ಸಾರಾಂಶ
ಶಿರಸಿ:
ಸ್ಥಳೀಯ ಐತಿಹಾಸಿಕ ಕಲ್ಯಾಣಿಯೊಂದು ದಶಕದಿಂದ ಕಸ, ಕಡ್ಡಿ, ಹೂಳು ತುಂಬಿ ಕಣ್ಮರೆಯಾಗುವ ಹಂತ ತಲುಪಿತ್ತು. ಆದರೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು ಕಲ್ಯಾಣಿಗೆ ಹೊಸ ಕಳೆ ಬಂದಿದೆ. ಇದೀಗ ಹುಲಿದೇವರ ಕಲ್ಯಾಣಿಯಲ್ಲಿ ಸ್ವಚ್ಛ ನೀರು ಸಂಗ್ರಹಗೊಂಡು, ಎಲ್ಲರನ್ನು ಆಕರ್ಷಿಸುತ್ತಿದೆ.ತಾಲೂಕಿನ ಇಟಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಗಾರ ಗ್ರಾಮದಲ್ಲಿ ಹುಲಿದೇವರ ಕಟ್ಟೆಯಿದ್ದು, ಪಕ್ಕದಲ್ಲೇ ಪವಿತ್ರ ಕಲ್ಯಾಣಿಯಿದೆ. ಹುಲಿದೇವರು ರಾತ್ರಿ ಇಲ್ಲಿಗೆ ನೀರು ಕುಡಿಯಲು ಬರುತ್ತಾರೆ ಎಂಬುದು ಸ್ಥಳೀಯರ ನಂಬಿಕೆ. ಪ್ರತಿ ವರ್ಷ ಕಾರ್ತೀಕೋತ್ಸವದಂದು ಹುಲಿದೇವರಿಗೆ ಈ ಕಲ್ಯಾಣಿಯಿಂದಲೇ ಜಲಾಭಿಷೇಕ ಮಾಡುವುದು ಇಲ್ಲಿಯ ವಿಶೇಷ. ಸಾವಿರಾರು ಜನ ಸೇರುವ ಈ ಕಾರ್ತೀಕೋತ್ಸವ ಎಲ್ಲೆಡೆ ಕಲಗಾರ ಕಟ್ಟೆ ಕಾರ್ತಿಕ ಎಂದೇ ಪ್ರಸಿದ್ಧಿ ಪಡೆದಿದೆ.
ಹೂಳಿನಿಂದ ಕಲ್ಯಾಣಿಯ ಸೆಲೆ ಮುಚ್ಚಿ, ನೀರಿಲ್ಲದೇ ಕಣ್ಮರೆಯಾಗುವ ಹಂತ ತಲುಪಿತ್ತು. ನರೇಗಾ ಯೋಜನೆಯಡಿ ಕಲ್ಯಾಣಿ ಪುನಶ್ಚೇತನಗೊಳಿಸಲು ಕೂಲಿ ಕಾರ್ಮಿಕರಿಗೆ ₹ 1.11 ಲಕ್ಷ ಹಾಗೂ ಸಾಮಗ್ರಿಗಳ ವೆಚ್ಚಕ್ಕೆ ₹ 2.94 ಲಕ್ಷ ಬಳಸಲಾಗಿದೆ. ಕಲ್ಯಾಣಿಯಲ್ಲಿ ಬೆಳೆದಿದ್ದ ಗಿಡ-ಗಂಟಿ ಸ್ವಚ್ಛಗೊಳಿಸಿ, ಹೂಳೆತ್ತಿ, ಅಡಿಪಾಯ ಭದ್ರಪಡಿಸಲಾಗಿದೆ. ಕಲ್ಯಾಣಿ ಸುತ್ತ ಲ್ಯಾಟ್‌ರೈಟ್ ಕೆಂಪುಕಲ್ಲಿನ ರಕ್ಷಣಾ ಗೋಡೆ ನಿರ್ಮಿಸಿ, ಗೇಟು ಅಳವಡಿಸಿ, ನೆಲಹಾಸು ಸಹ ಹಾಕಲಾಗಿದೆ.16ನೇ ಶತಮಾನದಲ್ಲಿ ಸೋಂದಾ ಅರಸರ ಕಾಲಾವಧಿಯಲ್ಲಿ ಈ ಕಲ್ಯಾಣಿ ನಿರ್ಮಿಸಿರಬಹುದು ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಕಲ್ಯಾಣಿಯ ತಳಭಾಗದ ರಚನೆ ಬಹುಭುಜಾಕೃತಿಯಲ್ಲಿದ್ದು, 8 ಶೃಂಗ ಬಿಂದುಗಳು 7 ಬಾಹುಗಳಿಂದ ಕೂಡಿದೆ. ನೋಡಲು ಚಿಕ್ಕದಾದರೂ 26 ಅಡಿ ಆಳದ, ಆಕರ್ಷಕವಾಗಿರುವ ಕಲ್ಯಾಣಿಯಲ್ಲಿ ವರ್ಷಪೂರ್ತಿ ನೀರಿರುವುದು ವಿಶೇಷ. ಕಾರ್ತಿಕೋತ್ಸವದಂದು ಇಲ್ಲಿ ಹುಲಿದೇವರಿಗೆ ಪೂಜೆ ಸಲ್ಲಿಸುವುದರಿಂದ ತಮ್ಮ ಜಾನುವಾರುಗಳು ರೋಗರುಜಿನೆಗಳಿಂದ ಸುರಕ್ಷಿತವಾಗಿರುತ್ತವೆ ಎಂಬ ನಂಬಿಕೆಯಿದೆ. ಇದೇ ಡಿ. 