ಕುಕನೂರು: ಭ್ರಷ್ಟಾಚಾರ, ಅಸಮಾನತೆ, ಜಾತಿ ವ್ಯವಸ್ಥೆ ಹೋಗಲಾಡಿಸುವುದರಿಂದ ರಾಷ್ಟ್ರಾಭಿವೃದ್ಧಿ ಸಾಧ್ಯ ಎಂದು ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಶ್ರೀಮಂಗಳೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ಜರುಗಿದ ಸ್ವಾತಂತ್ರ್ಯ ಹಬ್ಬ, ಸಮಾನತೆಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯಗೊಳ್ಳಲು ಹೋರಾಡಿದ ಎಲ್ಲ ಮಹಾನ್ ಸ್ವಾತಂತ್ರ ಹೋರಾಟಗಾರರನ್ನು ನಾವೆಲ್ಲರೂ ಸ್ಮರಿಸಬೇಕು. ಲಕ್ಷಕ್ಕಿಂತ ಹೆಚ್ಚು ಸಂಬಳ ಪಡೆದು ಕೆಲಸ ಮಾಡುವುದು ದೊಡ್ಡದೇನಲ್ಲ ಆದರೆ ನಮ್ಮ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಕಡಿಮೆ ಸಂಬಳ ಪಡೆದುಕೊಂಡು ಸಮಾಜಕ್ಕಾಗಿ ದುಡಿಯುತ್ತಿರುವ ಕಾರ್ಯ ಶ್ಲಾಘನೀಯವಾದದ್ದು. ಸಮಾಜದಲ್ಲಿ ಸದ್ಯ ಸಮಾನತೆ ಹುಡುಕುವಂತಾಗಿದೆ. ದೇಶದಲ್ಲಿ ಭ್ರಷ್ಟಾಚಾರ, ಅಸಮಾನತೆ, ಜಾತಿ ವ್ಯವಸ್ಥೆ ಹೋಗಲಾಡಿಸಿದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ಭಾರತ ದೇಶದಲ್ಲಿ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಜೀವನ ಮುಡಿಪಾಗಿಟ್ಟು ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಅಂತಹ ಮಹಾನ್ ವ್ಯಕ್ತಿಗಳ ಆದರ್ಶ ಪಾಲಿಸಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಶರಣಪ್ಪ ಉಮಚಗಿ, ಡಾ.ಬಿ.ಆರ್ ಅಂಬೇಡ್ಕರವರ ಸಾಮಾಜಿಕ ಸಮಾನತೆಯ ತಳಹದಿಯ ಮೇಲೆ ಸಂವಿಧಾನ ಯಶಸ್ವಿಯಾಗಲಿ ಎಂದರು.
ಗಜೇಂದ್ರಗಡದ ಕಾಲಜ್ಞಾನಮಠದ ಡಾ.ಶರಣಬಸವೇಶ್ವರ ಸ್ವಾಮೀಜಿ ಮಾತನಾಡಿ, ಪ್ರೀತಿ, ವಿಶ್ವಾಸ,ನಂಬಿಕೆ ಜೀವನ ನಡೆಸಬೇಕು. ಸಮಾಜಕ್ಕೆ ನಮ್ಮದೇ ಆದ ಏನಾದರೂ ಕೊಡುಗೆ ನೀಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಎತ್ತರದ ಗುರಿ ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದರು.ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ ಮಾತನಾಡಿ, ಈ ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರೇ ಯಾರು ಕೆಟ್ಟವರಲ್ಲ.ಆದರೆ ಎಲ್ಲ ಜಾತಿಗಳು ಕೂಡ ಶ್ರೇಷ್ಠನೆ. ಯಾವು ಕೆಟ್ಟವು ಅಲ್ಲ. ನಾವು ನೋಡುವ ದೃಷ್ಟಿಕೋನ ಮಾತ್ರ ಕೆಟ್ಟದ್ದಿರುತ್ತೆ. ಹಾಗಾಗಿ ಎಲ್ಲರನ್ನೂ ಗೌರವಿಸುವಂಥ ಪರಂಪರೆ ಎಲ್ಲರನ್ನೂ ಪ್ರೀತಿಸುವಂಥ ಪರಂಪರೆ ತಾಳಬೇಕು ಎಂದರು.
ಈ ವೇಳೆ ಆಶಾ ಕಾರ್ಯಕರ್ತರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಶೇಖರಗೌಡ ಪೊಲೀಸ್ ಪಾಟೀಲ್, ಶೇಖರಗೌಡ ಮಾಲಿಪಾಟೀಲ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ವ್ಹಿ ಕಣವಿ, ವಕೀಲ ಬಸವರಾಜ ಮೇಲು ಸಕ್ಕರೆ, ಹನುಮಂತರಾವ, ಎನ್.ವೆಂಕಟೇಶ್ ಸ್ಲಲಂ, ಭರತ ಕುಮಾರ್, ತನ್ವೀರ್ ಅಹ್ಮದ, ಕಾರ್ಯಕ್ರಮ ಆಯೋಜನ ರವಿ ನಿಂಗಪ್ಪ ಆಗೋಲಿ ಇದ್ದರು.