ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿನರೇಗಾ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿನಿಂದ 3 ವರ್ಷದ ಶಿಶುಗಳನ್ನು ವ್ಯವಸ್ಥಿತ ಪಾಲನೆ, ಪೋಷಣೆ ಮಾಡುವ ಉದ್ದೇಶದಿಂದ ಕೂಸಿನ ಮನೆ ಎಂಬ ವಿಶೇಷ ಯೋಜನೆ ಈಗಾಗಲೇ ಜಾರಿಗೊಳಿಸಲಾಗಿದೆ. ಈ ಯೋಜನೆ ಇದೀಗ ಕೂಲಿಕಾರ ಮಕ್ಕಳಿಗೆ ಆಸರೆಯಾಗಿದೆ. ಇಂಡಿ ತಾಲೂಕಿನ 38 ಗ್ರಾಪಂನಲ್ಲಿ 31 ಗ್ರಾಮಗಳಲ್ಲಿ ಕೂಸಿನ ಮನೆ ಯೋಜನೆ ಅನುಷ್ಠಾನಕ್ಕೆ ತಂದು 392 ಮಕ್ಕಳಿಗೆ ವರವಾಗಿದೆ.
ತಾಲೂಕಿನ 38 ಗ್ರಾಪಂಗಳಿದ್ದು, ಇದರಲ್ಲಿ 31 ಗ್ರಾಪಂಗಳಲ್ಲಿ ಕೂಸಿನ ಮನೆ ಯೋಜನೆ ಆರಂಭಿಸಿದ್ದು, ಸುಸಜ್ಜಿತ ಕಟ್ಟಡ, ಕಟ್ಟಡಕ್ಕೆ ಆಕರ್ಷಕ ಬಣ್ಣ, ವರ್ಣರಂಚಿತ ಚಿತ್ರಗಳು, ಮಕ್ಕಳಿಗೆ ಪೌಷ್ಠಿಕ ಆಹಾರ ಸೇರಿದಂತೆ ಎಲ್ಲ ಅನುಕೂಲತೆಗಳನ್ನು ನೀಡುವುದರ ಮೂಲಕ ಯೋಜನೆ ಯಶಸ್ವಿಗೆ ಕಾರಣರಾಗಿದ್ದಾರೆ. ಈಗಾಗಲೇ 31 ಕೂಸಿನ ಮನೆಗಳಲ್ಲಿ 392 ಮಕ್ಕಳು ಆರೈಕೆ ಮಾಡುತ್ತಿದ್ದಾರೆ.ಎಲ್ಲೆಲ್ಲಿ ಆರಂಭ?:
ಅಗರಖೇಡ, ಅಹಿರಸಂಗ, ಆಳೂರ, ಅಂಜುಟಗಿ, ಅಥರ್ಗಾ, ಬಬಲಾದಿ, ಬಳ್ಳೊಳ್ಳಿ, ಬಸನಾಳ, ಬೆನಕನಹಳ್ಳಿ, ಭತಗುಣಕಿ, ಸಂಗೋಗಿ, ಚವಡಿಹಾಳ, ಗುಬ್ಬೇವಾಡ, ಹಡಲಸಂಗ, ಹಂಜಗಿ, ಹಿಂಗಣಿ, ಹಿರೇಬೇವನೂರ ಹೊರ್ತಿ, ಇಂಗಳಗಿ, ಖೇಡಗಿ, ಕೊಳೂರಗಿ, ಲಚ್ಯಾಣ, ಲಾಳಸಂಗಿ, ನಿಂಬಾಳ ಕೆಡಿ, ಸಾಲೋಟಗಿ, ರೂಗಿ, ಶಿರಶ್ಯಾಡ, ತಡವಲಗಾ, ತಾಂಬಾ, ತೆನ್ನಿಹಳ್ಳಿ, ಝಳಕಿ ಗ್ರಾಪಂಗಳಲ್ಲಿ ಕೂಸಿಮನೆ ಯೋಜನೆ ಆರಂಭಿಸಲಾಗಿದೆ. ಇನ್ನುಳಿದ 7 ಗ್ರಾಪಂಗಳಲ್ಲಿ ಈ ಯೋಜನೆ ಆರಂಭಿಸಬೇಕಾಗಿದೆ.ಹೆಚ್ಚು ಮಾನವ ದಿನ ಸೃಜನೆ:
ಭೀಕರ ಬರಗಾಲದಲ್ಲಿ ಗುಳೆ ಹೋಗುವಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಗುಳೆ ಹೋಗುವುದನ್ನು ತಪ್ಪಿಸಿ, ದುಡಿಯುವ ಕೈಗಳಿಗೆ ಕೆಲಸ ನೀಡಿ, ಕೂಲಿಕಾರ್ಮಿಕರಿಗೆ ಆಸರೆಯಾಗಿದ್ದು ನರೇಗಾ. ಅಲ್ಲದೆ, ಕೂಲಿಕಾರರು ಕೆಲಸ ಮಾಡುವಾಗ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕೂಸಿನ ಮನೆ ನಿರ್ಮಿಸಿ ಅವರಿಗೆ ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೂಸಿನ ಮನೆ ಯೋಜನೆ ಆರಂಭಿಸಿದ್ದು ಇಂಡಿ ತಾಲೂಕಿನಲ್ಲಿ ಹೆಚ್ಚಾಗಿದೆ. ಬೇಸಿಗೆಯಲ್ಲಿ ದುಡಿಯುವ ಕೈಗಳಿಗೆ ಕೂಲಿಕೆಲಸ ನೀಡಿ, ಹೆಚ್ಚು ಮಾನವ ದಿನಗಳನ್ನು ಸೃಜಿಸಿದ ತಾಲೂಕು ಇಂಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇಬ್ಬರು ಆರೈಕೆದಾರರು:
ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರ ಮಕ್ಕಳಿಗೆ ಲಾಲನೆ, ಪಾಲನೆ ಮಾಡಲು ಪ್ರತಿ ಕೂಸಿನ ಮನೆಯಲ್ಲಿನ ಮಕ್ಕಳ ಆರೈಕೆಗಾಗಿ ಇಬ್ಬರು ಆರೈಕೆದಾರರನ್ನು ನೇಮಿಸಲಾಗಿದೆ. ನರೇಗಾ ಕೂಲಿ ಹಣದಲ್ಲಿಯೇ ಆರೈಕೆದಾರರಿಗೆ ಕೂಲಿ ನೀಡಲಾಗುತ್ತದೆ.ಏಪ್ರಿಲ್ ಹಾಗೂ ಮೇನಲ್ಲಿ ಭೀಕರ ಬಿಸಿಲು, ಕೂಲಿ ಕೆಲಸ ಇಲ್ಲದೆ, ಬಡ ಕುಟುಂಬಗಳು ದುಡಿಯಲು ಗುಳೆ ಹೋಗುವುದನ್ನು ತಪ್ಪಿಸಲು 1.57 ಲಕ್ಷ ಕೂಲಿ ದಿನಗಳನ್ನು ಸೃಷ್ಟಿ ಮಾಡುವ ಗುರಿ ಹೊಂದಲಾಗಿದ್ದು, ಇದರಲ್ಲಿ ಇಂಡಿ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿನ ಒಟ್ಟು 1.49 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗಿದೆ(ಮಾನವ ದಿನಗಳು). ಇದರಲ್ಲಿ ಶೇ.53.07 ಮಹಿಳೆಯರು ಕೂಲಿಕೆಲಸ ಪಡೆದುಕೊಂಡಿದ್ದು, ಪುರುಷರಿಗಿಂತ ಶೇ. 3.07 ಮಹಿಳೆಯರು(82 ಸಾವಿರ ಮಹಿಳೆಯರು) ಕೂಲಿ ಕೆಲಸ ಪಡೆದುಕೊಂಡಿದ್ದಾರೆ.
ಉದ್ಯೋಗ ಸೃಷ್ಟಿ(ಮಾನವ ದಿನಗಳು) ಮಾಡುವುದರ ಜೊತೆಗೆ ಕೂಸಿನ ಮನೆಯ ಯೋಜನೆ ಅನುಷ್ಠಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿಯೇ ಇಂಡಿ ತಾಲೂಕು ಉತ್ತಮ ಸಾಧನೆ ಮಾಡಿ, ಇತರೇ ತಾಲೂಕುಗಳಿಗೆ ಮಾದರಿಯಾಗಿದೆ. ಇದಷ್ಟೇ ಅಲ್ಲದೇ ಕೂಲಿಕಾರರಿಗೆ ಕೂಸಿನ ಮನೆ ತುಂಬಾ ಅನುಕೂಲವಾಗಿದೆ.---
ಕೂಸಿನ ಮನೆಯಲ್ಲಿ ಪೌಷ್ಟಿಕ ಆಹಾರ:ಕೂಸಿನ ಮನೆಯಲ್ಲಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮಕ್ಕಳಿಗೆ ಊಟ, ಗಂಜಿ, ಹಾಲು, ಬಿಸ್ಕಿಟ್, ಮಜ್ಜಿಗೆ, ಜೀನಿಪೌಡರ್, ದ್ವಿದಳ ಧಾನ್ಯದ ಆಹಾರ, ಬಾಳೆಹಣ್ಣು ಸೇರಿದಂತೆ ಮಕ್ಕಳಿಗೆ ಬೇಕಾಗುವ ಪೌಷ್ಟಿಕಾಂಶಯುಳ್ಳ ಆಹಾರವನ್ನು ಕೂಸಿನ ಮನೆಯಲ್ಲಿ ಆರೈಕೆ ಪಡೆಯುತ್ತಿರುವ ಮಕ್ಕಳಿಗೆ ನೀಡಲಾಗುತ್ತಿದೆ.
