ನರಿಯಂದಡ: ಕುಟುಂಬಸ್ಥರಿಂದ ‘ಕೂಡು ನಾಟಿ’ ಸಂಭ್ರಮ

| Published : Jul 17 2025, 12:30 AM IST

ಸಾರಾಂಶ

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ರೈತರು ಬತ್ತ ನಾಟಿಗೆ ಸಜ್ಜಾಗಿದ್ದಾರೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಭತ್ತ ನಾಟಿಗೆ ಸಜ್ಜಾಗಿದ್ದಾರೆ. ಈಗಾಗಲೇ ಗದ್ದೆಗಳನ್ನು ಉಳುಮೆ ಮಾಡಿದ್ದು, ಬಿತ್ತನೆ ಮಾಡಿ ಸಸಿಮಡಿಗಳು ಸಿದ್ಧವಾಗಿವೆ. ಪ್ರಾಣಿಗಗಳ ಉಪಟಳ, ಕಾರ್ಮಿಕರ ಕೊರತೆಯ ನಡುವೆಯೂ ಕೂಡು ನಾಟಿ ಪದ್ಧತಿ ಮೂಲಕ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ನರಿಯಂದಡ ಗ್ರಾಮದ ರೈತ ಪೊಕ್ಕೋಳಂಡ್ರ ಧನೋಜ್ ಹಾಗೂ ಸಹೋದರರು ಪ್ರತಿವರ್ಷದಂತೆ ಈ ವರ್ಷವೂ ಕುಟುಂಬದ ಒಟ್ಟು ನಾಲ್ಕು ಎಕರೆಯ ಗದ್ದೆಯಲ್ಲಿ ನೆರೆಕೆರೆಯವರನ್ನು ಒಟ್ಟುಗೂಡಿಸಿ ಪುರಾತನ ಪದ್ಧತಿಯಂತೆ ಕೂಡು ನಾಟಿ ಮಾಡಿದ್ದಾರೆ. ಸುರಿಯುವ ಮಳೆಯ ನಡುವೆ ಹುಯ್ಯ ಪಾಟ್‌ನೊಂದಿಗೆ ನಾಟಿ ಕಾರ್ಯ ಪೂರ್ಣಗೊಳಿಸಿದರು.ನರಿಯಂದಡ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿದೆ. ಈಗಾಗಲೇ ಈ ಪ್ರದೇಶದ ಕಾಫಿ ತೋಟಗಳಲ್ಲಿ ಗಿಡಗಳನ್ನು ದ್ವಂಸ ಮಾಡುತ್ತಿವೆ. ಭತ್ತದ ಗದ್ದೆಗಳಿಗೂ ದಾಳಿ ಇಡುವ ಸಂಭವ ಇಲ್ಲದಿಲ್ಲ. ಆದರೂ ಕುಟುಂಬಸ್ಥರನ್ನು ಒಗ್ಗೂಡಿಸಿ ನಾಟಿ ಮಾಡಿದ್ದಾರೆ.ಗ್ರಾಮೀಣ ಭಾಗದ ರೈತರು ಭತ್ತದ ಕೃಷಿಯಲ್ಲಿ ಉತ್ಸುಕರಾಗಿದ್ದಾರೆ. ಆದರೆ ರೈತರಿಗೆ ಪ್ರೋತ್ಸಾಹದಾಯಕ ಯೋಜನೆಗಳಿಲ್ಲ. ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳದಿಂದ ಭತ್ತದ ಕೃಷಿಯಿಂದ ರೈತರು ದೂರ ಉಳಿಯುತ್ತಿದ್ದಾರೆ. ಅರಣ್ಯ ಇಲಾಖೆ ಕಾಡಾನೆ ಹಾವಳಿಗೆ ನಿಯಂತ್ರಣ ಹಾಕಬೇಕು. ಆ ನಿಟ್ಟಿನಲ್ಲಿ ಶಾಶ್ವತ ಕಾರ್ಯ ಯೋಜನೆ ರೂಪಿಸಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

ಪೊಕ್ಕೋಳಂಡ್ರ ಧನೋಜ್