ಧಾರವಾಡದಲ್ಲಿ ಆರಂಭವಾಗುವುದೇ ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ?

| Published : Jun 28 2024, 12:56 AM IST

ಧಾರವಾಡದಲ್ಲಿ ಆರಂಭವಾಗುವುದೇ ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ?
Share this Article
  • FB
  • TW
  • Linkdin
  • Email

ಸಾರಾಂಶ

2014ರಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲ ದಿನಗಳಲ್ಲೇ (2015-16ರಲ್ಲಿ) ಕೇಂದ್ರದ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೂ ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ ಪ್ರಾರಂಭಿಸಲು ನಿರ್ಧರಿಸಿತ್ತು. ಈ ಕೇಂದ್ರವನ್ನು ಸರ್ಕಾರವೂ ಧಾರವಾಡದಲ್ಲಿ ತೆರೆಯುವುದಾಗಿ ಘೋಷಿಸಿತ್ತು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕೇಂದ್ರ ಸರ್ಕಾರ ಧಾರವಾಡಕ್ಕೆ ಮಂಜೂರು ಮಾಡಿದ್ದ ರಾಜ್ಯದ ಮೊದಲ "ರಾಷ್ಟ್ರೀಯ ಗ್ರಾಹಕ ತರಬೇತಿ ಸಂಸ್ಥೆ " ಪ್ರಾರಂಭಕ್ಕೆ ಘೋಷಣೆಯಾಗಿ 8 ವರ್ಷವಾದರೂ ಈ ವರೆಗೂ ಸ್ಥಾಪನೆ ಕುರಿತು ಕಾರ್ಯಚಟುವಟಿಕೆ ಕೂಡ ಶುರುವಾಗಿಲ್ಲ. ಇದೀಗ ಪ್ರಹ್ಲಾದ ಜೋಶಿ ಅವರು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿದ್ದು ಇನ್ನಾದರೂ ಪ್ರಾರಂಭಕ್ಕೆ ಚಾಲನೆ ಸಿಗುವುದೇ? ಜೋಶಿ ತಮ್ಮ ಅಧಿಕಾರವಧಿಯಲ್ಲಿ ಧಾರವಾಡದಲ್ಲಿ ಗ್ರಾಹಕ ತರಬೇತಿ ಕೇಂದ್ರ ಸ್ಥಾಪಿಸುವರೇ ಎಂದು ಜನರು ಎದುರು ನೋಡುತ್ತಿದ್ದಾರೆ.

ಆಗಿರುವುದೇನು?

2014ರಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲ ದಿನಗಳಲ್ಲೇ (2015-16ರಲ್ಲಿ) ಕೇಂದ್ರದ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯೂ ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ ಪ್ರಾರಂಭಿಸಲು ನಿರ್ಧರಿಸಿತ್ತು. ಈ ಕೇಂದ್ರವನ್ನು ಸರ್ಕಾರವೂ ಧಾರವಾಡದಲ್ಲಿ ತೆರೆಯುವುದಾಗಿ ಘೋಷಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹೆಬ್ಬಳ್ಳಿ ಬಳಿ 5 ಎಕರೆ ಜಮೀನನ್ನು ನೋಡಿ ಕೊಡಲು ಒಪ್ಪಿಕೊಂಡಿತ್ತು. ಜತೆಗೆ ಈ ವಿವರವನ್ನು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯೂ ಕೇಳಿತ್ತು. ಇಲಾಖೆ ಕೇಳಿದ ಮಾಹಿತಿಯನ್ನು ಆಹಾರ ನಾಗರಿಕ ಸರಬರಾಜು ಇಲಾಖೆಯೂ 2018ರಲ್ಲಿ ನೀಡಿದೆ. ಆದರೆ ಅಲ್ಲಿಂದ ಮತ್ತೆ ಯಾವ ಪ್ರಕ್ರಿಯೆಯೂ ನಡೆದಿಲ್ಲ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೂ ಮಾಹಿತಿ ರವಾನೆಯಾಗಿದೆ. ಆದರೆ ಅಲ್ಲಿಂದ ಮುಂದೆ ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರದ ಸ್ಥಾಪನೆಗೆ ಯಾವ ಪ್ರಕ್ರಿಯೆ ನಡೆದಿಲ್ಲ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಅವರಿಗೆ ತರಬೇತಿ ನೀಡಲು, ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು. ಗ್ರಾಹಕರಿಗೆ ಅಗತ್ಯ ತರಬೇತಿ ನೀಡುವುದು ಸೇರಿದಂತೆ ಮತ್ತಿತರರ ಚಟುವಟಿಕೆ ಈ ಕೇಂದ್ರ ಮಾಡಲಿದೆ.

ಮತ್ತೇನು ಪ್ರಕ್ರಿಯೆ ನಡೆದಿಲ್ಲ:

2018ರಲ್ಲಿ ಇಲಾಖೆಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೀಡಿರುವ ವಿವರ ಹೊರತುಪಡಿಸಿದರೆ ಯಾವುದೇ ಪ್ರಕ್ರಿಯೆ ಮುಂದುವರಿದಿಲ್ಲ. ಮತ್ತೆ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಜೋಶಿಯತ್ತ ಚಿತ್ತ:

ಈ ನಡುವೆ ಇದೀಗ ಕೇಂದ್ರ ಗ್ರಾಹಕ ವ್ಯವಹಾರಗಳ ಹಾಗೂ ಆಹಾರ, ನಾಗರಿಕ ಸರಬರಾಜು ಖಾತೆ ಈ ಸಲ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸಿಕ್ಕಿದೆ.. ಅದರಲ್ಲೂ ಧಾರವಾಡ ಕ್ಷೇತ್ರದ ಸಂಸದರೂ ಆಗಿರುವ ಕಾರಣ ತರಬೇತಿ ಕೇಂದ್ರ ತೆರೆಯಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಜತೆಗೆ ತಮ್ಮ ಕ್ಷೇತ್ರಕ್ಕೆ ಈ ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ ಬರುವುದರಿಂದ ಹೆಚ್ಚಿನ ಗಮನ ಹರಿಸಿ ಶೀಘ್ರದಲ್ಲೇ ಕೇಂದ್ರ ಆರಂಭಿಸಲು ಕ್ರಮಕೈಗೊಳ್ಳಬೇಕು ಎಂಬುದು ನಾಗರಿಕರ ಅಂಬೋಣ.2015-16ರಲ್ಲಿ ರಾಷ್ಟ್ರೀಯ ಗ್ರಾಹಕ ತರಬೇತಿ ಕೇಂದ್ರ ಧಾರವಾಡಕ್ಕೆ ಮಂಜೂರಾಗಿತ್ತು. ಇಂತಹ ತರಬೇತಿ ಕೇಂದ್ರ ರಾಜ್ಯದಲ್ಲೇ ಮೊದಲನೆಯದು. ಕೆಲವೊಂದಿಷ್ಟು ಮಾಹಿತಿಯನ್ನು 2018ರಲ್ಲಿ ಸರ್ಕಾರ ಕೇಳಿತ್ತು. ಅದು ಕೇಳಿದ ಮಾಹಿತಿಯನ್ನೆಲ್ಲ ನಾವು ಒದಗಿಸಿದ್ದೇವೆ. ಅದಾದ ಬಳಿಕ ಈ ಬಗ್ಗೆ ಯಾವುದೇ ಸಂವಹನವಾಗಲಿ, ಸಂಪರ್ಕವಾಗಲಿ ಆಗಿಲ್ಲ ಎಂದು ಧಾರವಾಡದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಹೇಳಿದ್ದಾರೆ.