ಬರದ ನೆಲದಲ್ಲಿ ಡ್ರಾಗನ್ ಫ್ರೂಟ್ ಬೆಳೆದ ನಾರಾಯಣಪ್ಪ

| Published : Jul 27 2024, 01:01 AM IST

ಸಾರಾಂಶ

ಕೆಜಿಗೆ 100 ರು. ರಿಂದ 200 ರು.ವರೆಗೆ ಮಾರಾಟವಾಗುತ್ತದೆ. ಎಕರೆಗೆ 6 ಲಕ್ಷ ರು.ದಿಂದ 8 ಲಕ್ಷ ರು. ಆದಾಯ ಬರುತ್ತದೆ. ಇದಕ್ಕೆ ರೋಗಬಾಧೆ ಮತ್ತು ನೀರಿನ ಪ್ರಮಾಣವು ಕಡಿಮೆ ತಗಲುವುದರಿಂದ ಖರ್ಚು ಕಡಿಮೆಯಾಗಿ ಆದಾಯ ಲಾಭದಾಯಕವಾಗಿದೆ. ಡ್ರಾಗನ್‌ ಫ್ರೂಟ್ ಬೆಳೆದು ನಾವು ಖುಷಿಯಾಗಿದ್ದೇವೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೃಷಿಯಲ್ಲಿ ಲಾಭವಿಲ್ಲ ಎಂದು ಹೊಲ, ಗದ್ದೆ ಮಾರಿ ಪಟ್ಟಣ, ನಗರ ಸೇರುವವರಿದ್ದಾರೆ. ಆದರೆ ತಾಲೂಕಿನ ಕಾಮಸಮುದ್ರ ಗ್ರಾಮದ ರೈತ ಜೆಸಿಬಿ ನಾರಾಯಣಪ್ಪ ಬರದ ಭೂಮಿಯಲ್ಲಿ ಡ್ರಾಗನ್ ಫ್ರೂಟ್ ಬೆಳೆದು ಉತ್ತಮ ಆದಾಯಗಳಿಸಿ ಮಾದರಿ ರೈತರಾಗಿದ್ದಾರೆ.

ತಮ್ಮ ಎರಡು ಎಕರೆ ಪ್ರದೇಶದಲ್ಲಿ ಡ್ರಾಗನ್‌ ಫ್ರೂಟ್ ಬೆಳೆದು ವರ್ಷಕ್ಕೆ 15 ರಿಂದ 16 ಲಕ್ಷ ರು. ಆದಾಯವನ್ನು ಪಡೆದುಕೊಂಡು ಕೃಷಿಯಲ್ಲಿ ಲಾಭದಾಯಕ ಬೆಳೆ ಬೆಳೆಯುತ್ತಿದ್ದಾರೆ. ಒಟ್ಟು ಎರಡು ಎಕರೆಯಲ್ಲಿ ಮೂರು ಸಾವಿರ ಸಸಿಗಳನ್ನು ನಾಟಿ ಮಾಡಿ ಕೈತುಂಬಾ ಆದಾಯ ಪಡೆಯುತ್ತಿದ್ದಾರೆ. ಫಸಲನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಲಾಪುರ, ಮತ್ತು ಹೈದರಾಬಾದ್, ವಿಜಯಪುರ, ಬೆಂಗಳೂರು, ಮಂಗಳೂರು, ನಗರಗಳಿಗೆ ಸರಬರಾಜು ಮಾಡುತ್ತಾರೆ.

ರೈತ ಜೆ. ಸಿ. ಬಿ ನಾರಾಯಣಪ್ಪ ಮಾತನಾಡಿ, ಕೆಜಿಗೆ 100 ರು. ರಿಂದ 200 ರು.ವರೆಗೆ ಮಾರಾಟವಾಗುತ್ತದೆ. ಎಕರೆಗೆ 6 ಲಕ್ಷ ರು.ದಿಂದ 8 ಲಕ್ಷ ರು. ಆದಾಯ ಬರುತ್ತದೆ. ಇದಕ್ಕೆ ರೋಗಬಾಧೆ ಮತ್ತು ನೀರಿನ ಪ್ರಮಾಣವು ಕಡಿಮೆ ತಗಲುವುದರಿಂದ ಖರ್ಚು ಕಡಿಮೆಯಾಗಿ ಆದಾಯ ಲಾಭದಾಯಕವಾಗಿದೆ. ಡ್ರಾಗನ್‌ ಫ್ರೂಟ್ ಬೆಳೆದು ನಾವು ಖುಷಿಯಾಗಿದ್ದೇವೆ ಎಂದರು.

ನಾಟಿ ಮಾಡಿದ ಎರಡು ವರ್ಷಕ್ಕೆ ಈ ಬೆಳೆ ಫಲ ಕೊಡುತ್ತದೆ. ಒಂದು ಗಿಡದಲ್ಲಿ ಪ್ರತಿ ಕಟಾವಿಗೆ ಕನಿಷ್ಠ 50ರಿಂದ 70 ಹಣ್ಣುಗಳು ದೊರೆಯುತ್ತವೆ. ವರ್ಷದಿಂದ ವರ್ಷಕ್ಕೆ ವೆಚ್ಚದ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಲಾಭ ಮಾತ್ರ ದುಪ್ಪಟ್ಟಾಗುತ್ತದೆ. ಬರದ ನಾಡಿನಲ್ಲಿ ಸ್ವಲ್ಪ ಪ್ರಮಾಣದ ನೀರಿನಲ್ಲಿ ಬೆಳೆಯಬಹುದು ಎಂದು ತಮ್ಮ ಅನುಭವ ಹಂಚಿಕೊಂಡರು.

‘ಡ್ರಾಗನ್ ಫ್ರೂಟ್‌ನಲ್ಲಿ ಖರ್ಚು ಕಡಿಮೆ. ನಾವು ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು, ಹೈನುಗಾರಿಕೆಯಿಂದ ಬರುವ ಸಾವಯುವ ಗೊಬ್ಬರವನ್ನು 40 ದಿನಗಳ ಕಾಲ ಅದು ಎರೆ ಹುಳಗಳು ತಯಾರಾಗುವರೆಗೆ ಕಾದು ಅದನ್ನು ಬಳಸುತ್ತೇವೆ. ಎರಡು ಎಕರೆಯ ಜಮೀನಿನಲ್ಲಿ ರೆಡ್‌ ಡ್ರಾಗನ್ ಫ್ರೂಟ್ ಬೆಳೆಯುತ್ತಿದ್ದೇವೆ.. ಡ್ಯಾಗನ್ ಫ್ರೂಟ್ ತಳಿಗಳಲ್ಲೇ ಇದಕ್ಕೆ ಹೆಚ್ಚು ಬೇಡಿಕೆ ಹಾಗೂ ಬೆಲೆ ಇದೆ. ಅಲ್ಲದೆ, ಇದು ಆರೋಗ್ಯಕ್ಕೂ ಉತ್ತಮವಾಗಿದೆ.’

- ಜೆ. ಸಿ. ಬಿ ನಾರಾಯಣಪ್ಪ ರೈತ