ರಾಷ್ಟ್ರನಾಯಕರು, ಕ್ರಿಕೆಟ್‌ ತಾರೆಗಳಂತೆ ಮಿಂಚುವ ಗುರಿ ಮುಖ್ಯ: ಮಲ್ಲಿಕಾರ್ಜುನ್

| Published : Dec 17 2024, 12:46 AM IST

ರಾಷ್ಟ್ರನಾಯಕರು, ಕ್ರಿಕೆಟ್‌ ತಾರೆಗಳಂತೆ ಮಿಂಚುವ ಗುರಿ ಮುಖ್ಯ: ಮಲ್ಲಿಕಾರ್ಜುನ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಶಾಲೆಯ ಕ್ರೀಡಾ ಸಾಮಗ್ರಿಗಳು ಮತ್ತು ಇತರೆ ವಸ್ತುಗಳನ್ನು ಹಾಳು ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಾಲಿವಾಣ ಪ್ರಾಥಮಿಕ ಶಾಲೆ ಶಿಕ್ಷಕ ಆರ್.ಬಿ. ಮಲ್ಲಿಕಾರ್ಜುನ್ ಮಲೇಬೆನ್ನೂರಲ್ಲಿ ಹೇಳಿದ್ದಾರೆ.

- ಮಾರುತಿ ಶಾಲೆಗೆ ಕ್ರೀಡಾ ಸಾಮಗ್ರಿಗಳ ವಿತರಣೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ವಿದ್ಯಾರ್ಥಿಗಳು ಶಾಲೆಯ ಕ್ರೀಡಾ ಸಾಮಗ್ರಿಗಳು ಮತ್ತು ಇತರೆ ವಸ್ತುಗಳನ್ನು ಹಾಳು ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಾಲಿವಾಣ ಪ್ರಾಥಮಿಕ ಶಾಲೆ ಶಿಕ್ಷಕ ಆರ್.ಬಿ. ಮಲ್ಲಿಕಾರ್ಜುನ್ ಹೇಳಿದರು.

ಸೋಮವಾರ ಪಟ್ಟಣದ ಶ್ರೀ ಮಾರುತಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಸಿನೋಪ್ಸಿಸ್ ಮತ್ತು ಇಂಡಿಯಾ ಸುಧಾರ್ ಸಂಸ್ಥೆಗಳು ನೀಡಿದ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ವಿತರಿಸಿ ಅವರು ಮಾತನಾಡಿದರು. ರಾಷ್ಟ್ರವನ್ನು ಬೆಳಗಿದ ರಾಜಕಾರಣಿಗಳು ಮತ್ತು ಕ್ರಿಕೆಟ್ ತಾರೆಗಳಂತೆ ಪ್ರಾಥಮಿಕ ಶಾಲಾ ಮಕ್ಕಳು ಸಹ ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂಬ ಗುರಿ ಹೊಂದಿರಬೇಕು ಎಂದರು.

ಶಾಲೆಗಳಲ್ಲಿರುವ ಪಠ್ಯಪುಸ್ತಕ, ಕ್ರೀಡಾ ಸಾಮಗ್ರಿ, ಗ್ರಂಥಾಲಯ ಪುಸ್ತಕಗಳು, ಗಣಕಯಂತ್ರ ಜ್ಞಾನ, ನೀತಿ ಪಾಠಗಳನ್ನೇ ಆಲಿಸಿ, ಸಾಧನೆ ಮಾಡಲಿಕ್ಕೆ ಸಾಧ್ಯವಿದೆ. ಹಾಗಾಗಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ನಿತ್ಯ ಹೆಚ್ಚಿನ ಸಮಯ ಮೀಸಲಿಡಬೇಕು ಎಂದು ತಿಳಿಸಿದರು.

ಅನುದಾನಿತ ಶಾಲಾ ಒಕ್ಕೂಟ ಅಧ್ಯಕ್ಷ ಕೆ.ಭೀಮಪ್ಪ ಮಾತನಾಡಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಹೆಗಡೆ ಅವರ ಶ್ರಮದಿಂದ ತಾಲೂಕಿನ ಸಹಸ್ರಾರು ಮಕ್ಕಳಿಗೆ ಕಾರ್ಪೋರೇಟ್ ಸಂಸ್ಥೆಗಳಿಂದ ಕಲಿಕೆ, ಕ್ರೀಡಾ ಸಾಮಗ್ರಿಗಳು ಸರಬರಾಜಾಗುತ್ತಿವೆ. ಇದರಿಂದ ಮಕ್ಕಳ ಹಾಜರಾತಿಯೂ ಹೆಚ್ಚಾಗಿದೆ. ಶಾಲೆ ಅಭಿವೃದ್ಧಿಗೆ ಕ್ರಿಯಾಶೀಲ ಶಿಕ್ಷಕರ ವೇದಿಕೆ ನಿರಂತರ ಶ್ರಮಿಸಲಿದೆ ಎಂದರು.

ಮಾರುತಿ ವಿದ್ಯಾ ಸಂಸ್ಥೆ ನಿರ್ದೇಶಕ ಎಂ.ಕೆ. ರಾಮ ಶೆಟ್ಟಿ ಮಾತನಾಡಿ, ಕೆಲವರಲ್ಲಿ ಹಣ ಇರುತ್ತೆ, ದಾನ ಮಾಡುವ ಮನಸಿರುವುದಿಲ್ಲ. ದಾನ ನೀಡುವ ಮನಸ್ಸಿದ್ದವರಲ್ಲಿ ಹಣವೇ ಇರುವುದಿಲ್ಲ. ಶಾಲೆಗಳಲ್ಲಿ ಬಡಮಕ್ಕಳ ದಯನೀಯ ಸ್ಥಿತಿ ಕಂಡು ಕಾರ್ಪೋರೇಟ್ ಸಂಸ್ಥೆಗಳು ಬ್ಯಾಗ್‌ಗಳು, ಕಲಿ-ನಲಿ ಟೇಬಲ್‌ಗಳು, ಶೌಚಾಲಯಗಳು ಮತ್ತಿತರ ಅಗತ್ಯತೆಗಳನ್ನು ಪೂರೈಸುತ್ತಿರುವುದು ಶ್ಲಾಘನೀಯ ಸೇವೆಯಾಗಿದೆ. ಈ ಶಾಲೆಗೆ ಮಕ್ಕಳಿಗೆ ಅಗತ್ಯವಿರುವ ಡೆಸ್ಕ್‌ಗಳ ಸೌಲಭ್ಯ ಕಲ್ಪಿಸಬೇಕಿದೆ ಎಂದು ವಿನಂತಿಸಿದರು.

ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಜೋಯ್ಸ್, ಶಿಕ್ಷಕರ ಸೇವಾ ವೇದಿಕೆಯ ಜಿ.ಶಶಿಕುಮಾರ್, ಆನಂದ ಭೂತರೆಡ್ಡಿ, ಎಚ್. ಶಶಿಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಎಂ. ಗಿರೀಶ್, ದಾದಾಪೀರ್, ಮುಖ್ಯಶಿಕ್ಷಕ ಸಿ. ಪರಮೇಶ್ವರಪ್ಪ, ಡಿ.ಬಿ. ಹನುಮಂತಪ್ಪ, ಗೀತಾ, ರೇಣುಕಾ, ಸದಾನಂದ ಹಾಗೂ ಶಿಕ್ಷಕರು ಇದ್ದರು.

- - - -೧೬ಎಂಬಿಆರ್೧.ಜೆಪಿಜಿ:

ಮಲೇಬೆನ್ನೂರಿನ ಮಾರುತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.