ಸಾರಾಂಶ
ಯಲ್ಲಾಪುರ: ಸರಕಾರಿ ಪ್ರಥಮ ದರ್ಜೆ ಕಾಲೇಜು ಯಲ್ಲಾಪುರ, ಯುವ ರೆಡ್ ಕ್ರಾಸ್ ಘಟಕ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು, ಜಿಪಂ ಉತ್ತರ ಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಉತ್ತರಕನ್ನಡ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಯಲ್ಲಾಪುರ, ತಾಲೂಕು ಆಸ್ಪತ್ರೆ, ಐಸಿಟಿಸಿ ಯಲ್ಲಾಪುರ ಹಾಗೂ ಗ್ರೀನ್ ಕೇರ್ ಶಿರಸಿ ಸಹಯೋಗದಲ್ಲಿ ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ. ೧ರಂದು "ವಿಶ್ವ ಏಡ್ಸ್ ನಿರ್ಮೂಲನಾ ದಿನ " ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಆಹಾರ ಪದ್ಧತಿ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಡಾ. ಸೌಮ್ಯಾ ಕೆ.ವಿ. ವಿದ್ಯಾರ್ಥಿಗಳ ಜೊತೆ ವಿಶ್ವ ಏಡ್ಸ್ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು.ಅತಿಥಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್.ಎಂ. ಮಾತನಾಡಿ, ಜಾಗೃತಿ ಕಾರ್ಯಕ್ರಮಗಳ ಮಹತ್ವದ ಬಗ್ಗೆ ತಿಳಿಸಿದರು. ಯುವ ರೆಡ್ ಕ್ರಾಸ್ ಸಂಚಾಲಕ ಶರತ್‌ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸರಕಾರಿ ಆಸ್ಪತ್ರೆಯ ರಕ್ತಶೇಖರಣ ಘಟಕದ ಮಹಾಂತೇಶ ಮತ್ತು ಗ್ರೀನ್ ಕೇರ್ ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಿದರು.
ನಂತರ ಎಲ್ಲ ಅತಿಥಿಗಳು ಮತ್ತು ವಿದ್ಯಾರ್ಥಿಗಳು ಸೇರಿ "ವಿಶ್ವ ಏಡ್ಸ್ ದಿನ "ದ ಕುರಿತು ಕಾಲ್ನಡಿಗೆಯಲ್ಲಿ ಕಾಳಮ್ಮ ನಗರದ ಎಲ್ಲಾ ಮನೆಮನೆಗಳಿಗೆ ಹೋಗಿ ಭಿತ್ತಿಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ತಾಳಿಕೋಟಿ, ತಾಲೂಕಾಸ್ಪತ್ರೆಯ ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ರಾಘವೇಂದ್ರ ನಾಯ್ಕ ಮತ್ತು ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕ ಚಂದ್ರಶೇಖರ್ ಕವಲಗಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಗೀತಾ ಸಿದ್ಧಿ ನಿರ್ವಹಿಸಿದರು. ಸೌಮ್ಯಾ ಪಟಗಾರ ವಂದಿಸಿದರು.