ಕೈ ತಪ್ಪಿದ್ದ ರಾಷ್ಟ್ರೀಯ ಹೆದ್ದಾರಿ ಮಂಜೂರು: ಬಸವರಾಜ ರಾಯರಡ್ಡಿ

| Published : Dec 03 2024, 12:32 AM IST

ಕೈ ತಪ್ಪಿದ್ದ ರಾಷ್ಟ್ರೀಯ ಹೆದ್ದಾರಿ ಮಂಜೂರು: ಬಸವರಾಜ ರಾಯರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಮಂಜೂರು ಆಗಿದ್ದು ಯಲಬುರ್ಗಾ ಕ್ಷೇತ್ರದ ಸುದೈವ.

ಸಿಎಂ ಆರ್ಥಿಕ ಸಲಹೆಗಾರ । ಭಾನಾಪೂರ ಮೇಲ್ಸೇತುವೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕುಕನೂರು

2014ರ ಮಾ.3ರ ಮಧ್ಯರಾತ್ರಿ ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಕಚೇರಿಗೆ ತೆರಳಿ ಭಾನಾಪೂರ-ಗದ್ದನಕೇರೆ 367 ರಾಷ್ಟ್ರೀಯ ಹೆದ್ದಾರಿಯನ್ನು ಮಂಜೂರು ಮಾಡಿಸಿದ್ದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸ್ಮರಿಸಿದರು.

ತಾಲೂಕಿನ ಭಾನಾಪೂರ ಗ್ರಾಮದಲ್ಲಿ ಭಾನಾಪುರ ಗ್ರಾಪಂ ವತಿಯಿಂದ ಭಾನಾಪೂರ ಮೇಲ್ಸೇತುವೆ ಉದ್ಘಾಟನೆ ವೇಳೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಮಂಜೂರಾತಿಗೆ ನಾನು 2004, ಜುಲೈ 16ರಿಂದ ಶಾಸಕನಿದ್ದಾಗ ಪ್ರಯತ್ನ ಮಾಡಿದ್ದೆ. ಆಗಿನ ಸಿಎಂ ಧರ್ಮಸಿಂಗ್ ಸಾರಿಗೆ ಇಲಾಖೆಗೆ ಪತ್ರ ಬರೆದಿದ್ದರು. ಮುಂದೆ ಸಿದ್ದರಾಮಯ್ಯ ಸಿಎಂ ಆದಾಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರು. ನಂತರ ನಾನು ಆಗಿನ ಭೂ ಸಾರಿಗೆ ಇಲಾಖೆ ಕೇಂದ್ರ ಸಚಿವ ಆಸ್ಕರ್ ಫನಾಂಡಿಸ್ ಅವರನ್ನು ಮಧ್ಯರಾತ್ರಿ 12 ಗಂಟೆಗೆ ಭೇಟಿ ಆದಾಗ ರಾಷ್ಟ್ರೀಯ ಹೆದ್ದಾರಿ ಮಂಜೂರಾತಿಯಲ್ಲಿ ಭಾನಾಪೂರ, ಕುಕನೂರು, ಯಲಬುರ್ಗಾ ಮಾರ್ಗವೇ ಇರಲಿಲ್ಲ ಇದನ್ನು ಅವರಿಗೆ ತಿಳಿಸಿದೆ. ಗಜೇಂದ್ರಗಡದ ಮೂಲಕ ಕುಷ್ಟಗಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮಂಜೂರಾತಿ ಇತ್ತು. ಅದನ್ನು ಸರಿಪಡಿಸಿ ಕೈ ತಪ್ಪಿದ್ದ ರಾಷ್ಟ್ರೀಯ ಹೆದ್ದಾರಿಯನ್ನು ಮಂಜೂರು ಮಾಡಿಸಿದೆ. ನಂತರ ದಿನದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಭೂ ಸಾರಿಗೆ ಸಚಿವ ನಿತೀನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಕಾರ್ಯಾರಂಭ ಕೈಗೆತ್ತಿಕೊಂಡರು. ರಾಷ್ಟ್ರೀಯ ಹೆದ್ದಾರಿ ಮಂಜೂರು ಆಗಿದ್ದು ಯಲಬುರ್ಗಾ ಕ್ಷೇತ್ರದ ಸುದೈವ ಎಂದರು.

ರಾಜ್ಯದಲ್ಲಿ ಹಣದ ಕೊರತೆ ಇಲ್ಲ:

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಗ್ಯಾರಂಟಿ ಯೋಜನೆಗಳಿಂದ ಹಣದ ಕೊರತೆ ಇದೆ ಎಂಬ ಮಾತೇ ಇಲ್ಲ. ಈ ವರ್ಷದ ಬಜೆಟ್ ₹3.75 ಲಕ್ಷ ಕೋಟಿ, ಮುಂದಿನ ಬಜೆಟ್ ₹4 ಲಕ್ಷ ಕೋಟಿ ಆಗಲಿದೆ. ರಾಜ್ಯ ರಸ್ತೆಗಳ ಅಭಿವೃದ್ಧಿಗೆ ₹4 ಸಾವಿರ ಕೋಟಿ ಮೀಸಲಿಡಲಾಗಿದೆ. ಪ್ರತಿ ತಾಲೂಕಿಗೆ ₹35 ಕೋಟಿ ಹಣವನ್ನು ರಸ್ತೆ ಅಭಿವೃದ್ಧಿಗೆ ಕಲ್ಯಾಣ ಪಥ ಯೋಜನೆ ಹಾಗೂ ಪ್ರಗತಿ ಪಥದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ರಾಯರಡ್ಡಿ ಹೇಳಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಭಾನಾಪೂರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಈ ಭಾಗದ ಜನರ ಬಹುದಿನದ ಆಸೆ ಆಗಿತ್ತು. ರಾಯರಡ್ಡಿ, ಸಂಗಣ್ಣ ಕರಡಿ ಅವರ ಪ್ರಯತ್ನದ ಫಲವಾಗಿ ಮೇಲ್ಸೇತುವೆ ನಿರ್ಮಾಣ ಆಗಿದೆ. ನನಗೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ರಾಜಕಾರಣಿಗಳಿಗೆ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇರಬೇಕು. ಅಂತವರಲ್ಲಿ ರಾಯರಡ್ಡಿ, ಸಂಗಣ್ಣ ಕರಡಿ ಹಾಗೂ ನನ್ನ ತಂದೆ ಬಸವರಾಜ ಹಿಟ್ನಾಳ ಅವರನ್ನು ಮಾದರಿಯಾಗಿ ಸ್ವೀಕರಿಸಬಹುದು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಜಿಲ್ಲೆಗೆ ಏರ್ ಪೋರ್ಟ್‌, ಗಂಗಾವತಿ ರೈಲ್ವೆ ಸ್ಟೇಷನ್‌ನಿಂದ ಅಂಜನಾದ್ರಿವರೆಗೆ 10 ಕಿಮೀ ರೋಪ್ ವೇ ಮಾಡುವ ಕಾರ್ಯವನ್ನು ರಾಯರಡ್ಡಿ ಹಾಗೂ ಸಂಸದರು ಮಾಡಬೇಕು ಎಂದರು.

ತಹಸೀಲ್ದಾರ ಎಚ್. ಪ್ರಾಣೇಶ, ತಾಪಂ ಇಒ ಸಂತೋಷ ಬಿರಾದಾರ, ಗ್ರಾಪಂ ಅಧ್ಯಕ್ಷ ಕರಿಯಪ್ಪ, ಉಪಾಧ್ಯಕ್ಷೆ ಪವಿತ್ರಾ ಭಂಗಿ, ಪ್ರಮುಖರಾದ ಹನುಮಂತಗೌಡ ಚಂಡೂರು, ವೀರನಗೌಡ ಬಳೂಟಗಿ, ಚಂದ್ರಶೇಖರಯ್ಯ ಹಿರೇಮಠ, ಮಂಜುನಾಥ ಕಡೇಮನಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಕೃಷ್ಣರೆಡ್ಡಿ, ಗಿರೀಶ ಇತರರಿದ್ದರು. ಯೋಜನಾ ಆಯೋಗದ ಜೊತೆ ಸಭೆ:

ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ಒಂದೂ ಸಹ ರಾಷ್ಟ್ರೀಯ ಹೆದ್ದಾರಿ ಮಂಜೂರು ಆಗಿಲ್ಲ. ಹಳೆಯ ಮಂಜೂರಾತಿಗಳನ್ನು ಮಾತ್ರ ಕೈಗೆತ್ತಿಕೊಂಡಿದ್ದಾರೆ. ರಾಜ್ಯದ ಸಂಸದರು ಮೋದಿ, ಅಮಿತ್ ಶಾ ಅವರಿಗೆ ಹೆದರುತ್ತಾರೆ. ಅವರ ಬಳಿ ತೆರಳಿ ಯಾವುದೇ ಯೋಜನೆ ತರುವುದಿಲ್ಲ. ಅಲ್ಲದೆ ರಾಜ್ಯಕ್ಕೆ ಬರಬೇಕಾಗಿರುವ 16ನೇ ಹಣಕಾಸು ಯೋಜನೆ ಹಣ ಸಹ ಸರಿಯಾಗಿ ಬಂದಿಲ್ಲ. ಇದರ ಬಗ್ಗೆ ಯೋಜನಾ ಆಯೋಗದ ಜೊತೆ ಸಭೆ ಮಾಡಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.