ಸಾರಾಂಶ
ನರೇಗಲ್ಲ: ಕಾಲೇಜಿನ ಆವರಣದಲ್ಲಿ ತಳಿರು-ತೋರಣ, ಅಡಕೆ ಹೊಂಬಾಳೆಯಲ್ಲಿ ಸಿಂಗರಿಸಿದ ಕಳಸ, ಎತ್ತು, ಬಂಡಿ, ಕೂರುಗಿ, ನಗಾ, ಒಣಕೆ, ವಿವಿಧ ಧಾನ್ಯಗಳ ರಾಶಿ, ಸೇರು, ಬೆಲ್ಲ, ವಿವಿಧ ಪೂಜಾ ಸಾಮಗ್ರಿಗಳು ಒಂದೆಡೆಯಾದರೆ, ಸೀರೆಯುಟ್ಟ ನೀರೆಯರ ವಯ್ಯಾರ. ಗತಕಾಲದ ವೈಭವಕ್ಕೆ ಮರಳಿದಂತೆ ಭಾಸವಾಗುವ ದೃಶ್ಯ ಕಂಡುಬಂದಿದ್ದು ನರೇಗಲ್ಲ ಪಟ್ಟಣದಲ್ಲಿ...
ಇಲ್ಲಿಯ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಜಾನಪದ ಉತ್ಸವ ಎಲ್ಲರ ಗಮನ ಸೆಳೆಯಿತು. ಗ್ರಾಮೀಣ ಭಾಗದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಗ್ರಾಮೀಣ ಸೊಗಡನ್ನು ಜೀವಂತವಾಗಿಡುವ ಪ್ರಯತ್ನವನ್ನು ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮಾಡಿದರು. ಅವರ ಸಂಭ್ರಮ ನೋಡಲು ಮಜರೆ, ಹಳ್ಳಿ, ಗ್ರಾಮಸ್ಥರು, ಪಾಲಕರು, ಸ್ಥಳೀಯರು ಬಂದಿದ್ದು ವಿಶೇಷ.ಸಮೀಪದ ಕೋಡಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಎದುರಿನಿಂದ ಪದವಿ ಕಾಲೇಜಿನ ವರೆಗೆ ಮೆರವಣಿಗೆ ನಡೆಯಿತು. ಪ್ರಾಧ್ಯಾಪಕರು ಎತ್ತಿನ ಬಂಡಿಯಲ್ಲಿ ಬಂದರೆ, ಅದರ ಮುಂದೆ ದೇಶಿ ಉಡುಪಿನಲ್ಲಿ ಕುಂಭಹೊತ್ತ ವಿದ್ಯಾರ್ಥಿನಿಯರು ಜಾನಪದ ಹಾಡುಗಳನ್ನು ಹಾಡುತ್ತ ಸಾಗಿದರು. ಮೆರವಣಿಗೆ ಕಾಲೇಜು ತಲುಪಿದ ಆನಂತರ ಪೂಜೆ ಮಾಡಿ, ಆರತಿ ಬೆಳಗಿ ಸ್ವಾಗತಿಸಲಾಯಿತು.
ಗದಗ ಎಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಬಾಹುಬಲಿ ಜೈನರ ಮಾತನಾಡಿ, ಹಳ್ಳಿಗರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದ ಈ ಮಹಾವಿದ್ಯಾಲಯವು ಗ್ರಾಮೀಣ ಸೊಗಡಿನಿಂದ ಕಂಗೊಳಿಸಿದೆ. ಪ್ರತಿ ವಿದ್ಯಾರ್ಥಿ ತನ್ನ ಮನೆಯ ಕಲೆ, ಸಂಸ್ಕೃತಿ, ಉಡುಪು ಪ್ರದರ್ಶಿಸಲು ವೇದಿಕೆ ಮಾಡಿಕೊಟ್ಟಿದೆ. ಆದರೆ ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು.ರೈತ ಭೂಮಿ ನಂಬಿ ಬೀಜ ಬಿತ್ತುತ್ತಾನೆ, ಆದರೆ ಅವನನ್ನು ಪ್ರಕೃತಿ ಕೈಬಿಡುವುದಿಲ್ಲ. ಫಲ ಬರುವ ವರೆಗೆ ತಾಳ್ಮೆಯಿಂದ ಕಾಯುತ್ತಾನೆ. ಹಾಗೆ ವಿದ್ಯಾರ್ಥಿಗಳು ಶಿಕ್ಷಕರನ್ನು ನಂಬಿ ಕಲಿಯಬೇಕು, ಅವರನ್ನು ಗೌರವಿಸಬೇಕು, ತಾಳ್ಮೆಯಿಂದ ಗುರುಗಳು ಹೇಳಿದ ಮಾತನ್ನು ಪಾಲಿಸಬೇಕು, ಆಗ ಫಲ ಸಿಗುತ್ತದೆ ಎಂದರು.
ಪ್ರಾಂಶುಪಾಲ ಎಸ್.ಎಲ್. ಗುಳೇದಗುಡ್ಡ ಮಾತನಾಡಿ, ಜನರ ನಡುವೆ ಬದುಕುವ ಕಲೆಯನ್ನು ಕಲಿಸಿಕೊಡುವ ಶಿಕ್ಷಣವೇ ಜಾನಪದ ಸಂಸ್ಕೃತಿಯಾಗಿದೆ. ಜಾನಪದಕ್ಕೆ ಜಾತಿ, ಮತ, ಪಂಥ, ಧರ್ಮದ ಭೇದವಿಲ್ಲ. ಎಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವ ನೀತಿಯನ್ನು ತಿಳಿಸುತ್ತದೆ ಎಂದರು.ವೇದಿಕೆ ಕಾರ್ಯಕ್ರಮದ ಆನಂತರ ಹಳ್ಳಿಸೊಗಡಿನ ಸ್ಪರ್ಧೆಗಳು, ಜಾನಪದ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.
ಶಿವಮೂರ್ತಿ ಕುರೇರ, ಎಸ್.ಎಸ್. ಸೂಡಿ, ಸುನಂದಾ ಮುಂಜಿ, ಜಯಶ್ರೀ ಮುತಗಾರ, ಅಂಜನಮೂರ್ತಿ ಕೆ.ಎಚ್., ಅನಿಲಕುಮಾರ, ಶಶಿಕಲಾ ವಿ.ಎಸ್., ಕೆ.ಆರ್. ಪಾಟೀಲ, ನಸರೀನಾಬಾನು ಜಮಾದಾರ, ವಿರೂಪಾಕ್ಷ, ಶಿವಪ್ಪ ಕುರುಬರ, ಅಯ್ಯಪ್ಪ, ಎಂ.ಎಫ್. ತಹಶೀಲ್ದಾರ, ವಿ.ಸಿ. ಇಲ್ಲೂರ, ವಿ.ಕೆ. ಸಂಗನಾಳ, ಕೆ.ಎನ್. ಕಟ್ಟಿಮನಿ, ಕಿರಣ ರಂಜಣಗಿ, ಎನ್.ಎಸ್. ಹೊನ್ನೂರ, ಚಂದ್ರು ಸಂಶಿ, ಬಸವರಾಜ ಎಸ್. ಮಡಿವಾಳರ, ಬಿ.ಕೆ. ಕಂಬಳಿ, ಶಶಿಕಲಾ ಕಿನ್ನಾಳ, ವಿನಯಶ್ರೀ ಪರಯ್ಯನಮಠ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಶಂಕರ ನರಗುಂದ, ಸಿದ್ದು ನವಲಗುಂದ, ಮಲ್ಲಪ್ಪ ಸಮಗಂಡಿ ಇದ್ದರು.