ಸಾರಾಂಶ
ಹಳ್ಳಿಗಳೇ ದೇಶದ ಜೀವಾಳವಾಗಿದ್ದು, ಹಳ್ಳಿಗಳು ಪ್ರಗತಿ ಪಥದಲ್ಲಿ ಸಾಗಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಹಳ್ಳಿಗಳೇ ದೇಶದ ಜೀವಾಳವಾಗಿದ್ದು, ಹಳ್ಳಿಗಳು ಪ್ರಗತಿ ಪಥದಲ್ಲಿ ಸಾಗಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ ಹೇಳಿದರು.ಅವರು ತಾಲೂಕಿನ ಬಿದನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಿದನೂರು ಗ್ರಾಮದ ಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನವು ನಮಗೆ ನೀಡಿರುವ ಮತದಾನದ ಎಂಬ ಮೌಲ್ಯಯುತ ಹಕ್ಕನ್ನು ವಿವೇಚನೆಯಿಂದ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಚಲಾಯಿಸಬೇಕು. ಮತದಾನ ಮಾಡುವುದು ಪವಿತ್ರ ಕಾರ್ಯವೆಂದು ಭಾವಿಸಿ ನೀವು ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಕೂಡ ಮತದಾನ ಮಾಡಬೇಕು. ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಬೇಸಿಗೆ ಕಾಲ ಇರುವುದರಿಂದ ನರೇಗಾ ಕೂಲಿಕಾರರು 3 ತಿಂಗಳ ಕಾಲ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿದರೆ ಕೂಲಿ ಮಾಡಿ ಬರುವ ಹಣದಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕೂಲಿಕಾರರು ಸರಿಯಾಗಿ ಕೆಲಸ ನಿರ್ವಹಿಸಿ, ಸಂಪೂರ್ಣ ಕೂಲಿ ಹಣ ಪಡೆದುಕೊಳ್ಳಬೇಕು ಎಂದು ಹೇಳಿದರು.ಇದೇ ವೇಳೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ವೇಳೆ ಗ್ರಾ ಪಂ ಅಧ್ಯಕ್ಷ ಶಿವಾನಂದ ಅಭಿವೃದ್ಧಿ ಅಧಿಕಾರಿ ಅಂಬಾರಾಯ ಕಟ್ಟಿಮನಿ, ಮಾಜಿ ಅಧ್ಯಕ್ಷ ಅರುಣ, ತಾಂತ್ರಿಕ ಸಂಯೋಜಕಿ ಮಾಲಾಶ್ರೀ, ತಾಂತ್ರಿಕ ಸಹಾಯಕ ಅರವಿಂದ ಮನೋಳಿ, ಐಇಸಿ ಸಂಯೋಜಕಿ ಶೋಭಾ ಕಣಮಸ್ಕರ, ಕೂಲಿ ಸಹಾಯಕ ಹಯ್ಯಾಳಿ ಸೇರಿ ಕಾಯಕ ಬಂಧುಗಳು ಕೂಲಿ ಕಾರ್ಮಿಕರಿದ್ದರು.