ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ಮತ್ತು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಸ್ಥಾನ ಇವರ ಸಂಯುಕ್ತ ಆಶ್ರಯದಲ್ಲಿ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರ ಸಹಕಾರದಲ್ಲಿ 65 ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ಭಾನುವಾರ ಜರುಗಿತು.ನೃತ್ಯೋತ್ಸವಕ್ಕೆ ಚಾಲನೆಯನ್ನು ಶ್ರೀ ಓಂಕಾರೇಶ್ವರ ದೇವಾಲಯದ ಕಾಯ೯ನಿವ೯ಹಣಾಧಿಕಾರಿ ದೇವರಾಜು ಪಿ.ಎಲ್ ನೆರವೇರಿಸಿ, ಭಾರತೀಯ ಸಂಸ್ಕೃತಿಯಲ್ಲಿ ಅತ್ಯುತ್ತಮ ಸ್ಥಾನ ಹೊಂದಿರುವ ಶಾಸ್ತ್ರೀಯ ನೃತ್ಯೋತ್ಸವವನ್ನು ಶ್ರೀ ಓಂಕಾರೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ನೃತ್ಯ ಗುರುಗಳಾದ ತೃಷ್ಣ ವಿ ಕುಮಾರ್, ನೀಲಪು ಲೀಲಾ ಕೃಷ್ಣ ರೆಡ್ಡಿ, ಶ್ರೀಕಾಕುಲಂ, ಮಾ ಮಹೇಶ್ವರಿ ಕೆ, ನಳಿನಿ. ಎಂ ಆಯೋಜನ ಕಾರ್ಯದರ್ಶಿ ವಿದೂಷಿ ಡಾ.ಸ್ವಾತಿ ಪಿ ಭಾರದ್ವಾಜ್ ಭಾಗವಹಿಸಿದ್ದರು.2017 ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯಲ್ಲಿ ವಿಶ್ವದಾದ್ಯಂತ 24 ಸಾವಿರ ಕಲಾವಿದರ ಸದಸ್ಯತ್ವವನ್ನು ಹೊಂದಿದ್ದು ಶಾಸ್ತ್ರೀಯ ನೃತ್ಯಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ 8 ವಿಧದ ಶಾಸ್ತ್ರೀಯ ನೃತ್ಯಗಳನ್ನು ಒಂದೆಡೆಗೆ ಸೇರಿಸಿ ಭಾರತ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ್, ಮಧ್ಯಪ್ರದೇಶ್, ತೆಲಂಗಾಣ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭರತನಾಟ್ಯ ಕಲಾವಿದರು 5 ರಿಂದ 60 ವರ್ಷದ ವಯಸ್ಸಿನ 75 ಕ್ಕೂ ಹೆಚ್ಚು ಪ್ರತಿಭಾವಂತ ಕಲಾವಿದರು ಹಾಗೂ ನೃತ್ಯ ಗುರುಗಳು ಭಾಗವಹಿಸಿ ತಮ್ಮ ಕಲೆಯ ಪ್ರದರ್ಶನವನ್ನು ಭಗವಂತನಿಗೆ ಸಮರ್ಪಣೆ ಮಾಡಿದರು.
ಭರತನಾಟ್ಯವನ್ನು ಕಲಿಯುತ್ತಿರುವ, ಕಲಿತಿರುವ ವೇದಿಕೆ ವಂಚಿತ ಕಲಾವಿದರಿಗಾಗಿ ನಡೆಸಿಕೊಂಡು ಬರುತ್ತಿರುವ ಈ ನೃತ್ಯೋತ್ಸವ ಕಾರ್ಯಕ್ರಮ ಕೇವಲ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಸೀಮಿತವಾಗದೆ ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ನೃತ್ಯೋತ್ಸವವನ್ನು ಆಯೋಜನೆ ಮಾಡಲಾಗಿದೆ.ನೃತ್ಯೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಶ್ರೀ ಓಂಕಾರೇಶ್ವರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.