ರಾಷ್ಟ್ರ ನಿರ್ಮಾಣವೇ ಪರಮೋಚ್ಛ ಗುರಿ: ಗಣೇಶ ಕಾರ್ಣಿಕ

| Published : Nov 17 2024, 01:19 AM IST

ಸಾರಾಂಶ

ಕುಮಟಾ ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ಭಾರತೀಯ ಜನತಾ ಪಕ್ಷದ ಕುಮಟಾ ಮಂಡಲದ ಸಂಘಟನಾ ಪರ್ವ ೨೦೨೪ರ ಕಾರ್ಯಾಗಾರ ನಡೆಯಿತು.

ಕುಮಟಾ: ಭಾರತೀಯ ಸೇನೆಯ ಉದ್ದೇಶ ಹಾಗೂ ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತ ಎರಡಕ್ಕೂ ಏನೂ ವ್ಯತ್ಯಾಸವಿಲ್ಲ. ರಾಷ್ಟ್ರ ನಿರ್ಮಾಣದ ಪುಣ್ಯ ಕಾರ್ಯವೇ ನಮ್ಮೆಲ್ಲರ ಪರಮೋಚ್ಛ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ ಕಾರ್ಣಿಕ ಹೇಳಿದರು.

ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ಭಾರತೀಯ ಜನತಾ ಪಕ್ಷದ ಕುಮಟಾ ಮಂಡಲದ ಸಂಘಟನಾ ಪರ್ವ ೨೦೨೪ರ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

ಪಕ್ಷದ ಉದ್ದೇಶವನ್ನು ಸದೃಢಪಡಿಸಲು ಮತ್ತು ಜನರನ್ನು ಸಂಘಟಿಸಲು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇತರ ಪಕ್ಷಗಳಲ್ಲಿ ಹುದ್ದೆ, ಅಧಿಕಾರ, ಯಾವುದೋ ಲಾಭಕ್ಕಾಗಿ ಕೆಲಸ ಮಾಡುವವರು ಕಂಡುಬರುತ್ತಾರೆ. ಆದರೆ, ಬಿಜೆಪಿಯಲ್ಲಿ ಸ್ವಾರ್ಥ ರಹಿತವಾಗಿ ಪಕ್ಷಕ್ಕಿಂತ ದೇಶ, ರಾಷ್ಟ್ರೀಯತೆ ಮುಖ್ಯ ಎಂಬ ಧ್ಯೇಯದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಪ್ರಧಾನಿ ಮೋದಿಯವರು ಬಂದ ಮೇಲೆ ಅತಿಹೆಚ್ಚು ಅಭಿವೃದ್ಧಿ, ಭ್ರಷ್ಟಾಚಾರ ನಿಯಂತ್ರಣವಾಗಿದ್ದರೂ ನಾವು ಸರಿಯಾದ ಪ್ರಚಾರದ ಕೊರತೆ ಹಾಗೂ ವಿರೋಧ ಪಕ್ಷಗಳ ಅತಿಯಾದ ಅಪಪ್ರಚಾರದ ಕಾರಣಕ್ಕೆ ರಾಜ್ಯದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಈ ಬಗ್ಗೆ ಗಮನಹರಿಸಬೇಕಾದ ಅಗತ್ಯ ನನಗೆ ಕಂಡುಬರುತ್ತಿದೆ ಎಂದರು. ಸಭೆಯಲ್ಲಿ ಬಿಜೆಪಿಯ ರಾಜಕೀಯ ಇತಿಹಾಸ, ಸಾಧನೆಗಳು ಮತ್ತು ಮುಂದಿನ ಸ್ಪರ್ಧೆಗಳ ಕುರಿತು ಪ್ರಮುಖ ಆಲೋಚನೆಗಳನ್ನು ಹಂಚಿಕೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಗುನಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಗುರುಪ್ರಸಾದ ಹೆಗಡೆ, ರಾಜ್ಯ ಸಹ ಸಂಚಾಲಕ ಎಂ.ಜಿ. ಭಟ್, ಜಿಲ್ಲಾ ಸಂಘಟನಾಧಿಕಾರಿ ಗೋವಿಂದ ನಾಯ್ಕ ಇನ್ನಿತರರು ವೇದಿಕೆಯಲ್ಲಿದ್ದರು.

ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳು, ಮಹಾಶಕ್ತಿಕೇಂದ್ರದ ಪ್ರಮುಖರು, ಶಕ್ತಿಕೇಂದ್ರದ ಪ್ರಮುಖರು, ಶಕ್ತಿಕೇಂದ್ರ ಸಹಯೋಗಿಗಳು, ಪುರಸಭೆಯ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಇನ್ನಿತರರು ಇದ್ದರು.