ರಾಷ್ಟ್ರೀಯ ಜಾಗೃತಿ ಅಭಿಯಾನ ವಿನೂತನ ಕಾರ್ಯಕ್ರಮ: ಮನೋಹರ್‌ ಮಠದ್‌

| Published : Feb 11 2024, 01:49 AM IST

ರಾಷ್ಟ್ರೀಯ ಜಾಗೃತಿ ಅಭಿಯಾನ ವಿನೂತನ ಕಾರ್ಯಕ್ರಮ: ಮನೋಹರ್‌ ಮಠದ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಅಡಿಯಲ್ಲಿ ಭಾರತೀಯ ಪ್ರಜೆ ಮಾಡಬೇಕಾದ ಕರ್ತವ್ಯ ಮತ್ತು ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಜಾಗೃತಿ ಅಭಿಯಾನ ಒಂದು ವಿನೂತನ ಕಾರ್ಯಕ್ರವಾಗಿದೆ ಎಂದು ಪ್ರಾಂತ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕದ ಮನೋಹರ್ ಮಠದ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಂವಿಧಾನದ ಅಡಿಯಲ್ಲಿ ಭಾರತೀಯ ಪ್ರಜೆ ಮಾಡಬೇಕಾದ ಕರ್ತವ್ಯ ಮತ್ತು ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಜಾಗೃತಿ ಅಭಿಯಾನ ಒಂದು ವಿನೂತನ ಕಾರ್ಯಕ್ರವಾಗಿದೆ ಎಂದು ಪ್ರಾಂತ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕದ ಮನೋಹರ್ ಮಠದ್ ತಿಳಿಸಿದ್ದಾರೆ.

ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಮಾನವ ಮತ್ತು ಪರಿಸರ ಸಂರಕ್ಷಣಾ ಪಡೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಜಾಗೃತಿ ಅಭಿಯಾನ-2024ರ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರಿಗೆ ಸಂವಿಧಾನದ ಆಶಯಗಳ ಜೊತೆಗೆ, ಧಾರ್ಮಿಕ, ಸಾಂಸ್ಕೃತಿಕ ಅರಿವು ಸಹ ಅಗತ್ಯ. ಈ ನಿಟ್ಟಿನಲ್ಲಿ ಮೂರು ದಿನಗಳ ಈ ಕಾರ್ಯಕ್ರಮ ಅತ್ಯಂತ ಪ್ರಸ್ತುತವಾಗಿವೆ ಎಂದರು.

ಕಲೆ ವಿಲಾಸಕ್ಕಾಗಿ ಅಲ್ಲ, ವಿಕಾಸಕ್ಕಾಗಿ ಎಂಬ ಸಂದೇಶದಂತೆ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪೂರಕವಾದ ಎಲ್ಲಾ ಅಂಶಗಳನ್ನು ಜನರ ಮುಂದಿಡಲು ಎಲ್ಲಾ ಪ್ರಯತ್ನಗಳನ್ನು ರಾಷ್ಟ್ರೀಯ ಮಾನವ ಮತ್ತು ಪರಿಸರ ಸಂರಕ್ಷಣ ಪಡೆ ಮಾಡುತ್ತಿದೆ. ಸಂತರ ನಡೆ, ದೇಶದ ಕಡೆ ಎಂಬ ಘೋಷ ವಾಕ್ಯದೊಂದಿಗೆ ಸಾಧು, ಸಂತರು ಹೇಗೆ ದೇಶದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಸಿದ್ಧಗಂಗಾ ಮಠದಲ್ಲಿ ನಡೆದ ಸಂತರ ಸಮಾವೇಶ ತೋರಿಸಿಕೊಟ್ಟಿದೆ. ಕೃಷಿಯ ಮೂಲವಾದ ಎತ್ತುಗಳನ್ನು ಪ್ರದರ್ಶನ ಒಂದು ಒಳ್ಳೆಯ ಸಂದೇಶವನ್ನು ಜನರಿಗೆ ನೀಡಿದೆ. ಅಲ್ಲದೆ ರೈತ ಗೀತೆಯೊಂದಿಗೆ ಆರಂಭವಾಗಿರುವ ಇಂದಿನ ಕಾರ್ಯಕ್ರಮ ಇಂದು ಸಂಕಷ್ಟದಲ್ಲಿರುವ ರೈತರಿಗೆ ಒಂದು ದೈರ್ಯವನ್ನು , ಆತ್ಮಸ್ಥೈರ್ಯವನ್ನು ನೀಡಿದೆ ಎಂದು ಮನೋಹರ್‌ ಮಠದ್ ತಿಳಿಸಿದರು.