--ಮಕ್ಕಳಿಗೆ ವಿವಿಧ ಆಟಿಕೆ
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಅವರ ಅಳುವನ್ನು ತಡೆಯಲು ಆಟಿಕೆ ಸಾಮಗ್ರಿಗಳು, ಕುಳಿತುಕೊಳ್ಳುವ ಸಣ್ಣ ಕುರ್ಚಿ, ಟೇಬಲ್ ಸೇರಿದಂತೆ ವಿವಿಧ ಆಟಿಕೆಯ ಸಾಮಗ್ರಿಗಳು ಕೂಸಿನ ಮನೆಯಲ್ಲಿ ಅಳವಡಿಸಲಾಗಿದೆ.------
ಕೋಟ್....ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವುದರ ಜೊತೆಗೆ ದುಡಿಯಲು ಬಂದಿರುವ ಕೂಲಿಕಾರ್ಮಿಕರ ಮಕ್ಕಳಿಗೆ ಆರೈಕೆ ಮಾಡಲು ತಾಲೂಕಿನ 38 ಗ್ರಾಪಂಗಳಲ್ಲಿ 31 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆ ಯೋಜನೆ ಅನುಷ್ಠಾನಗೊಂಡಿವೆ. 392 ಮಕ್ಕಳು ಕೂಸಿನ ಮನೆಯಲ್ಲಿ ಆರೈಕೆ ಪಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಂಡಿ ತಾಲೂಕು ಮಾನವ ದಿನಗಳ ಸೃಷ್ಟಿ, ಕೂಸಿನ ಮನೆ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ ಮಾಡಿದೆ. ಗುರಿಗಿಂತ ಹೆಚ್ಚು ಸಾಧನೆ ಮಾಡಿದೆ.
-ನೀಲಗಂಗಾ ಬಬಲಾದಿ, ಇಒ, ತಾಪಂ, ಇಂಡಿ.---
ನರೇಗಾ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲೆಗಳ ಕಾಂಪೌಂಡ್, ಆಟದ ಮೈದಾನ, ಬಿಸಿಯೂಟದ ಕೋಣೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ಕೃಷಿ ಹೊಂಡಗಳ ನಿರ್ಮಾಣ, ಹೊಸ ಕೆರೆಗಳ ನಿರ್ಮಾಣ ಸೇರಿದಂತೆ ನರೇಗಾದಲ್ಲಿ ಇಂಡಿ ತಾಲೂಕು ಮುಂಚೂಣಿಯಲ್ಲಿದೆ. ಕೂಸಿನ ಮನೆ ಯೋಜನೆ ಆರಂಭ ಕಾರ್ಯದಲ್ಲಿಯೂ ಇಂಡಿ ಮುಂದೆ ಇದೆ. ಬೇಸಿಗೆಯಲ್ಲಿ ಕೂಲಿಕಾರ್ಮಿಕರು ಗೂಳೆ ಹೋಗುವುದನ್ನು ತಪ್ಪಿಸಲು ಹೆಚ್ಚು ಮಾನವ ದಿನಗಳ ಸೃಷ್ಟಿಸಿ, ದುಡಿಯುವ ಕೈಗಳಿಗೆ ಕೆಲಸ ನೀಡಲಾಗಿದೆ. ನರೇಗಾದಲ್ಲಿ ಇಂಡಿ ತಾಲೂಕು ಉತ್ತಮ ಸಾಧನೆ ಮಾಡಿದೆ.-ಸಂಜಯ ಖಡಗೇಕರ, ಎಡಿ, ನರೇಗಾ.