ಸಾರಾಂಶ
- ನಾಯಕರೇ ಇಲ್ಲದ ಕಾಂಗ್ರೆಸ್ ಒಕ್ಕೂಟದಲ್ಲಿ ನಾಯಕತ್ವಕ್ಕೆ ಕಚ್ಚಾಟ: ಲೇವಡಿ । ಮತಯಾಚನೆಗೆ ಕರುಣಾಕರ ರೆಡ್ಡಿ ಸಾಥ್
- - -ಕನ್ನಡಪ್ರಭ ವಾರ್ತೆ, ದಾವಣಗೆರೆ/ಹೊನ್ನಾಳಿ
ದೇಶ ಸುರಕ್ಷತೆ, ಸುಭೀಕ್ಷೆಯಿಂದ ಇರಬೇಕೆಂದರೆ ದೇಶದ ಕೀಲಿ ಕೈ ಸುಭದ್ರವಾದ ನರೇಂದ್ರ ಮೋದಿ ಅವರ ಕೈಗೆ ಕೊಡಬೇಕು. ನೂರಾರು ಕೋಟಿ ಭಾರತೀಯರಿಗೆ ಮೋದಿ ನಾಯಕರಾದರೆ, ಕಾಂಗ್ರೆಸ್‌ನ ಐಎನ್‌ಡಿಐಎ ಒಕ್ಕೂಟಕ್ಕೆ ನಾಯಕರೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು.ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಹರಪನಹಳ್ಳಿ, ಹೊನ್ನಾಳಿ ಹಾಗೂ ಮಲೇಬೆನ್ನೂರು ಪಟ್ಟಣಗಳಲ್ಲಿ ಗುರುವಾರ ಬೃಹತ್ ರೋಡ್ ಶೋ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಒಕ್ಕೂಟದಲ್ಲಿ ನಾನು ನಾಯಕ, ನಾನೇ ನಾಯಕ ಅಂತಾ ಕಚ್ಚಾಡುತ್ತಿದ್ದರೆ. ನಾವು ಮಾತ್ರ ನರೇಂದ್ರ ಮೋದಿಯವರೇ ನಮ್ಮ ನಾಯಕರೆಂದು, ಮುಂದಿನ ಪ್ರಧಾನಿ ಸಹ ಮೋದಿಯೆಂದು ಘಂಟಾಘೋಷವಾಗಿ ಹೇಳುತ್ತೇವೆ ಎಂದರು.
ಇಡೀ ದೇಶದಲ್ಲಿ ಮೋದಿಗೆ ಎದುರಾಳಿ ನಾಯಕರೇ ಇಲ್ಲ. ಮೋದಿ ಆಡಳಿತವನ್ನು ಕಾಂಗ್ರೆಸ್ಸಿನ ಅದೆಷ್ಟೋ ನಾಯಕರೇ ಒಪ್ಪಿದ್ದಾರೆ. ಆದರೆ, ಯಾರೂ ರಾಜಕೀಯ ಕಾರಣಕ್ಕಾಗಿ ಬಹಿರಂಗವಾಗಿ ಹೇಳುತ್ತಿಲ್ಲವಷ್ಟೇ. ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರರ ಗೆಲುವು ಖಚಿತ. ನರೇಂದ್ರ ಮೋದಿ ಪ್ರಧಾನಿ ನಿಶ್ಚಿತ. ಇಡೀ ದೇಶವೇ ಇಂದು ಮತ್ತೆ ನರೇಂದ್ರ ಮೋದಿ ಅವರ ಸುಭದ್ರ, ಬಲಿಷ್ಠ ಕೈಗಳಿಗೆ ಮತ್ತೆ ಆಡಳಿತ ನೀಡುವ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.