ಇಡೀ ಪ್ರಪಂಚದಲ್ಲಿಯೇ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಒಂದಾಗಿರುವ ದೇಶ ಎಂದರೆ ಭಾರತ ಮಾತ್ರ. ಜಗತ್ತಿಗೆ ಕೆಲ ದೇಶಗಳಲ್ಲಿ ಕೇವಲ ಒಂದು ನದಿಗಳು ಇಡೀ ಮನುಕುಲವನ್ನು ಬೆಳೆಸಿದರೆ, ಭಾರತದಲ್ಲಿ ಅಸಂಖ್ಯಾತ ನದಿಗಳು ಭಾರತದ ನೂರಾರು ಜನತೆಯನ್ನು ಪೊರೆಯುತ್ತಿವೆ. ಹಲವಾರು ಪರ್ವತಗಳು ಜನರಿಗೆ ಆಸರೆಯಾಗಿ ಬದುಕುತ್ತಿವೆ. ಹಾಗಾಗಿ ಇವುಗಳ ಮಹತ್ವ ನಮ್ಮ ಯುವಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ಅವಶ್ಯಕ ಎಂದು ಮನೋಹರ್‌ ಮಠದ್ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಜಾಗೃತಿ ಅಭಿಯಾನದ-೨೦೨೪ರ ಅಧ್ಯಕ್ಷ ಎಸ್.ಪಿ. ಚಿದಾನಂದ್ ಮಾತನಾಡಿ, ಕೃಷಿಯ ಮೂಲವಾದ ಜಾನುವಾರುಗಳ ಪ್ರದರ್ಶನ ಇಡೀ ಕಾರ್ಯಕ್ರಮಕ್ಕೆ ಮೆರೆಗು ನೀಡಿದೆ. ರಾಜ್ಯಮಟ್ಟದ ಜಾನಪದ ಮತ್ತು ದೇಶಭಕ್ತಿಗೀತೆಗಳ ಮೂಲಕ ಯುವಜನರಿಗೆ ರಾಷ್ಟ್ರದ ಜಾಗೃತಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮಿಜೀ, ಚನ್ನಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮಿಜಿ, ವಿಭವ ವಿದ್ಯಾಶಂಕರ್‌ ಸ್ವಾಮೀಜಿ ಗೊಲ್ಲಹಳ್ಳಿಮಠ, ಸಿದ್ದರಾಮಚೈತನ್ಯ ಸ್ವಾಮೀಜಿ ಅರೆ ಶಂಕರ ಮಠ, ಕಿತ್ತನಾಗ ಮಂಗಲ, ಶಿವಕುಮಾರ ಶಿವಾಚಾರ್ಯಸ್ವಾಮೀಜಿ ಹಿರೇಮಠ ಕುಣಿಗಲ್, ರುದ್ರಮುನಿ ಶಿವಾಚಾರ್ಯ ಸ್ವಾಮಿಜಿ ದಿವ್ಯಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಜಾಗೃತಿ ಅಭಿಯಾನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೋರಿ ಮಂಜುನಾಥ್, ಎಸ್.ಪಿ. ಚಿದಾನಂದ, ರಾಷ್ಟ್ರೀಯ ಮಾನವ ಮತ್ತು ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷ ಜಿ.ಎಸ್. ಬಸವರಾಜು, ಕಾರ್ಯದರ್ಶಿ ಗೋವಿಂದರಾವ್, ಖಜಾಂಚಿ ಈಶ್ವರಗುಪ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು.