ಸಾರಾಂಶ
ವಿದ್ಯಾರ್ಥಿಗಳ ಸುರಕ್ಷಾ ಮೇಲ್ವಿಚಾರಣಾ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕನಕಗಿರಿಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸರಿಯಾಗಿ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ, ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಸೂಚಿಸಿದರು.
ಸೋಮವಾರ ತಹಸೀಲ್ ಕಚೇರಿಯಲ್ಲಿ ನಡೆದ ವಿದ್ಯಾರ್ಥಿಗಳ ಸುರಕ್ಷಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಸತಿ ನಿಲಯಗಳಲ್ಲಿ ಬೆಳಕಿನ ವ್ಯವಸ್ಥೆ, ಊಟ, ಉಪಾಹಾರ ಗುಣಮಟ್ಟದ್ದಾಗಿರಬೇಕು. ವಿದ್ಯಾರ್ಥಿಗಳಿಗೆ ಆರೋಗ್ಯ ಪರೀಕ್ಷೆ ಮಾಡಿಸಬೇಕು. ಬಾಲ್ಯ ವಿವಾಹ ಸೇರಿದಂತೆ ನಾನಾ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಪೊಲೀಸ್ ಇಲಾಖೆಯವರ ಸಹಕಾರದೊಂದಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಶೌಚ, ಸ್ನಾನ ಗೃಹ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ವಿದ್ಯುತ್ ದುರಸ್ತಿ ಇತ್ಯಾದಿ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಬೇಕು. ಈ ಬಗ್ಗೆ ಸಮಿತಿಯ ಅಧ್ಯಕ್ಷರಾಗಿ ಆಗಾಗ ವಸತಿ ನಿಲಯಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ನಂತರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಶೃತಿ ಮಾತನಾಡಿ, ವಸತಿ ನಿಲಯಗಳ ಮಕ್ಕಳು ಕೇವಲ ಊಟ, ಉಪಾಹಾರದ ಜತೆಗೆ ವಿದ್ಯಾರ್ಥಿಗಳು ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದಾರಾ? ದುಶ್ಚಟಗಳಿಗೆ ಬಲಿಯಾಗಿದ್ದಾರಾ? ಅವರ ಒಡನಾಟದ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದರು.ಎಎಸ್‌ಐ ಕೃಷ್ಣ ವಿ., ಪರಿಶಿಷ್ಟ ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ರಾಜು ಮಡ್ಡಿ, ವಾರ್ಡನ್‌ಗಳಾದ ಹುಸೇನಬೀ, ಗೌರಮ್ಮ, ವೀರೇಶ, ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಇತರರಿದ್ದರು.