ಹೋಮಿಯೋಪತಿ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ

| Published : Feb 12 2024, 01:31 AM IST

ಸಾರಾಂಶ

ರೋಗ ತಡೆಗಟ್ಟುವಲ್ಲಿ ರೋಗನಿರೋಧಕ ಶಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ, ರೋಗವು ಬಾಧಿಸುವ ಸಂದರ್ಭದಲ್ಲಿ ವ್ಯಕ್ತಿಯ ಪ್ರತಿರಕ್ಷೆ ಕಾರ‍್ಯವು ಸುಪ್ತವಾಗಿರುವುದರಿಂದ ರೋಗವು ತೀವ್ರವಾಗುತ್ತದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಾರತದಲ್ಲಿ ಎರಡನೇ ಅತೀ ದೊಡ್ಡ ವೈದ್ಯವಿಜ್ಞಾನವಾಗಿರುವ ಹೋಮಿಯೋಪತಿಯು ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಮತ್ತು ಕ್ಯಾನ್ಸರ್‌ಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪ್ರಬಲವಾದ ಔಷಧಗಳನ್ನು ಹೊಂದಿದೆ. ಪ್ರತಿಕೂಲ ಪರಿಣಾಮಗಳಿಲ್ಲದೇ ಉತ್ತಮ ಫಲಿತಾಂಶ ನೀಡುತ್ತದೆ ಎಂದು ನವದೆಹಲಿಯ ಮೆಡಿಕಲ್ ಅಸೆಸ್ಸಮೆಂಟ ರೇಟಿಂಗ್‌ ಬೋರ್ಡ ಫಾರ್‌ ಹೋಮಿಯೋಪಥಿಯ ಅಧ್ಯಕ್ಷ ಡಾ.ಕೆ.ಆರ್ ಜನಾರ್ಧನ ನಾಯರ ಹೇಳಿದರು.

ಕೆಎಲ್‌ಇ ಅಕಾಡೆಮಿ ಆಫ್ ಹೈಯರ್‌ ಎಜ್ಯುಕೇಶನ್ ಆ್ಯಂಡ ರಿಸರ್ಚ್‌ ಕೆಎಲ್‌ಇ ಹೋಮಿಯೋಪಥಿ ಮೆಡಿಕಲ್ ಕಾಲೇಜ ಮತ್ತು ಆಸ್ಪತ್ರೆ, ಕರ್ನಾಟಕ ಕ್ವಾಲಿಫೈಡ್ ಹೋಮಿಯೋಪತಿ ಅಸೋಸಿಯೇಶನ್‌ನ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಹೋಮಿಯೋ ಹೀಲಿಂಗ್ ವಾಯೇಜ್, ಎ ಜರ್ನಿ ಟು ಎಕ್ಸಲೆನ್ಸ್ ಎಂಬ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ - 2024 ಉದ್ಘಾಟಿಸಿ ಅವರು ಮಾತನಾಡಿದರು.

ರೋಗ ತಡೆಗಟ್ಟುವಲ್ಲಿ ರೋಗನಿರೋಧಕ ಶಕ್ತಿಯು ಪ್ರಮುಖ ಪಾತ್ರ ವಹಿಸುತ್ತದೆ, ರೋಗವು ಬಾಧಿಸುವ ಸಂದರ್ಭದಲ್ಲಿ ವ್ಯಕ್ತಿಯ ಪ್ರತಿರಕ್ಷೆ ಕಾರ‍್ಯವು ಸುಪ್ತವಾಗಿರುವುದರಿಂದ ರೋಗವು ತೀವ್ರವಾಗುತ್ತದೆ. ಹೋಮಿಯೋಪತಿ ಚಿಕಿತ್ಸೆಗಳು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿರುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ನೈಸರ್ಗಿಕವಾಗಿ ಗುಣಪಡಿಸುವ ಕಾರ್ಯವಿಧಾನಗಳನ್ನು ಪುನರುತ್ಪಾದಿಸುವಲ್ಲಿ ಹೋಮಿಯೋ ಔಷಧಿಗಳು ಬಹಳ ಸಹಕಾರಿ ಎಂದರು.

