ಸಾಣೇಹಳ್ಳೀಯಲ್ಲಿ ನ. 2ರಿಂದ ರಾಷ್ಟ್ರೀಯ ನಾಟಕೋತ್ಸವ

| Published : Oct 26 2025, 02:00 AM IST

ಸಾರಾಂಶ

ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನ. 2ರಿಂದ 7ರವೆರೆಗೆ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನ. 2ರಿಂದ 7ರವೆರೆಗೆ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಶ್ರೀಮಠದಲ್ಲಿ ನಾಟಕೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮಠಾಧೀಶರು, ಸಾಹಿತಿಗಳು, ಚಿಂತಕರು, ರಾಜಕೀಯ ಮುಖಂಡರು ಭಾಗವಹಿಸುವರು. ಪ್ರತಿದಿನ ಸಂಜೆ ವೇದಿಕೆಯ ಕಾರ್ಯಕ್ರಮದಲ್ಲಿ ಒಂದೊಂದು ವಿಷಯ ಕುರಿತಂತೆ ಚಿಂತಕರು ತಮ್ಮ ಚಿಂತನೆಯನ್ನು ಹಂಚಿಕೊಳ್ಳುವರು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡುವರು. ಶಾಲಾ ವಿದ್ಯಾರ್ಥಿಗಳು ವಚನ ನೃತ್ಯ ಮಾಡುವರು. ಶಿವಸಂಚಾರ - 25 ರ ನಾಟಕಗಳು ಜಂಗಮದೆಡೆಗೆ, ಕಳ್ಳರ ಸಂತೆ, ಶಿವಯೋಗಿ ಸಿದ್ಧರಾಮೇಶ್ವರ ನಾಟಕ ಪ್ರದರ್ಶನ ನಡೆಯುವುದು.

7ರಂದು ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸುವರು. ಅಂದು ಶಿವಕುಮಾರ ಪ್ರಶಸ್ತಿಗೆ ಭಾಜನರಾದ ರಂಗಭೂಮಿಯ ಕಲಾವಿದೆ ಹಾಗೂ ಚಲನಚಿತ್ರ ನಟಿ ಉಮಾಶ್ರೀಯವರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಪ್ರತಿದಿನ ಬೆಳಗ್ಗೆ ಇಷ್ಟಲಿಂಗ ದೀಕ್ಷೆ ಹಾಗೂ ಚಿಂತನಾ ಕಾರ್ಯಕ್ರಮ ನಡೆಯುವುದು. ನ 5 ರಂದು ಬೆಳಗ್ಗೆ 10 ಗಂಟೆಗೆ ಸಾವಯವ ಕೃಷಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ ಹಾಗೂ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೊಸದುರ್ಗದ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಾದ್ ಮೋಸಿನ್, ಮುಖ್ಯೋಪಾದ್ಯಾಯರಾದ ಬಸವರಾಜ್, ಶಿವಕುಮಾರ್, ಸ್ಕೌಟ್ ಗೈಡ್ ಸಂಚಾಲಕ ಯೋಗರಾಜ್ ಹಾಗೂ ವಿದ್ಯಾರ್ಥಿಗಳು ಇದ್ದರು.