ಸಾರಾಂಶ
ಹುಬ್ಬಳ್ಳಿ: ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹುಬ್ಬಳ್ಳಿಯ ಚೇತನ ಸಮೂಹ ಸಂಸ್ಥೆಗೆ ರಾಷ್ಟ್ರ ಮಟ್ಟದ ‘ಸಮಗ್ರ ಶ್ರೇಷ್ಠ ಶಿಕ್ಷಣ ಸಂಸ್ಥೆ’ (ಬೆಸ್ಟ್ ಇನ್ಸ್‌ಟಿಟ್ಯೂಷನ್ ಓವರಾಲ್) ಎಂಬ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಅರ್ಪಿಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಡಾ. ವಿಶ್ವನಾಥ ಕೊರವಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹಂಚಿಕೊಂಡ ಅವರು, ಜು. 10ರಂದು ಮುಂಬಯಿಯಲ್ಲಿ ವರ್ಲ್ಡ್ ಎಜ್ಯುಕೇಶನ್ ಕಾಂಗ್ರೆಸ್ ಅವಾರ್ಡ್ ಸಂಸ್ಥೆ ಆಯೋಜಿಸಿದ್ದ ಸಮಾರಂಭದಲ್ಲಿ ಚೇತನ್ ಸಮೂಹ ಸಂಸ್ಥೆಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.ವರ್ಲ್ಡ್ ಎಜ್ಯುಕೇಶನ್ ಕಾಂಗ್ರೆಸ್ ಸಂಸ್ಥೆಯು ವಿಶ್ವದ ವಿವಿಧ ವಿಷಯ ತಜ್ಞರು, ಶಿಕ್ಷಣ ತಜ್ಞರು ಹಾಗೂ ನೀತಿ ನಿರ್ಣಯಕಾರರನ್ನು ಒಂದೆಡೆ ಸೇರಿಸಿ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ದೇಶದ ವಿವಿಧ ರಾಜ್ಯಗಳ ಮಹಾವಿದ್ಯಾಲಯಗಳು ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರು. ಪ್ರಶಸ್ತಿ ಆಯ್ಕೆಯ ತಂಡದಲ್ಲಿನ ವಿಷಯ ಪರಿಣಿತರು, ತಜ್ಞರು ಮತ್ತು ಶೈಕ್ಷಣಿಕ ನಾಯಕತ್ವ ಹೊಂದಿದವರು ವಿವಿಧ ಮಾನದಂಡಗಳ ಆಧಾರದ ಮೇಲೆ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಈ ವರ್ಷ ಚೇತನ ಸಮೂಹ ಸಂಸ್ಥೆಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಅದೇ ರೀತಿ ತಮ್ಮ 32 ವರ್ಷಗಳ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ, ರಾಷ್ಟ್ರ ಮಟ್ಟದ ಅತ್ಯುತ್ತಮ ಶೈಕ್ಷಣಿಕ ನಾಯಕ (ಲೈಫ್‌ಟೈಮ್ ಅಚೀವ್‌ಮೆಂಟ್ ಇನ್ ಎಜ್ಯುಕೇಶನ್ ಲೀಡರ್‌ಶಿಪ್) ಎಂಬ ಪ್ರಶಸ್ತಿ ಸಹ ಲಭಿಸಿದೆ ಎಂದರು.ಚೇತನ್ ಬಿಸಿನೆಸ್ ಸ್ಕೂಲ್‌ನಲ್ಲಿ ಪಿಯುಸಿ ವಾಣಿಜ್ಯ, ಬಿಬಿಎ, ಬಿಸಿಎ ಹಾಗೂ ವಿವಿಧ ಕೋರ್ಸ್ ಓದಿದ ವಿದ್ಯಾರ್ಥಿಗಳು ದೇಶ ಮತ್ತು ಹೊರ ದೇಶದ ದೊಡ್ಡ- ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದರು.
ಸಂಸ್ಥೆಯ ಗೌರವ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಸಾಧನೆ ಮತ್ತು ಕೋರ್ಸ್‌ಗಳನ್ನು ಪರಿಗಣಿಸಿ ವರ್ಲ್ಡ್ ಎಜ್ಯುಕೇಶನ್ ಕಾಂಗ್ರೆಸ್ ಸಂಸ್ಥೆ ‘ಸಮಗ್ರ ಶ್ರೇಷ್ಠ ಶಿಕ್ಷಣ ಸಂಸ್ಥೆ’ ಪ್ರಶಸ್ತಿ ನೀಡಿದೆ. ಸಂಸ್ಥೆಗೆ ಪ್ರಶಸ್ತಿ ಲಭಿಸಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದರು.ಸಂಸ್ಥೆಯ ಕಾರ್ಯಾಧ್ಯಕ್ಷ ಜಗದೀಶ ದ್ಯಾವಪ್ಪನವರ ಮಾತನಾಡಿ, ಈ ಪ್ರಶಸ್ತಿ ನಮ್ಮ ಸಂಸ್ಥೆಯ ವೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ, ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಸಂಸ್ಥೆಯ ನಿರ್ದೇಶಕ ರಮಾಕಾಂತ ಕುಲಕರ್ಣಿ, ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಸೇರಿದಂತೆ ಅನೇಕರಿದ್ದರು.