ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ; ಮಾಜಿ ಸಿಎಂ ಬಿಎಸ್‌ವೈ ಪ್ರಚಾರ

| Published : Apr 25 2024, 01:08 AM IST

ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ; ಮಾಜಿ ಸಿಎಂ ಬಿಎಸ್‌ವೈ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಹಾಗೂ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ 2.5ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಮಾಜಿ ಪ್ರಧಾನಿ, ಮಣ್ಣಿನ ಮಗ ಎಚ್.ಡಿ. ದೇವೇಗೌಡರು ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿಯವರೇ ೩ನೇ ಬಾರಿ ಪ್ರಧಾನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಸಮರ್ಥ ನಾಯಕ ಪ್ರಧಾನಿ ಮೋದಿಯವರಿಗಾಗಿ ಈ 92ರ ಇಳಿ ವಯಸ್ಸಿನಲ್ಲಿಯೂ ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೇಶದ 400 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಕೇಂದ್ರದಲ್ಲಿ ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭವಿಷ್ಯ ನುಡಿದರು.

ತುಮಕೂರು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ತಿಪಟೂರು ನಗರದಲ್ಲಿ ಬುಧವಾರ ಎನ್‌ಡಿಎ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣನವರ ಪರ ರೋಡ್‌ಶೋ ನಡೆಸಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿ ಪಕ್ಷದಿಂದ 28ಕ್ಕೆ 28 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರದಲ್ಲಿ ಡಾ. ಮಂಜುನಾಥ್ ಹಾಗೂ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ 2.5ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. ಮಾಜಿ ಪ್ರಧಾನಿ, ಮಣ್ಣಿನ ಮಗ ಎಚ್.ಡಿ. ದೇವೇಗೌಡರು ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿಯವರೇ ೩ನೇ ಬಾರಿ ಪ್ರಧಾನಿಯಾಗಬೇಕೆಂಬ ಅಪೇಕ್ಷೆಯೊಂದಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಸಮರ್ಥ ನಾಯಕ ಪ್ರಧಾನಿ ಮೋದಿಯವರಿಗಾಗಿ ಈ 92ರ ಇಳಿ ವಯಸ್ಸಿನಲ್ಲಿಯೂ ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದಾರೆ, ಇದುವೇ ೨೮ ಸ್ಥಾನಗಳನ್ನು ನಾವು ರಾಜ್ಯದಲ್ಲಿ ಗೆಲ್ಲಲ್ಲಿದ್ದೇವೆ ಎಂಬುದಕ್ಕೆ ಸಾಕ್ಷಿ. ಅಲ್ಲದೇ ರೈತನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಜಂಟಿ ಹೋರಾಟದ ಈ ಚುನಾವಣೆ ರಾಜ್ಯದ ಮತದಾರರನ್ನು ಮೋದಿಯವರ ಪರ ಬಡಿದೆಬ್ಬಿಸಿದೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಖಜಾನೆಯನ್ನು ಖಾಲಿಯಾಗಿಸಿರುವ ಅವರ ಗ್ಯಾರಂಟಿಗಳ ಬಗ್ಗೆ ಪದೇ ಪದೇ ಹೊಗಳಿಕೊಳ್ಳುತ್ತಿರುವುದನ್ನು ಬಿಟ್ಟರೆ ದೇಶದ ರಕ್ಷಣೆ, ಅಭಿವೃದ್ಧಿಯ ಬಗ್ಗೆ ಯಾವ ಗ್ಯಾರಂಟಿಗಳನ್ನು ನೀಡಿದ್ದಾರೆಂಬುದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇಂಡಿಯಾ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದನ್ನೇ ಈವರೆಗೂ ತಿಳಿಸಿಲ್ಲ. ಆದ್ದರಿಂದ ತುಮಕೂರು ಕ್ಷೇತ್ರದ ಕೆಲಸಗಾರನೆಂದೇ ಹೆಸರು ಪಡೆದಿರುವ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣನವರನ್ನು ನೀವೆಲ್ಲ ೨ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಇವತ್ತಿನ ನಿಮ್ಮ ಉತ್ಸಾಹವು ನಾಳಿನ ಮತದಾನದಲ್ಲಿ ಸೋಮಣ್ಣನವರ ಮತಗಳಾಗಿ ಬದಲಾಗಬೇಕು. ಮನೆ ಮನೆಗಳಿಗೂ ಹೋಗಿ ಬಿಜೆಪಿಗೆ ಮತಹಾಕುವಂತೆ ಮನವಿ ಮಾಡಿ ಅಭ್ಯರ್ಥಿ ಸೋಮಣ್ಣನವರನ್ನು ಗೆಲ್ಲಿಸುವ ಮೂಲಕ ರಾಷ್ಟ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮದೇ ಆದ ಕಾಣಿಕೆ ನೀಡಬೇಕೆಂದು ಮನವಿ ಮಾಡಿದರು.

ರೋಡ್‌ಶೋ ಪ್ರಚಾರದಲ್ಲಿ ಮಾಜಿ ಸಚಿವ ಬಿ.ಸಿ. ನಾಗೇಶ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ತಾಲೂಕು ಜೆಡಿಎಸ್ ಅಧ್ಯಕ್ಷ ತಡಸೂರು ಗುರುಮೂರ್ತಿ, ಜಕ್ಕನಹಳ್ಳಿ ಲಿಂಗರಾಜು, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಚುನಾವಣಾ ಪ್ರಮುಖ್ ಬಿಸ್ಲೇಹಳ್ಳಿ ಜಗದೀಶ್ ಸೇರಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು. ಸಭೆಗೂ ಮುನ್ನ ನಗರದ ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಸ್ಥಾನದಿಂದ ಬೈಕ್ ರ‍್ಯಾಲಿ ನಡೆಸಲಾಯಿತು.

ಭವಿಷ್ಯದ ಭಾರತಕ್ಕಾಗಿ ಮೋದಿ: ಸೋಮಣ್ಣ

ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ಲೋಕಸಭಾ ಚುನಾವಣೆ ದೇಶದ ಭವಿಷ್ಯದ ಚುನಾವಣೆಯಾಗಿದ್ದು, ವಿಶ್ವದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನದಲ್ಲಿದೆ, ಇದಕ್ಕೆಲ್ಲಾ ನಮ್ಮ ಪ್ರಧಾನಿ ನರೇಂದ್ರ ಮೋದಿಜೀ ಕಾರಣೀಕರ್ತರಾಗಿದ್ದಾರೆ. ಹಾಗಾಗಿ ಇದು ಮೋದಿಯವರ ಅಭಿವೃದ್ಧಿ ಪರ ಚುನಾವಣೆಯಾಗಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದ ಒಟ್ಟಾರೆ ಅಭಿವೃದ್ಧಿ ಜೊತೆ ಎಲ್ಲಾ ಸಮಾಜಗಳ ಅಭಿವೃದ್ಧಿಗೆ ಶ್ರಮಿಸಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಾಧನೆ, ಮೋದಿಯವರ ಸಮರ್ಥ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ನೀವು ಮತಹಾಕಬೇಕು. ಬಿಜೆಪಿ ಪಕ್ಷದಿಂದ ಮಾತ್ರ ಸುಭದ್ರ ಹಾಗೂ ಸದೃಢ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯವಿದ್ದು, ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಶ್ರಮವಹಿಸಿ ಮೈತ್ರಿ ಪಕ್ಷಕ್ಕೆ ಮತಗಳನ್ನು ಹಾಕಿಸುವ ಮೂಲಕ ನನ್ನನ್ನು ಜಯಶೀಲರನ್ನಾಗಿ ಮಾಡಿ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಬೇಕೆಂದರು.