ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಾಜಿ ಶಾಸಕ ದಿ.ಕೆ. ಸೋಮಪ್ಪ ಸುವರ್ಣ ಅವರ ಪರಿಕಲ್ಪನೆಯಲ್ಲಿ ದಿ. ಜಯ ಸುವರ್ಣರ ಮುಂದಾಳತ್ವದಲ್ಲಿ ಮೂಲ್ಕಿ ಬಿಲ್ಲವ ಸಂಘದಲ್ಲಿ ಹುಟ್ಟಿ ಬಂದ ಸಂಸ್ಥೆ ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಈಗ ದೇಶ, ವಿದೇಶ ಸೇರಿದಂತೆ 275 ಬಿಲ್ಲವ ಸಂಘಗಳ ಸದಸ್ಯತ್ವವನ್ನು ಹೊಂದಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಮಾರಂಭ ಮಾ.10ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಬಳಿಯ ಭವಾನಿ ಶಂಕರ ಕಾಂಪೌಂಡ್‌ನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿ ಹಬ್ಬ ಸಂಭ್ರಮವು ಬಿಲ್ಲವ ಜನಾಂಗದ ಮಹಾ ಸಮಾರಂಭವಾಗಿ ಮೂಡಿಬರಲಿದ್ದು ಬಿಲ್ಲವ ಜನಾಂಗದ ಆಶೋತ್ತರಗಳನ್ನು ಈಡೇರಿಸುವ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ ಎಂದರು.ಮೂಲ್ಕಿ ಬಿಲ್ಲವ ಸಂಘದ ಬಳಿ ನಡೆಯಲಿರುವ ಮಹಾಮಂಡಲದ ಬೆಳ್ಳಿ ಸಂಭ್ರಮವನ್ನು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ. ಬೆಂಗಳೂರು ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ,ರಾಜ್ಯ ಸಚಿವ ಮಧು ಬಂಗಾರಪ್ಪ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸಂಘಟನಾ ರತ್ನ ಪ್ರಶಸ್ತಿ, ಬಿಲ್ಲವರ ಶ್ರೇಷ್ಠ ಕಲಾವಿದರಾದ ಸುಮನ್ ತಲ್ವಾರ್, ಜಯಮಾಲಾ, ನವೀನ್ ಡಿ. ಪಡೀಲ್ ಅವರಿಗೆ ಬಿಲ್ಲವ ಕಲಾ ಸಾಮ್ರಾಟ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು, ಜಯರಾಮ್ ಬನಾನ್, ಬನ್ನಂಜೆ ಬಾಬು ಅಮೀನ್, ರಾಜ್ ಕುಮಾರ್ ಬೆಹರಿನ್, ಹಾಗೂ ದಿನೇಶ್ ಅಮೀನ್ ಮಟ್ಟು ರವರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ನಾಳೆ ವಿಶ್ವಶಾಂತಿ ಮಹಾಯಾಗ: ಸ್ಮರಣ ಸಂಚಿಕೆ ಬಿಡುಗಡೆ, ಸ್ಥಾಪಕ ಸದಸ್ಯರಿಗೆ ಅಭಿನಂದನೆ ,ಆಯ್ದ ವಿಶೇಷ ಚೇತನ ಮಕ್ಕಳ ಅಭಿವೃದ್ಧಿ ಸಂಸ್ಥೆಗೆ ಸಹಾಯಧನ ನೀಡುವ ಕಾರ್ಯಕ್ರಮಗಳು ನಡೆಯಲಿದೆ. ಬೆಳ್ಳಿ ಹಬ್ಬ ಸಂಭ್ರಮದ ಪೂರ್ವಭಾವಿಯಾಗಿ ಲೋಕಕಲ್ಯಾಣಾರ್ಥವಾಗಿ ವಿಶ್ವಶಾಂತಿ ಮಹಾ ಯಾಗ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಹರೀಶ್ ಡಿ. ಸಾಲ್ಯಾನ್, ಗಣೇಶ್ ಪೂಜಾರಿ ಮೂಡುಪೆರಾರ, ಪ್ರಭಾಕರ ಬಂಗೇರ ಕಾರ್ಕಳ, ಬಾಳ ಗಂಗಾಧರ ಪೂಜಾರಿ ಚೇಳಾಯರು, ಶಿವಾಜಿ ಸುವರ್ಣ ಬೆಳ್ಳೆ ಮತ್ತು ಬಿ.ಬಿ. ಪೂಜಾರಿ ಉಪಸ್ಥಿತರಿದ್ದರು.