ಸಾರಾಂಶ
ಮಂಗಳೂರು : ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಏರ್ಪಡಿಸಿದ್ದ ಅತ್ಯುತ್ತಮ ಪ್ರವಾಸೋದ್ಯಮ ಹಳ್ಳಿ ಸ್ಪರ್ಧೆ-2024ರ ಸಾಹಸಿಕ ಪ್ರವಾಸಿ ತಾಣ (ಅಡ್ವೆಂಚರ್ ಟೂರಿಸಂ) ವಿಭಾಗದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮಕ್ಕೆ ಶುಕ್ರವಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೆಹಲಿಯ ವಿಗ್ಯಾನ್ ಭವನದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಭಾಗವಹಿಸಿದ್ದರು. ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರಶಸ್ತಿ ಪ್ರದಾನ ಮಾಡಿದರು. ಕುತ್ಲೂರು ಗ್ರಾಮದ ಪರವಾಗಿ ಹರೀಶ್ ಡಾಕಯ್ಯ ಪೂಜಾರಿ, ಶಿವರಾಜ್ ಅಂಚನ್ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿದರು.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದ್ದರು. ಪ್ರವಾಸೋದ್ಯಮ ಇಲಾಖೆ ಎಂಟು ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಹೊಂದುತ್ತಿರುವ ಗ್ರಾಮಗಳನ್ನು ಗುರುತಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಬೆಸ್ಟ್ ಟೂರಿಸಂ ವಿಲೇಜ್ ಕಾಂಪಿಟೇಶನ್ -2024 ಅನ್ನು ಏರ್ಪಡಿಸಲಾಗಿತ್ತು. ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ನಿವಾಸಿಗಳಾಗಿದ್ದು, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಹರೀಶ್ ಡಾಕಯ್ಯ ಪೂಜಾರಿ, ಕತಾರ್ ಉದ್ಯೋಗಿ ಸಂದೀಪ್ ಕುತ್ಲೂರು ಮತ್ತು ಶಿವರಾಜ್ ಅಂಚನ್ ಅವರು ತಮ್ಮ ಗ್ರಾಮದ ಪ್ರವಾಸಿ ತಾಣಗಳು, ಪರಿಸರ ಹಾಗೂ ಪ್ರಕೃತಿಯ ಸೊಬಗಿನ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ಇದನ್ನು ಸ್ಪರ್ಧಾ ನಿಯಮದಂತೆ ಆನ್‌ಲೈನ್‌ನಲ್ಲಿ ಆಪ್‌ಲೋಡ್ ಮಾಡಿದ್ದರು. ಇದರ ಬಗ್ಗೆ ಹಲವು ಸುತ್ತುಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿಯನ್ನು ಪ್ರವಾಸೋದ್ಯಮ ಮಂತ್ರಾಲಯ ಪಡೆದುಕೊಂಡಿತ್ತು. ದೇಶಾದ್ಯಂತ ನಡೆದ ‘ಅತ್ಯುತ್ತಮ ಪ್ರವಾಸಿ ಹಳ್ಳಿಗಳು’ ಸ್ಪರ್ಧೆಯಲ್ಲಿ ಕುತ್ತೂರು ಗ್ರಾಮ ಆಯ್ಕೆಯಾಗಿದೆ.