ಕಾಂಗ್ರೆಸ್ಸಿಗರು ಉಚಿತ ವಿದ್ಯುತ್ ನೀಡುತ್ತೇವೆ ಎನ್ನುತ್ತಾರೆ. ಅದೇ 6 ದಶಕ ಆಳಿದ್ದ ಕಾಂಗ್ರೆಸ್ ಸಾವಿರಾರು ಹಳ್ಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಅಂತಹ 28 ಸಾವಿರ ಹಳ್ಳಿಗೆ, ಆ ಹಳ್ಳಿಗಳ ಮನೆ ಮನೆಗೆ ವಿದ್ಯುತ್ ಪೂರೈಕೆ ಮಾಡಲು ನರೇಂದ್ರ ಮೋದಿ ಬರಬೇಕಾಯಿತು. ಜನೌಷಧಿ ಕೇಂದ್ರದ ಮೂಲಕ ₹10ಕ್ಕೆ ಸಿಗುತ್ತಿದ್ದ ಔಷಧ ₹1ಕ್ಕೆ ಸಿಗುವಂತೆ ಮಾಡಿದ್ದು ಮೋದಿ. ಆರು ದಶಕದಲ್ಲಿ ಕಾಂಗ್ರೆಸ್ ಎಷ್ಟು ಕಿಮೀ ರಾಷ್ಟ್ರೀಯ ಹೆದ್ದಾರಿ ಇತ್ತು. 10 ವರ್ಷದಲ್ಲಿ ಮೋದಿ ಆಳ್ವಿಕೆಯಲ್ಲಿ ಎಷ್ಟು ಕಿಮೀ ರಾಷ್ಟ್ರೀಯ ಹೆದ್ದಾರಿಯಾಗಿವೆ, ರೈಲು ಮಾರ್ಗ ಉನ್ನತಿಯಾಗಿವೆ ಎಂಬುದು ಗಮನಿಸಲಿ. ರೈಲ್ವೆ ಮಾರ್ಗ, ರೈಲು ಮಾರ್ಗಗಳ ಉನ್ನತೀಕರಣವಾಗಿದೆ. ವಂದೇ ಭಾರತ್ ರೈಲು ಸೇವೆ ಆರಂಭವಾಗಿವೆ. ದೇಶಾದ್ಯಂತ 74 ವಿಮಾನ ನಿಲ್ದಾಣ ಇದ್ದವು. 10 ವರ್ಷದಲ್ಲಿ ಹೊಸದಾಗಿ 74 ವಿಮಾನ ನಿಲ್ದಾಣ ಆಗಿವೆ. ಎಂಬಿಬಿಎಸ್ ಸೀಟು 57 ಸಾವಿರ ಇದ್ದುದು, 10 ವರ್ಷದಲ್ಲಿ 1.57 ಲಕ್ಷ ಸೀಟ್ ಆಗಿವೆ. 1 ಲಕ್ಷ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹೆಚ್ಚುವರಿಯಾಗಿ ಸಿಗುತ್ತಿದೆ ಎಂದರು.
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ನಾನು, ಸಿದ್ದೇಶಣ್ಣ ಹರಪನಹಳ್ಳಿ ತಾಲೂಕಿಗೆ ಸಾಕಷ್ಟು ಅನುದಾನ ತಂದು, ಅಭಿವೃದ್ಧಿ ಕೈಗೊಂಡಿದ್ದೇವೆ. ಆದರೆ, ಕಾಂಗ್ರೆಸ್ಸಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಎಷ್ಟು ಸಲ ಇಲ್ಲಿಗೆ ಬಂದಿದ್ದಾರೆ? ಏನು ಅನುದಾನ ತಂದಿದ್ದಾರೆ? ಎಸ್.ಎಸ್. ಮಲ್ಲಿಕಾರ್ಜುನಗೆ ತಾಕತ್ತಿದ್ದರೆ ಹರಪನಹಳ್ಳಿ ತಾಲೂಕಿಗೆ ನೀಡಿದ ಕೊಡುಗೆ ಏನೆಂಬುದನ್ನು ಜನರ ಮುಂದಿಡಲಿ. ಹರಪನಹಳ್ಳಿ ತಾಲೂಕಿನಿಂದ ಗಾಯತ್ರಿ ಅಕ್ಕನಿಗೆ ಕನಿಷ್ಠ 1 ಲಕ್ಷ ಮತಗಳ ಮುನ್ನಡೆ ಕೊಟ್ಟು, ಗೆಲ್ಲಿಸೋಣ ಎಂದು ಹೇಳಿದರು.ಪಕ್ಷದ ಮುಖಂಡರು, ಗ್ರಾಪಂ ಸದಸ್ಯರು, ಗ್ರಾಮಗಳ ಮುಖಂಡರು, ಕಾರ್ಯಕರ್ತರು ಇದ್ದರು.
