‘ಮಹಾತ್ಮಾ ಗಾಂಧಿ, ರವೀಂದ್ರನಾಥ್ ಟ್ಯಾಗೋರ್ ಅವರಂಥ ಮೇರು ವ್ಯಕ್ತಿತ್ವಗಳಿಗೂ ಸಂತ ಬ್ರಹ್ಮಶ್ರೀ ನಾರಾಯಣ ಗುರು ಅವರು ಸ್ಫೂರ್ತಿಯಾಗಿದ್ದರು ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ವರ್ಕಳ (ಕೇರಳ): ‘ಮಹಾತ್ಮಾ ಗಾಂಧಿ, ರವೀಂದ್ರನಾಥ್ ಟ್ಯಾಗೋರ್ ಅವರಂಥ ಮೇರು ವ್ಯಕ್ತಿತ್ವಗಳಿಗೂ ಸಂತ ಬ್ರಹ್ಮಶ್ರೀ ನಾರಾಯಣ ಗುರು ಅವರು ಸ್ಫೂರ್ತಿಯಾಗಿದ್ದರು. ಸರಳ ಜೀವನ ನಡೆಸಿ ವಿಶ್ವಮಾನವರಾಗುವುದನ್ನು ಕಲಿಸಿದರು. ಗುರುಗಳ ತತ್ವವು ಅಸಮಾನತೆಗೆ ಸವಾಲು ಒಡ್ಡಿದ್ದವು’ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ನಾರಾಯಣ ಗುರುಗಳ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ಬಳಿಕ ಕೇರಳದ ವರ್ಕಳದಲ್ಲಿರುವ ಶಿವಗಿರಿ ಮಠದ 93ನೇ ಯಾತ್ರಾರ್ಥಿಗಳ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ‘ನಾರಾಯಣ ಗುರುಗಳು ಸಂತರಷ್ಟೇ ಆಗಿರದೆ ಸಮಾನತೆ, ನೈತಿಕತೆಯ ಚಳವಳಿಕಾರರಾಗಿದ್ದರು. ಅವರು ಧಾರ್ಮಿಕ ಬಹುಸಂಖ್ಯಾತವಾದ, ಸಮಾನತೆ ಇಲ್ಲದ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ನ್ಯಾಯವಿಲ್ಲದ ಗುರುತಿನ ರಾಜಕೀಯದ ವಿರೋಧಿಯಾಗಿದ್ದರು’ ಎಂದರು.ಜತೆಗೆ, ‘ಗುರುಗಳನ್ನು ಭೇಟಿಯಾದ ಬಳಿಕ ಗಾಂಧೀಜಿಯವರು ಅಸ್ಪೃಶ್ಯತೆ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದರು. ಸರಳ ಜೀವನವನ್ನು ತಮ್ಮದಾಗಿಸಿಕೊಂಡರು. ರವೀಂದ್ರನಾಥ ಟ್ಯಾಗೋರರ ವಿಶ್ವಮಾನವ ತತ್ವವೂ ಗುರುಗಳ ಕೆಲಸಗಳಿಂದ ಪ್ರೇರಿತವಾಗಿದೆ. ಗುರುಗಳು ಆಧ್ಯಾತ್ಮಿಕತೆ, ವೈಚಾರಿಕತೆ, ಮಾನವತಾವಾದ ಮತ್ತು ಸಾಮಾಜಿಕ ನ್ಯಾಯವನ್ನು ಸೇತುವೆ ಮಾಡುವ ಮೂಲಕ ಆಧುನಿಕ ಭಾರತದ ಸೈದ್ಧಾಂತಿಕ ಕೇಂದ್ರದಲ್ಲಿ ನಿಂತಿದ್ದಾರೆ’ ಎಂದು ಹೇಳಿದರು. ‘ಇಂದು ನಾವು ದೇಶದ ಆರ್ಥಿಕ ಬೆಳವಣಿಗೆ, ಡಿಜಿಟಲ್ ವಿಸ್ತರಣೆ ಮತ್ತು ಜಾಗತಿಕ ಪ್ರಭಾವದ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ದೇಶ, ದುರ್ಬಲ ಸಾಮಾಜಿಕ ಒಗ್ಗಟ್ಟು ಮತ್ತು ದ್ವೇಷವು ಸಾಮಾನ್ಯೀಕರಣದಂತಹ ವಿರೋಧಾಭಾಸವನ್ನೂ ಎದುರಿಸುತ್ತಿದೆ’ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಮಠಾಧೀಶರಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಅನೇಕ ಗಣ್ಯರು ಹಾಜರಿದ್ದರು.
ವಾಕ್ಸಮರದ ಬೆನ್ನಿನಲ್ಲೇ ಸಿದ್ದು-ಪಿಣರಾಯಿ ಭೇಟಿ:ವರ್ಕಲಾ (ಕೇರಳ): ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ 200 ಮುಸ್ಲಿಮರ ಟೆಂಟ್ ಧ್ವಂಸವನ್ನು ವಿರೋಧಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಭೇಟಿಯಾದರು.ಕೋಗಿಲು ಅಕ್ರಮ ಒತ್ತುವರಿ ಧ್ವಂಸ ಪ್ರಕರಣದ ರಾಜಕೀಯ ಘರ್ಷಣೆಯ ನಂತರ, ಸಿದ್ದರಾಮಯ್ಯ ಮತ್ತು ಪಿಣರಾಯಿ ವಿಜಯನ್ ಒಂದೇ ವೇದಿಕೆಯನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲು.ಕೇರಳದ ತಿರುವನಂತಪುರಂ ಜಿಲ್ಲೆಯ ವರ್ಕಲಾದಲ್ಲಿರುವ ನಾರಾಯಣಗುರು ಸಂಸ್ಥಾಪಿತ ಶಿವಗಿರಿ ಮಠದಲ್ಲಿ ನಡೆದ ಯಾತ್ರಾರ್ಥಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು, ಅದೇ ಸಮಾರಂಭಕ್ಕೆ ಬಂದಿದ್ದ ಪಿಣರಾಯಿ ಅವರ ಕೈಕುಲುಕಿ, ಕೆಲ ಕ್ಷಣ ಹಸನ್ಮುಖಿಯಾದರು. ಆದರೆ, ಸಿದ್ದರಾಮಯ್ಯ ಅವರ ಭಾಷಣಕ್ಕೂ ಮೊದಲೇ ವಿಜಯನ್ ಕಾರ್ಯಕ್ರಮದಿಂದ ನಿರ್ಗಮಿಸಿದರು.
ಈ ನಡುವೆ, ಹೊರಡುವ ಮೊದಲು ವಿಜಯನ್ ಅವರು, ಸಿದ್ದರಾಮಯ್ಯ ಮತ್ತು ಕೋಗಿಲು ಟೆಂಟ್ ಧ್ವಂಸ ವಿರೋಧಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಬಳಿಗೆ ಹೋಗಿ ಮಾತುಕತೆ ನಡೆಸಿದರು. ಸಂಪುಟ ಸಭೆಯಲ್ಲಿ ಭಾಗವಹಿಸಲು ತಾವು ಹೊರಡಬೇಕಿದೆ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ.