ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ರಾಷ್ಟ್ರೀಯ ಹಬ್ಬಗಳನ್ನು ಕಾಟಾಚಾರಕ್ಕೆ ಆಚರಿಸದೆ ನಮಗೆ ಸ್ವಾತಂತ್ರ್ಯ ಬಂದ ದಿನವನ್ನು ಅರ್ಥಪೂರ್ಣವಾಗಿ ಹಾಗೂ ಹೆಮ್ಮೆಯಿಂದ ಆಚರಿಸಿಕೊಳ್ಳಬೇಕು ಎಂದು ನ್ಯಾ . ಎಂ ಎಸ್. ಶಶಿಕಲಾ ಹೇಳಿದರು.ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಎಸ್. ಶಶಿಕಲಾ, ರಾಷ್ಟ್ರೀಯ ಹಬ್ಬಗಳನ್ನು ಕೇವಲ ಕಾಟಾಚಾರಕ್ಕೆ ಮಾಡಬಾರದು ವಕೀಲರು ಮತ್ತು ನೌಕರರ ಸಹಾಯದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ರಾಷ್ಟ್ರೀಯ ಹಬ್ಬಗಳನ್ನು ಎಲ್ಲಾ ಸರ್ಕಾರಿ ಇಲಾಖೆಗಳು ಅರ್ಧ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೌಕರರನ್ನು ಖುಷಿಪಡಿಸುವಂತಿರಬೇಕು. ನೌಕರರು ಹಾಗೂ ವಕೀಲರು ಸಂಭ್ರಮದಿಂದ ವಿವಿದ ವೇಷಭೂಷಣ ಹಾಗೂ ಭಾರತೀಯ ಸಂಸ್ಕೃತಿಯ ಸಮವಸ್ತ್ರಗಳನ್ನು ಧರಿಸಿರುವುದು ನಮಗೆ ತುಂಬಾ ಸಂತೋಷ ತಂದಿದೆ. ಈ ದಿನ ವಿಶೇಷವಾಗಿ ಹತ್ತು ಜನ ಸಾಧಕರನ್ನು ಗುರುತಿಸಿ, ಅವರವರ ಸಾಧನೆಯನ್ನು ವೇದಿಕೆಯ ಮೂಲಕ ಪರಿಚಯಿಸಿ ಗೌರವಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಕಾರ್ಯಕ್ರಮಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿರುವ ಎಲ್ಲರಿಗೂ ಅಭಿನಂದಿಸಿದರು.
ನ್ಯಾಯಾಲಯದ ಸಿಬ್ಬಂದಿ ಎಮ್ ಕೆ ಪ್ರಕಾಶ್ ಮಾತನಾಡಿ, ಬೇಲೂರಿನಲ್ಲಿ ನ್ಯಾಯಾಲಯದ ಸಿಬ್ಬಂದಿ ವರ್ಗದವರಿಗಾಗಿ ವಸತಿಗೃಹದ ಅವಶ್ಯಕತೆ ಇರುತ್ತದೆ ಇದಕ್ಕಾಗಿ ಒಂದು ಜಾಗವನ್ನು ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ನ್ಯಾಯಾಲಯಗಳು ಕೇವಲ ಕೆಲಸ ಕಾರ್ಯಗಳಿಗಷ್ಟೇ ಸೀಮಿತವಾಗದೆ ರಾಷ್ಟ್ರೀಯ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ವಕೀಲರಲ್ಲಿ ಮತ್ತು ನೌಕರರಲ್ಲಿ ಒಳ್ಳೆ ಬಾಂಧವ್ಯವನ್ನು ಇಟ್ಟುಕೊಂಡು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ನ್ಯಾಯಾಲಯ ಸಿಬ್ಬಂದಿ ವರ್ಗದವರಿಗೆ ವಸತಿಗೃಹವನ್ನು ಮಾಡಿಕೊಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಪೃಥ್ವಿ, ಈ ಕಾರ್ಯಕ್ರಮದ ಹಿಂದೆ ಎಲ್ಲರ ಸಹಕಾರವಿತ್ತು. ಹಾಗಾಗಿ ಅದ್ಧೂರಿ ಕಾರ್ಯಕ್ರಮವನ್ನು ಮಾಡಲಾಗಿದೆ. ಇನ್ನು ಮುಂದೆ ಪ್ರತಿವರ್ಷ ನ್ಯಾಯಾಲಯ ಆವರಣದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆಂದರು.ಕಾರ್ಯಕ್ರಮದಲ್ಲಿ ಹಿರಿಯ ವಕೀಲರು ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬೇಲೂರಿನಲ್ಲಿ 1992ರಲ್ಲಿ ನ್ಯಾಯಾಲಯ ಪ್ರಾರಂಭವಾದ ದಿನದಿಂದಲೂ ಇದುವರೆಗೂ ಇಂತಹ ಕಾರ್ಯಕ್ರಮಗಳು ನಡೆದಿಲ್ಲ. ನ್ಯಾಯಾಧೀಶರ ಸಹಕಾರದಿಂದ ನೌಕರರು ಮತ್ತು ವಕೀಲರ ಮಿತ್ರರ ಎಲ್ಲರದ ಪರಿಶ್ರಮದಿಂದ ರಾಷ್ಟ್ರೀಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಕೀಲರು ಮತ್ತು ಎಲ್ಲಾ ಸರ್ಕಾರಿ ನೌಕರರು ವಿಶೇಷ ವೇಷಭೂಷಣ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವೇದಿಕೆಯಲ್ಲಿ ವಿಶೇಷವಾಗಿತ್ತು. ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕಲಾವಿದರು ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಯಿತು.
ವೇದಿಕೆ ಕಾರ್ಯಕ್ರಮದ ನಿರೂಪಣೆಯನ್ನು ಹಾಸನ ನ್ಯಾಯಾಲಯದ ಸಿಬ್ಬಂದಿ ಜೀವನ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಮಾಜಿ ವಕೀಲರ ಸಂಘದ ಅಧ್ಯಕ್ಷ ಎಚ್ ಆರ್ ಚಂದ್ರು, ಹಿರಿಯ ವಕೀಲರಾದ ರಾಜಶೇಖರ್, ಚಂದ್ರೇಗೌಡ ಸ್ವಾಮಿಗೌಡ, ಮಂಜುನಾಥ್, ಕಾರ್ಯದರ್ಶಿ ಪುಟ್ಟ ಸ್ವಾಮಿ ಗೌಡ, ಅಡಳಿತಾತ್ಮಕ ನ್ಯಾಯಾಲಯದ ಸಿಬ್ಬಂದಿ ರಮೇಶ್, ನಾಗವೇಣಿ, ಮಂಜುನಾಥ್, ಅನುಪಮ ಇಂದುಮತಿ, ಕೀರ್ತಿ ಪ್ರಕಾಶ್, ಯಾಸಿನ್ ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.