- - - ಕೋಟ್ಸ್ನರೇಂದ್ರ ಮೋದಿಯವರ 10 ವರ್ಷದ ಆಡಳಿತ, ಸಂಸದ ಸಿದ್ದೇಶಣ್ಣನ 2 ದಶಕಗಳ ಅಭಿವೃದ್ಧಿ ಕೆಲಸಗಳು ಗಾಯತ್ರಿ ಸಿದ್ದೇಶ್ವರರ ಗೆಲುವಿಗೆ ಶ್ರೀರಕ್ಷೆಯಾಗಿವೆ. ನಾನು ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಗಾಯತ್ರಮ್ಮ ಅವರ ಪರ ಅಹೋರಾತ್ರಿ ಕೆಲಸ ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಮುನ್ನಡೆಯೊಂದಿಗೆ ಗೆಲ್ಲುವ ಅಭ್ಯರ್ಥಿ ಯಾರಾದರೂ ಇದ್ದರೆ ಅದು ಗಾಯತ್ರಿ ಸಿದ್ದೇಶ್ವರ ಎಂಬುದರಲ್ಲಿ ಎರಡು ಮಾತಿಲ್ಲ
- ಎಂ.ಪಿ.ರೇಣುಕಾಚಾರ್ಯ. ಮಾಜಿ ಸಚಿವ- - -
ಟಾಪ್ ಕೋಟ್
ಇಡೀ ದಾವಣಗೆರೆ ಲೋಕಸಭಾ ಕ್ಷೇತ್ರದ ಜನ ನನ್ನನ್ನು ಮನೆ ಮಗಳಂತೆ ಆದರಸಿ, ಸ್ವಾಗತಿಸುತ್ತಿದ್ದಾರೆ. ಮತದಾನಕ್ಕೆ ಇನ್ನೂ 4 ದಿನ ಮಾತ್ರ ಬಾಕಿ ಇದೆ. ನಾನು ಈಗಾಗಲೇ ಇಡೀ ಲೋಕಸಭಾ ಕ್ಷೇತ್ರ ಓಡಾಡಿದ್ದೇನೆ. ಎಲ್ಲೆಡೆ ಗೆಲುವಿನ ಮಡಿಲಕ್ಕಿ ತುಂಬಿ ಕಳುಹಿಸುತ್ತಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ. ನಿಮ್ಮೆಲ್ಲರ ಪ್ರೀತಿ ನೋಡಿದರೆ ನನ್ನ ಕಣ್ಣುಗಳು ಒದ್ದೆಯಾಗುತ್ತವೆ. ನಿಮ್ಮ ಪ್ರೀತಿ, ವಿಶ್ವಾಸ, ನಂಬಿಕೆಗೆ ಚ್ಯುತಿ ಆಗದಂತೆ ಋಣ ತೀರಿಸುವೆ- ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ
- - - -2ಕೆಡಿವಿಜಿ12, 13:ಹರಪನಹಳ್ಳಿಯಲ್ಲಿ ಗುರುವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಬೃಹತ್ ರೋಡ್ ಶೋ ನಡೆಸಿದರು. ಮಾಜಿ ಸಚಿವ ಕರುಣಾಕರ ರೆಡ್ಡಿ ಇತರರು ಇದ್ದರು.
-2ಕೆಡಿವಿಜಿ14, 15:ಹರಪನಹಳ್ಳಿಯಲ್ಲಿ ಗುರುವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಬೃಹತ್ ರೋಡ್ ಶೋನಲ್ಲಿ ಸೇರಿದ್ದ ಜನರು.