ಕಾಂಗ್ರೆಸ್ ಸರ್ಕಾರದಿಂದ ನೀಚ ರಾಜಕಾರಣ: ಶಾಸಕ ವಿಶ್ವನಾಥ್ ಆರೋಪ

| Published : Feb 07 2024, 01:48 AM IST

ಸಾರಾಂಶ

ಕಳೆದ ಬಿಜೆಪಿ ಸರ್ಕಾರದ ಕೆಲ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ. ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಧ್ಯೆ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಭರಿಸಿದ ತೆರಿಗೆ ಹಣ ನೀಡಿಲ್ಲವೆಂದು ಕೇಂದ್ರ ಸರ್ಕಾರವನ್ನು ಆರೋಪಿಸಿ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಲೋಕಸಭಾ ಚುನಾವಣಾ ಸಮಯದಲ್ಲಿ ಜನರ ದಿಕ್ಕು ತಪ್ಪಿಸುತ್ತಿದೆ.

ಕನ್ನಡಪ್ರಭ ವಾರ್ತೆ ನೆಲಮಂಗಲ

ಅಧಿಕಾರಕ್ಕೆ ಬಂದು ಏಳೆಂಟು ತಿಂಗಳಾದರೂ ಅಭಿವೃದ್ಧಿಗೆ ರು. ಅನುದಾನ ನೀಡದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದು ನೀಚ ರಾಜಕಾರಣವಾಗಿದೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆರೋಪಿಸಿದರು.

ತಾಲೂಕಿನ ಹಂಚಿಪುರ (ರಾ.ಹೆದ್ದಾರಿ) ಗ್ರಾಮದ ಚಾಮುಂಡೇಶ್ವರಿ ಹೊಟೇಲ್ ಸಭಾಂಗಣದಲ್ಲಿ ಯಂಟಗಾನಹಳ್ಳಿ ಗ್ರಾಪಂ ಅಧ್ಯಕ್ಷ ರಾಹುಲ್‌ ಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಬಿಜೆಪಿ ಸರ್ಕಾರದ ಕೆಲ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ. ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಧ್ಯೆ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಭರಿಸಿದ ತೆರಿಗೆ ಹಣ ನೀಡಿಲ್ಲವೆಂದು ಕೇಂದ್ರ ಸರ್ಕಾರವನ್ನು ಆರೋಪಿಸಿ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಲೋಕಸಭಾ ಚುನಾವಣಾ ಸಮಯದಲ್ಲಿ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಭರಿಸುವ ತೆರಿಗೆಯಿಂದ ಈಗಾಗಲೇ ರಾಜ್ಯದೆಲ್ಲೆಡೆ ಕೊಟ್ಯಾಂತರ ರು. ವೆಚ್ಚದಲ್ಲಿ ಹೆದ್ದಾರಿಗಳ ಅಭಿವೃದ್ಧಿ, ಸ್ಮಾರ್ಟಸಿಟಿ, ವಿಮಾನ ನಿಲ್ದಾಣ ನಿರ್ಮಾಣದಂತಹ ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸಿದ್ದು ಜನಸಾಮಾನ್ಯರಿಗೂ ತಿಳಿದಿದೆ. ಆದರೆ 2 ತಿಂಗಳಿಗೊಮ್ಮೆ ಗೃಹಲಕ್ಷ್ಮೀ ಯೋಜನೆ ಹಣ ಬಂದರೂ ಪುರುಷರ ಮದ್ಯದ ಬೆಲೆ ದುಪ್ಪಟ್ಟು ಏರಿಕೆ, ವಿದ್ಯುತ್ ಬಿಲ್, ನೋಂದಣಿ ಶುಲ್ಕ ಹೆಚ್ಚಿಸಲಾಗಿದೆ. 1 ರು. ಕೊಟ್ಟು 10 ರು. ಕಸಿದುಕೊಳ್ಳುತ್ತಿರುವ ಇವರ ತಂತ್ರಗಾರಿಕೆಯನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

50% ಕಮೀಷನ್ ಸರ್ಕಾರ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬ್ರಷ್ಟಾಚಾರ ಅಧಿಕವಾಗಿದೆ. ಬಿಜೆಪಿ ಸರ್ಕಾರವನ್ನು ೪೦% ಕಮಿಷನ್ ಸರ್ಕಾರ ಎಂದು ಜರಿಯುತ್ತಿದ್ದ ಕಾಂಗ್ರೆಸ್ ಇದೀಗ ೫೦% ಕಮಿಷನ್ ಸರ್ಕಾರವಾಗಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಸನ್ನಿವೇಶ ನಿರ್ಮಾಣವಾಗಿದೆ. ಸರ್ಕಾರದಲ್ಲಿ ಒಗ್ಗಟ್ಟಿಲ್ಲ. ಲೋಕಸಬಾ ಚುನಾವಣೆ ಬಳಿಕ ಯಾವ ಕಾಂಗ್ರೆಸ್ ಶಾಸಕರು ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ತಮ್ಮ ಬಳಿ ಖುದ್ದು ಕಾಂಗ್ರೆಸ್ ಶಾಸಕರೇ ಬಂದು ಯಾವಾಗ ಸರ್ಕಾರ ಪತನವಾಗುತ್ತದೆ ಎಂದು ಕೇಳುತ್ತಿದ್ದಾರೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಸರ್ಕಾರದ ಕಾಲೆಳೆದರು.

ಮೈತ್ರಿ ಅಭ್ಯರ್ಥಿಗೆ ಮತ ನೀಡಿ

ಬೆಂಗ್ರಾ ಜಿಲ್ಲೆಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಪಿ.ರಂಗನಾಥ್ ಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಎಂದು ಶಾಸಕರು ಮನವಿ ಮಾಡಿದರು.

ಬಿಜೆಪಿ ಮುಖಂಡ ಸಪ್ತಗಿರಿ ಶಂಕರ್‌ ನಾಯಕ್ ಮಾತನಾಡಿ, ಕ್ಷೇತ್ರದೆಲ್ಲೆಡೆ ಲಂಚ, ಬ್ರಷ್ಟಾಚಾರದ ಬಗ್ಗೆ ಮಾತನಾಡುವ ಹಾಲಿ ಶಾಸಕರು, ಸಾಮಾನ್ಯ ಶಿಕ್ಷಕರ ಮಗ, ಜತೆಗೆ ಗುತ್ತಿಗೆದಾರರಾಗಿದ್ದವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ೪೦೦ ಕೋಟಿ ಆಸ್ತಿ ಘೋಷಿಸಿದ್ದಾರೆ. ಇಷ್ಟೊಂದು ಆಸ್ತಿ ಹೇಗೆ ಸಂಪಾದಿಸಿದ್ದಾರೆ ಎಂದು ಹೇಳಬೇಕು. ಸುಮ್ಮನೆ ಜನರನ್ನು ನಂಬಿಸಲು ಸಾಧ್ಯವಿಲ್ಲ ಎಂದರು.

ಶಾಸಕರಿಂದ ಅಧಿಕಾರ ದುರ್ಬಳಕೆ

ಬಿಜೆಪಿ ತಾಲೂಕು ಉಪಾಧ್ಯಕ್ಷ ಜಗದೀಶ್‌ ಚೌಧರಿ ಮಾತನಾಡಿ, ಬಿಜೆಪಿ ಕಾರ್ಯಕರ್ತನೊಬ್ಬ ಕಾನೂನು ಪ್ರಕಾರ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಮುಂದಾದರೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಶಾಸಕರು, ಗ್ರಾಪಂಯಿಂದ ನಿರಪೇಕ್ಷಣಾ ಪತ್ರ ಕೊಡದಂತೆ ತಡೆ ಹಿಡಿದಿದ್ದಾರೆ. ದರ್ಪ,ದೌರ್ಜನ್ಯ ಹೆಚ್ಚು ಕಾಲ ಉಳಿಯಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಂತೆ ಸುಳ್ಳು ಆಶ್ವಾಸನೆ ನೀಡುತ್ತಿರುವ ಕ್ಷೇತ್ರದ ಶಾಸಕರು ಲೋಕಸಭೆ ಚುನಾವಣೆ ಬರುತ್ತಿದ್ದಂತೆ ೮೦೦ ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದುದೂರಿದರು.

ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಭಾಜಪ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಹೇಮಂತ್, ಯುವಮೋರ್ಛಾ ಜಿಲ್ಲಾ ಉಪಾಧ್ಯಕ್ಷ ರಾಹುಲ್‌ಗೌಡ, ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಡಿ.ಹರ್ಷ, ಹಿರಿಯ ಮುಖಂಡ ಭೈರೇಗೌಡ, ಎಚ್.ಕೆ.ಲೋಕೇಶ್, ಸತೀಶ್, ಜಕ್ಕನಹಳ್ಳಿ ಬಾಬು,ಮುದ್ದುಮಾರೇಗೌಡ, ಕೇಶವಮೂರ್ತಿ, ರಾಯರಪಾಳ್ಯ ಮಹೇಶ್, ಮಧು, ರವೀಶ್, ಪುನೀತ್, ರುದ್ರೇಶ್, ರಾಜಮ್ಮ, ವೇದಾವತಿ, ಮಂಜುಳಾ, ಶೀಲಾ ಶಿವಶಂಕರ್,ಬೆಂಗಳೂರು ಉತ್ತರ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಎಚ್.ಆರ್.ಬಸವರಾಜು, ತಾಪಂ ಸದಸ್ಯ ಸೊಂಡೆಕೊಪ್ಪ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಮಮತಾ, ಮಾಜಿ ಸದಸ್ಯ ಶಶಿಧರ್, ವಕೀಲ ರಘು, ಜಗದೀಶ್ ಮತ್ತಿತರರಿದ್ದರು.

ಪುತ್ರ ಅಲೋಕ್ ಅಭ್ಯರ್ಥಿಯಲ್ಲ, ಆಕಾಂಕ್ಷಿ

ಸಾರ್ವಜನಿಕ ಆಡಳಿತ ಮತ್ತು ನಿಯಮಗಳು ಎಂಬ ವಿಷಯದಲ್ಲಿ ಪರಿಣಿತಿ ಪಡೆದುಕೊಂಡಿರುವ ಪುತ್ರ ಅಲೋಕ್ ಕಳೆದ ರಾಜ್ಯ ಸರ್ಕಾರದ ಯುವನೀತಿ ಸಮಿತಿಯಲ್ಲಿ ಕೆಲಸ ಮಾಡಿದ್ದಾನೆ. ಕ್ಷೇತ್ರ ಕಾರ್ಯಕರ್ತರ ಅಭಿಪ್ರಾಯದ ಜತೆಗೆ ಕೇಂದ್ರೀಯ ಮಂಡಳಿ ತೀರ್ಮಾನಕ್ಕೆ ತಲೆಬಾಗಬೇಕು.ಅವನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿಲ್ಲ, ಆಕಾಂಕ್ಷಿತನಾಗಿದ್ದಾನೆ. ಅರ್ಹತೆಯಿದ್ದಲ್ಲಿ ಹೈಕಮಾಂಡ್ ಟಿಕೆಟ್ ನೀಡಲಿ, ಕೊಡದಿದ್ದರೂ ಪರವಾಗಿಲ್ಲ, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಮುಂದಾಗುವುದು ನಿಶ್ಚಿತ ಎಂದು ಎಸ್.ಆರ್.ವಿಶ್ವನಾಥ್ ಹೇಳಿದರು.