ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರವನ್ನು ನಿಯಂತ್ರಿಸೋಣ ಎಂಬ ಘೋಷಣೆ ಮೂಲಕ ತಾಲೂಕಿನ ಜಕ್ಕನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಡೆಂಘೀ ದಿನವನ್ನು ಆಚರಿಸಲಾಯಿತು.ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಟಿ.ಎಂ ಹೊಸೂರು ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಜೆ.ತಾರಾ ಮಾತನಾಡಿ, ಈ ವರ್ಷದ ರಾಷ್ಟ್ರೀಯ ಡೆಂಘೀ ದಿನ ಆಚರಿಸಿ ಸಾರ್ವಜನಿಕರಿಗೆ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತಿದೆ ಎಂದರು.
ನಿರ್ದಿಷ್ಟ ಚಿಕಿತ್ಸೆ ಇಲ್ಲದ ಈ ಮಾರಕ ಡೆಂಘೀ ಜ್ವರಕ್ಕೆ ಮುಂಜಾಗ್ರತೆಯೇ ಪರಮೌಷಧಿ. ಮಾರಕ ಡೆಂಘೀ ಜ್ವರಕ್ಕೆ ಹಗಲು ವೇಳೆ ಕಚ್ಚುವ ಸೋಂಕಿತ ಈಡೀಸ್ ಈಜಿಪ್ಟೈ ಸೊಳ್ಳೆ ಕಾರಣವಾಗಿದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಉಪನ್ಯಾಸ ನೀಡಿ, ಮಳೆ ಬರುತ್ತಿರುವುದರಿಂದ ಎಲ್ಲೆಡೆ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ರೋಗ ಪ್ರಸರಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಮನೆ ಒಳಗಿರುವ ಸೀಮೆಂಟ್ ತೊಟ್ಟಿ, ಡ್ರಮ್‌ಗಳನ್ನು ವಾರಕ್ಕೆ ಎರಡು ಬಾರಿ ಉಜ್ಜಿ ತೊಳೆದು ನೀರು ತುಂಬಿದ ನಂತರ ಸೊಳ್ಳೆಯ ಸಂಪರ್ಕವಾಗದಂತೆ ಭದ್ರವಾಗಿ ಮುಚ್ಚಿಡಬೇಕು ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ಮಾತನಾಡಿ, ಡೆಂಘೀ, ಚಿಕುನ್ ಗುನ್ಯಾ ರೋಗವನ್ನು ಸ್ವಚ್ಛತೆ ಮೂಲಕ ಹಾಗೂ ಮುಂಜಾಗ್ರತಾ ಕ್ರಮಗಳ ಮೂಲಕ ಸುಲಭವಾಗಿ ನಿಯಂತ್ರಿಸಬಹುದು. ಡೆಂಘೀ ಮುಕ್ತ ಸಮಾಜ ನಿರ್ಮಾಣಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಆರೋಗ್ಯ ನೀರಿಕ್ಷಣಾಧಿಕಾರಿ ಎಂ.ಸಿ.ಚಂದನ್, ಸಮುದಾಯ ಆರೋಗ್ಯ ಅಧಿಕಾರಿ ಮಲ್ಲಮ್ಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೀತಾ ಟಿ, ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮಮ್ಮ, ಸುಧಾಮಣಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.