ಅತ್ಯಂತ ಸರಳ ವಿಧಾನಗಳನ್ನು ಒಳಗೊಂಡಿರುವ ಈ ಚಿಕಿತ್ಸೆಯು ಬಹಳ ಪ್ರಯೋಜನಕಾರಿ. ರೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತ, ಸಹಾನುಭೂತಿಯೊಂದಿಗೆ ಚಿಕಿತ್ಸೆ ನೀಡಲು ಮತ್ತು ಆರೋಗ್ಯ ರಕ್ಷಣೆಗೆ ಅವಶ್ಯವಿರುವ ವಿಧಾನಗಳನ್ನು ಅನುಸರಿಸಬೇಕು. ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನಾಗಿರುತ್ತದೆ. ಆದ್ದರಿಂದ ಅವರ ಅಗತ್ಯತೆ ಹಾಗೂ ಅವರ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಇಲ್ಲಿ ತಾಳ್ಮೆ ಅತ್ಯಂತ ಮುಖ್ಯವಾಗಿರುತ್ತದೆ ಎಂದು ಹೇಳಿದರು.

ನವದೆಹಲಿಯ ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಕಾರ‍್ಯದರ್ಶಿ ಡಾ.ಸಂಜಯ್ ಗುಪ್ತಾ ಅವರು, ವೈದ್ಯಕೀಯ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ ಗಳನ್ನು ಸಂಯೋಜಿಸಲು ಅಗತ್ಯವಿರುವ ಸಹಕಾರ ನೀಡಲಾಗುತ್ತದೆ. ನೂತನ ಶಿಕ್ಷಣ ನೀತಿ ಅಳವಡಿಸಿಕೊಂಡು ಒಂದೇ ಸೂರಿನಡಿ ಹೋಮಿಯೋಪಥಿಗೆ ಅವಶ್ಯವಿರುವ ನೀತಿ ನಿರೂಪಣೆ ಹಂತಹಂತವಾಗಿ ಜಾರಿಗೆ ತರಲಾಗುತ್ತದೆ. ಹೋಮಿಯೋಪಥಿ ವೈದ್ಯರಿಗೂ ಕೂಡ ಅಗತ್ಯ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿತಿನ್ ಗಂಗಾನೆ ಮಾತಾನಡಿ, ಕೃತಕ ಬುದ್ದಿಮತ್ತೆ ಮತ್ತು ಡಾಟಾ ಸೈನ್ಸ್ ಕೋರ್ಸ್‌ಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದ್ದು, ಅನುಮೋದನೆಗಾಗಿ ಹೋಮಿಯೋಪತಿ ಕೌನ್ಸಿಲ್‌ಗೆ ಕಳುಹಿಸಿಕೊಡಲಾಗಿದೆ. ಗುಣಾತ್ಮಕ ಸಂಶೋಧನೆಗೆ ಆರ್ಥಿಕ ಸಹಾಯ ಹಾಗೂ ಅಗತ್ಯವಿರುವ ಸಹಕಾರ ನೀಡಲಾಗುತ್ತದೆ. ಆದ್ದರಿಂದ ಹೆಚ್ಚೆಚ್ಚು ಸಂಶೋಧನೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದ ಅವರು, ಹೋಮಿಯೋಪಥಿ ಜರ್ನಲ್ ವಿಷೇಶ ಸಂಚಿಕೆ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಕ್ವಾಲಿಫೈಡ್ ಹೋಮಿಯೋಪತಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಶ್ರೀಪಾದ್ ಹೆಗಡೆ ಮಾತನಾಡಿದರು. 41 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಸಮ್ಮೇಳನದಲ್ಲಿ 11 ರಾಜ್ಯಗಳ 950 ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು. ಕೆಎಲ್‌ಇ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಎಂ.ಎ. ಉಡಚನಕರ ಸ್ವಾಗತಿಸಿದರು. ಕೆಎಲ್‌ಇ ಹೋಮಿಯೋಪತಿ ಕಾಲೇಜಿನ ಪ್ರಾಚಾರ್ಯ ಡಾ ಸ್ವರೂಪ ಪಾಟೀಲ ವಂದಿಸಿದರು.