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮ ಪ್ರಾಕೃತಿಕ ಸೌ೦ದರ್ಯವನ್ನೇ ಹೊದ್ದು ಮಲಗಿದೆ. ಗ್ರಾಮದಲ್ಲಿ ಅರ್ಬಿ ಫಾಲ್ಸ್ ಎಂದು ಸ್ಥಳೀಯರು ಕರೆಯುವ ಅದ್ಭುತವಾದ ಜಲಪಾತವಿದ್ದು, ವರ್ಷದ ಏಳೆಂಟು ತಿಂಗಳು ತುಂಬಿ ಹರಿಯುತ್ತಿರುವುದನ್ನು ವೀಕ್ಷಿಸುವುದೇ ಸೊಬಗು. ಇಲ್ಲಿನ ಬೆಟ್ಟದಲ್ಲಿ ಹಲವರು ಟ್ರೆಕ್ಕಿಂಗ್ ಮಾಡುತ್ತಿದ್ದು, ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಬೆಟ್ಟದಲ್ಲಿ ಬೈಕ್‌ಗಳಲ್ಲಿ ಸಾಹಸ ಕ್ರೀಡೆಗಳೂ ನಡೆಯುತ್ತವೆ. ಪಕ್ಕದಲ್ಲೇ ನದಿ ಇದ್ದು, ಫಿಶಿಂಗ್ ಮಾಡಬಹುದು. ಕುತ್ಲೂರಿನ 50 ಕಿ.ಮೀ. ಆಸುಪಾಸಿನಲ್ಲಿ ಧರ್ಮಸ್ಥಳ, ಕಾರ್ಕಳ, ಮೂಡುಬಿದಿರೆ, ಮಂಗಳೂರು ಮತ್ತಿತರ ಜನಪ್ರಿಯ ಪ್ರವಾಸಿ ತಾಣ, ಬೀಚ್, ದೇವಸ್ಥಾನ, ತೀರ್ಥಕ್ಷೇತ್ರಗಳಿವೆ. ಇವೆಲ್ಲ ಮಾಹಿತಿಯನ್ನು ಯುವಕರ ತಂಡ ಪ್ರವಾಸೋದ್ಯಮ ಇಲಾಖೆಗೆ ಅಚ್ಚುಕಟ್ಟಾಗಿ ಫೋಟೋ, ವಿಡಿಯೋ ಸಹಿತ ದಾಖಲೆಗಳಲ್ಲಿ ಒಪ್ಪಿಸಿದೆ.
ಒಳ್ಳೆಯ ಕಾರಣಕ್ಕೆ ನಮ್ಮೂರು ಹೆಸರುವಾಸಿಯಾಗಬೇಕುಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಎರಡು ವರ್ಷಗಳಿಂದ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಕಳೆದ ವರ್ಷವೂ ಈ ಸ್ಪರ್ಧೆಗೆ ಕುತ್ಲೂರು ಗ್ರಾಮದ ವಿವರಗಳನ್ನು ನಾವು ಸಲ್ಲಿಸಿದ್ದೆವು. ನಮ್ಮ ಗ್ರಾಮವು ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ರಾಜ್ಯದಿಂದ ಆಯ್ಕೆಯಾಗಿತ್ತು. ಆದರೆ, ಶ್ರೇಷ್ಠ ಪ್ರವಾಸಿ ಗ್ರಾಮ ಮನ್ನಣೆ ಪಡೆಯುವ ಅವಕಾಶ ಸ್ವಲ್ಪದರಲ್ಲಿ ಕೈತಪ್ಪಿತ್ತು. ಆದರೆ, ಈ ಬಾರಿ ಸ್ಪರ್ಧೆಯ ಮಾನದಂಡಗಳಿಗೆ ಪೂರಕವಾದ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ವಿವರಗಳನ್ನು ಸಲ್ಲಿಸಿದ್ದೆವು. ನಮ್ಮ ಗ್ರಾಮದ ಪ್ರವಾಸೋದ್ಯಮ ಅವಕಾಶಗಳನ್ನು ಆನ್‌ಲೈನ್‌ನಲ್ಲಿ ಪ್ರಸ್ತುತಿ ಪಡಿಸಲು ಇಲಾಖೆ ಜೂನ್ ತಿಂಗಳಲ್ಲಿ ಅವಕಾಶ ನೀಡಿತ್ತು ಎಂದು ಕುತ್ಲೂರಿನ ಹರೀಶ್ ಡಾಕಯ್ಯ ತಿಳಿಸಿದರು.
ನಮ್ಮೂರಿಗಿದ್ದ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಳಚಿ, ಒಳ್ಳೆಯ ಕಾರಣಕ್ಕೆ ನಮ್ಮೂರು ಹೆಸರುವಾಸಿಯಾಗಬೇಕು ಎಂಬುದು ನಮ್ಮೆಲ್ಲರ. ಅದು ಈಗ ಈಡೇರುತ್ತಿದೆ. ಪಶ್ವಿಮ ಘಟ್ಟದ ತಪ್ಪಲಿನಲ್ಲಿರುವ ಕುತ್ಲೂರು ಗ್ರಾಮವು ರುದ್ರರಮಣೀಯ ಪರ್ವತ ಶ್ರೇಣಿಗಳಿವೆ. ಮನಮೋಹಕ ಅರ್ಬಿ ಜಲಪಾತವಿದೆ. ಚಾರಣಕ್ಕೆ ಹೇಳಿ ಮಾಡಿಸಿದ ಅನೇಕ ತಾಣಗಳಿವೆ. ಹಲವು ಜನಪದ ಕಲೆಗಳಿವೆ. ನಮ್ಮ ಊರೂ ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು.