ಸ್ಥಳೀಯ ಗ್ರಾಪಂನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು 2005 ರಲ್ಲಿ ಈ ಯೋಜನೆಯನ್ನು ಆರಂಭಿಸಿದ್ದರು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಯೋಜನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಮನರೇಗಾ ಯೋಜನೆಯನ್ನು ಸ್ಥಗಿತಗೊಳಿಸುವ ತಂತ್ರ ಮಾಡುತ್ತಿದ್ದಾರೆ. ಗಾಂಧಿಯವರ ಹೆಸರನ್ನು ಮರೆಯುವ ಉದ್ಧೇಶದಿಂದ ವಿಜಿ ರಾಮ್ ಜಿ ಯೋಜನೆಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ನಾರಾಯಣಸ್ವಾಮಿ ಆರೋಪಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಗ್ರಾಪಂನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು 2005 ರಲ್ಲಿ ಈ ಯೋಜನೆಯನ್ನು ಆರಂಭಿಸಿದ್ದರು. ಇದರ ವಿರುದ್ಧ ಹೋರಾಟ ಮಾಡಲು ಪಕ್ಷದ ಎಲ್ಲ ಮುಖಂಡರು ಸಿದ್ಧರಾಗಿದ್ದಾರೆ. ಇವರೆಲ್ಲರ ಕೈ ಬಲಪಡಿಸುವ ಉದ್ದೇಶದಿಂದ ಗ್ರಾಮೀಣ ಮಟ್ಟದಲ್ಲಿ ಜನತೆಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.ಪ್ರಚಾರ ಸಮಿತಿಯ ಮುಖ್ಯಸ್ಥರಾದ ಜಾನಿ ಮಾತನಾಡಿ, ಸುಮಾರು 20 ವರ್ಷಗಳ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಹೆಸರಿನಲ್ಲಿ ಆರಂಭವಾದ ಯೋಜನೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿದೆ. ಇದಕ್ಕೆ ಮಹಾತ್ಮ ಗಾಂಧಿಯವರ ಹೆಸರನ್ನು ಸೂಚಿಸುವ ಮೂಲಕ ಯೋಜನೆಗೆ ಮತ್ತಷ್ಟು ಶಕ್ತಿ ನೀಡಲಾಯಿತು. ದೇಶದಲ್ಲಿನ ಪ್ರತೀ ಗ್ರಾಮದ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಿತ್ತು. ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ಬೃಹತ್ ಯೋಜನೆ ಇದಾಗಿತ್ತು. ಇದರಲ್ಲಿ ಪ್ರಸ್ತುತ ದೇಶದಲ್ಲಿ 1,216 ಲಕ್ಷ ಕಾರ್ಮಿಕರು ಹಾಗೂ ರಾಜ್ಯದಲ್ಲಿ 6.21 ಕೋಟಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಶೇ 11ರಷ್ಟು ಪರಿಶಿಷ್ಟ ಪಂಗಡ ಮತ್ತು ಶೇ. 17ರಷ್ಟು ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಉದ್ದೇಶದಿಂದ ಈ ಯೋಜನೆಯು ಬದಲಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದರು.ಮಹಾತ್ಮ ಗಾಂಧಿ ಈ ದೇಶದ ನಿಜವಾದ ಅಸ್ಮಿತೆಯುಳ್ಳ ಆಸ್ತಿಯಾಗಿದ್ದಾರೆ. ಅಂತಹ ಮಹಾನ್ ನಾಯಕನ ಹೆಸರಿಗೆ ಚ್ಯುತಿ ಬರುವಂತೆ ಮಾಡುವ ಪ್ರಯತ್ನ ಸರಿಯಲ್ಲ. ಕಾಂಗ್ರೆಸ್ ಜಾರಿಗೆ ತಂದಿರುವ ಸುಮಾರು 30 ಕ್ಕೂ ಹೆಚ್ಚು ಯೋಜನೆಯನ್ನು ಬಿಜೆಪಿ ಸರ್ಕಾರವು ಬದಲಿಸುವ ಹುನ್ನಾರ ಮಾಡುತ್ತಿದ್ದಾರೆ. ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾತೂರಾಮ್ ಗೂಡ್ಸೆ ಹೆಸರನ್ನು ಬೆಳಕಿಗೆ ತರುವ ಪ್ರಯತ್ನದಲ್ಲಿ ಈ ಕೆಲಸಕ್ಕೆ ಮುಂದಾಗಿದ್ದಾರೆ. ವಿಜಿ ರಾಮ್ ಜಿ ಯೋಜನೆಯಲ್ಲಿ ಬರುವ ರಾಮ ದಶರಥನ ಮಗನಲ್ಲ, ನಾಥೂರಾಮ್ ಗೂಡ್ಸೆ ಹೆಸರಷ್ಟೆ. ರಾಮರಾಜ್ಯದ ಪರಿಕಲ್ಪನೆಯನ್ನು ಹೊಂದಿರುವ ಮಹಾತ್ಮನ ಹೆಸರಿಗೆ ಮಸಿ ಬಳಿಯುವ ಕೆಲಸ ನಿಜಕ್ಕೂ ಅವೈಜ್ಞಾನಿಕವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪ್ರಚಾರ ಸಮಿತಿಯ ನಗರ ಘಟಕದ ಅಧ್ಯಕ್ಷರಾದ ವೆಂಕಟಾದ್ರಿ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಕಾರ್ಮಿಕರ ಬೆನ್ನೆಲುಬಾಗಿರುವ ಮನರೇಗಾ ಯೋಜನೆಯಲ್ಲಿ ಗಾಂಧೀಜಿಯವರ ಹೆಸರನ್ನು ಕೈಬಿಡುವ ಕಾರ್ಯ ಅವೈಜ್ಞಾನಿಕವಾಗಿದೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿದೆ. ಇದೊಂದು ಬಿಜೆಪಿಯವ ಧಮನೀಯ ಕಾರ್ಯವಾಗಿದೆ. ಇದರ ವಿರುದ್ಧವಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಮಂಜುನಾಥ್, ಮುಖಂಡರಾದ ನಾರಾಯಣಸ್ವಾಮಿ, ಕಂಬಕ್ಕ ವೆಂಕಟೇಶ್, ಸೇರಿದಂತೆ ಇತರರು ಭಾಗವಹಿಸಿದ್ದರು.