13ರಂದು ಕಾರ್ತಿಕೋತ್ಸವ ನಡೆಯಲಿದೆ.ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಅವರು ಸ್ವತಃ ಈ ಕಲ್ಯಾಣಿ ಅಭಿವೃದ್ಧಿಗೆ ಆಸಕ್ತಿ ವಹಿಸಿ, ಮಾರ್ಗದರ್ಶನ ನೀಡಿದ್ದರಿಂದ ನಾವೆಲ್ಲರೂ ಒಗ್ಗಟ್ಟಿನಿಂದ ಅತ್ಯಲ್ಪ ಕಡಿಮೆ ಅವಧಿಯಲ್ಲಿ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿದ್ದೇವೆ ಎನ್ನುತ್ತಾರೆ ಇಟಗುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ನಾಯ್ಕ.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮೀ, ಪಂಚಾಯಿತಿ ಸದಸ್ಯರು ಆಸಕ್ತಿ ವಹಿಸಿ ಕಲ್ಯಾಣಿ ಪುನಶ್ಚೇತನಗೊಳಿಸಿ, ಸಾರ್ವಜನಿಕ ಮಾಹಿತಿ ಫಲಕ ಅಳವಡಿಸುವ ಮೂಲಕ ಜನರಿಗೆ ಕಲ್ಯಾಣಿ ಮಹತ್ವ ತಿಳಿಸುತ್ತಿದ್ದಾರೆ. ಇದೊಂದು ದೇವರ ಕಲ್ಯಾಣಿ ಆದ್ದರಿಂದ ಪ್ರವಾಸಿಗರು ಸ್ಥಳದ ಪಾವಿತ್ರ್ಯತೆ ಕಾಪಾಡಬೇಕು ಎಂಬ ಮನವಿ ಗ್ರಾಮಸ್ಥರದ್ದು.ನರೇಗಾದಡಿ ಉತ್ತರ ಕನ್ನಡ ಜಿಲ್ಲೆಯ 69 ಕಲ್ಯಾಣಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿಕೊಂಡಿದ್ದು, ಈ ಪೈಕಿ 19 ಕಲ್ಯಾಣಿಗಳ ಕಾಮಗಾರಿಗಳು ಪೂರ್ಣಗೊಂಡಿವೆ. ಇದರಲ್ಲಿ ಶಿರಸಿ ತಾಲೂಕಿನ ಕಲಗಾರ ಗ್ರಾಮದ ಹುಲಿದೇವರ ಕಲ್ಯಾಣಿಯೂ ಒಂದಾಗಿದ್ದು, ಪುನಶ್ಚೇತನಗೊಂಡ ಹುಲಿದೇವರ ಕಲ್ಯಾಣಿಗೆ ನರೇಗಾದಿಂದ ಹೊಸ ಕಳೆ ಬಂದಿದೆ ಎಂದು ಜಿಪಂ ಸಿಇಒ ಈಶ್ವರ ಕಾಂದೂ ಹೇಳಿದ್ದಾರೆ.ಈಗಾಗಲೇ ಕಲ್ಯಾಣಿಗೆ ಜೀವಕಳೆ ಬಂದಿದ್ದು, ಮುಂದಿನ ದಿನಗಳಲ್ಲಿ ನರೇಗಾ ಅನುದಾನದಡಿ ಕಲ್ಯಾಣಿ ಆವರಣವನ್ನು ಮತ್ತಷ್ಟು ಸುಂದರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಕರೀಂ ಅಸದಿ ತಿಳಿಸಿದ್ದಾರೆ.