೀಡೆ ಸಹಕಾರಿಯಾಗಿದೆ ಎಂದರು.

ಆಶಿಕಾ ಬೋಪಣ್ಣ ಪ್ರಾರ್ಥಿಸಿದರು. ಬೊಟ್ಟೋಳಂಡ ಗಣೇಶ್ ಗಣಪತಿ ಸ್ವಾಗತಿಸಿದರು. ಮಾಳೆಟಿರ ಶ್ರೀನಿವಾಸ್ ಮತ್ತು ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು. ಭವಾನಿ ಜಗದೀಶ್ ವಂದಿಸಿದರು.

...........

ಪ್ರದರ್ಶನ ಪಂದ್ಯದಲ್ಲಿ ನಾಪೋಕ್ಲು ತಂಡ ಅವಳಿ ಗೆಲವು

ಮಡಿಕೇರಿ ಕೊಡ ಸಮಾಜ ಮತ್ತು ನಾಪೋಕ್ಲು ಕೊಡ ಸಮಾಜ ಮಹಿಳಾ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ನಾಪೋಕ್ಲು ತಂಡ ಗೆಲವು ಸಾಧಿಸಿದರೆ, ನಾಪೋಕ್ಲು ಮತ್ತು ಅಮ್ಮತಿ ಕೊಡವ ಸಮಾಜದ ಪುರುಷರ ತಂಡ ಪಂದ್ಯಾಟದಲ್ಲಿ ನಾಪೋಕ್ಲು ತಂಡ ಗೆಲವು ಸಾಧಿಸಿತು.

ಬೊಟ್ಟೋಳಂಡ ಕುಟುಂಬದ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಬಿ. ಗಣೇಶ್ ಗಣಪತಿ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಪೇರೂರು ಗ್ರಾಮದ ಕುಟುಂಬದ ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ, ಟೂರ್ನಮೆಂಟ್ ಡೈರೆಕ್ಟರ್ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಪೊನ್ನೋಲತಂಡ ಕುಟುಂಬದ ಅಧ್ಯಕ್ಷ ಪೊನ್ನೋಲತಂಡ ಬಿದ್ದಯ್ಯ, ಚೆಟ್ಟಂಗಡ ಕುಟುಂಬದ ಕಾರ್ಯದರ್ಶಿ ಚೆಟ್ಟಂಗಡ ರವಿ ಸುಬ್ಬಯ್ಯ, ಬೊಟ್ಟೋಳಂಡ ಕಾಫಿ ಹಿರಿಯರಾದ ಬಿ.ಡಿ.ಬಿದ್ದಯ್ಯ ,ಬೊಟ್ಟೋಳಂಡ ವಾಸು ಮುತ್ತಪ್ಪ, ,ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.ಆಕರ್ಷಕ ಮೆರವಣಿಗೆ:ಬೆಳಗ್ಗೆ ನಾಪೋಕ್ಲು ರಾಮಮಮದಿರದಲ್ಲಿ ಪೂಜೆ ಸಲ್ಲಿಸಿ ಪಟ್ಟಣದಿಂದ ಆಟದ ಮೈದಾನದವರೆಗೆ ಅಬಾಲವೃದ್ಧರಾದಿಯಾಗಿ ಕೊಡವ ಸಾಂಪ್ರದಾಯಿಕ ದಿರಿಸಿನಲ್ಲಿ ದುಡಿಕೊಟ್ ಪಾಟ್‌ನೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.

ಮೈದಾನದಲ್ಲಿ ಕ್ರೀಡಾ ಧ್ವಜಾರೋಹಣವನ್ನು ಅತಿಥಿಗಳು ನೆರವೇರಿಸಿದರು. ವೇದಿಕೆ ಉದ್ಘಾಟನೆಯನ್ನು ಕುಟುಂಬದ ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ ವೇದಿಕೆಯಲ್ಲಿದ್ದ ಗಣ್ಯರು ನೆರವೇರಿಸಿದರು. ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮೇದುರ ವಿಶಾಲ ಕುಶಾಲಪ್ಪ ಬೊಟ್ಟೋಳಂಡ ಕಪ್ ಟ್ರೋಫಿ ಅನಾವರಣಗೊಳಿಸಿದರು.