ಕವಿ, ನಾಟಕಕಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹುಯಿಲಗೋಳ ನಾರಾಯಣರಾಯರು ತಮ್ಮ ರಚನೆಗಳ ಮೂಲಕ ಕನ್ನಡಿಗರಲ್ಲಿ ನಾಡುಪ್ರೇಮ ಮತ್ತು ಸ್ವಾಭಿಮಾನವನ್ನು ಜಾಗೃತಗೊಳಿಸಿದರು.
ಕನ್ನಡಪ್ರಭ ವಾರ್ತೆ ಗದಗ
ಕವಿ, ನಾಟಕಕಾರ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹುಯಿಲಗೋಳ ನಾರಾಯಣರಾಯರು ತಮ್ಮ ರಚನೆಗಳ ಮೂಲಕ ಕನ್ನಡಿಗರಲ್ಲಿ ನಾಡುಪ್ರೇಮ ಮತ್ತು ಸ್ವಾಭಿಮಾನವನ್ನು ಜಾಗೃತಗೊಳಿಸಿದರು ಎಂದು ಸಾಹಿತಿ ಚಂದ್ರಶೇಖರ ವಸ್ತ್ರದ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹುಯಿಲಗೋಳ ನಾರಾಯಣರಾವ್ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ನಾರಾಯಣರಾಯರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸರ್ಕಾರ ಪ್ರಕಟಿಸಬೇಕು ಹಾಗೂ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾದಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಬಿ. ಹುಯಿಲಗೋಳ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಉನ್ನತಿ ಹಾಗೂ ಕನ್ನಡದ ಬೆಳವಣಿಗೆಗೆ ನಾರಾಯಣರಾಯರ ಕೊಡುಗೆ ಮಹತ್ವದ್ದು ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕುಮಾರವ್ಯಾಸ, ಚಾಮರಸ, ಹುಯಿಲಗೋಳ ನಾರಾಯಣರಾವ್, ಆಲೂರು ವೆಂಕಟರಾವ್ ಹಾಗೂ ದುರ್ಗಸಿಂಹ ಸೇರಿದಂತೆ ಪ್ರಮುಖ ಸಾಹಿತಿಗಳ ಹೆಸರಿನಲ್ಲಿ ಸರ್ಕಾರ ಟ್ರಸ್ಟ್ ಅಥವಾ ಪ್ರತಿಷ್ಠಾನಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.ಇದೇ ಸಂದರ್ಭ ಹಿರಿಯ ಕವಿ ಎ.ಎಸ್. ಮಕಾನದಾರ, ಎನ್‌ಸಿಸಿ ಲೆಫ್ಟಿನೆಂಟ್ ಕರ್ನಲ್ ಆಗಿ ಪದೋನ್ನತಿ ಹೊಂದಿದ ಡಾ. ಬಿ.ಎಸ್. ರಾಠೋಡ ಹಾಗೂ ಹುಯಿಲಗೋಳರ ಮೊಮ್ಮಗ ಡಾ. ವಾಸುದೇವರಾವ್ ಹುಯಿಲಗೋಳ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಾಹಿತಿ ಕೃಷ್ಣ ಕಟ್ಟಿ, ಪ್ರಾಂಶುಪಾಲೆ ಗಂಗೂಬಾಯಿ ಪವಾರ ಉಪಸ್ಥಿತರಿದ್ದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿ, ಡಿ.ಎಸ್. ಬಾಪುರಿ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.