ಧಾರವಾಡ:

ಜೆಎಸ್‌ಎಸ್‌ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ವತಿಯಿಂದ ಮಾ. 27 ಮತ್ತು 28ರಂದು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ಸಂಕಲ್ಪ ಉತ್ಸವ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಪಾಠ-ಪ್ರವಚನ ಹೊರತುಪಡಿಸಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶಿಷ್ಟ ಪ್ರತಿಭೆ ಹೊರಗೆ ತರಲು 2027-08ರಲ್ಲಿ ಈ ಸಂಕಲ್ಪ ಉತ್ಸವ ಶುರು ಮಾಡಲಾಗಿದೆ. ಈ ಬಾರಿ 11ನೇ ಉತ್ಸವ ಇದಾಗಿದ್ದು, ಕ್ವಿಜ್‌, ಜಾಹೀರಾತು, ಫೋಟೋಗ್ರಫಿ, ವಿಡಿಯೋಗ್ರಫಿ, ಟ್ರಜರ್‌ ಹಂಟ್‌ ಹಾಗೂ ಸಾಂಸ್ಕೃತಿಕ ಎಂಬ ಐದು ಸ್ಪರ್ಧೆಗಳು ಇರಲಿವೆ. ಒಂದು ಕಾಲೇಜಿನಿಂದ 12 ವಿದ್ಯಾರ್ಥಿಗಳ ತಂಡವು ಈ ಐದು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು.

ವಿಜೇತ ತಂಡಕ್ಕೆ ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಯುಜಿ, ಪಿಜಿ ಮತ್ತು ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಈ ಸಂಕಲ್ಪದಲ್ಲಿ ಭಾಗವಹಿಸಬಹುದು ಎಂದ ಅವರು, ಮಾ. 27ರಂದು ಬೆಳಗ್ಗೆ 9.30ಕ್ಕೆ ಸನ್ನಿಧಿ ಕಲಾ ಕ್ಷೇತ್ರದಲ್ಲಿ ಉತ್ಸವಕ್ಕೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಚಾಲನೆ ನೀಡುವರು. ಖ್ಯಾತ ಕಲಾವಿದ ನವೀನ್ ಸಜ್ಜು ಪಾಲ್ಗೊಳ್ಳುವರು. ಮಾ. 28ರಂದು ಸನ್ನಿಧಿಯಲ್ಲಿಯೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕವಿವಿ ಕುಲಪತಿ ಡಾ. ಎ.ಎಂ. ಖಾನ್‌ ವಿಜೇತರಿಗೆ ಬಹುಮಾನ ವಿತರಿಸುತ್ತಾರೆ. ಜೆಎಸ್‍ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಭಾಗವಹಿಸುತ್ತಾರೆ ಎಂದು ಹೇಳಿದರು.

2023ರಲ್ಲಿ ನಡೆದ ಸಂಕಲ್ಪದಲ್ಲಿ 70 ಕಾಲೇಜು ಭಾಗವಹಿಸಿದ್ದು, ಈ ಬಾರಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗೋವಾ ಸೇರಿದಂತೆ ದೇಶದ ವಿವಿಧೆಡೆಯಿಂದ 100ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.


ಜೆಎಸ್‍ಎಸ್ ಎಂಸಿಎ ನಿರ್ದೇಶಕ ಸೂರಜ್ ಜೈನ್ ಮಾತನಾಡಿ, ಈ ಸಂಕಲ್ಪದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬರೀ ಸ್ಪರ್ಧೆ ಮಾತ್ರವಲ್ಲದೇ ಧಾರವಾಡದ ಸಂಸ್ಕೃತಿ, ಶಿಕ್ಷಣ ಹಾಗೂ ಜೆಎಸ್‌ಎಸ್‌ ಸಂಸ್ಥೆಯ ಶೈಕ್ಷಣಿಕ ವೈಭವ ಸಹ ಪ್ರದರ್ಶಿಸುವ ಕಾರ್ಯ ಈ ಮೂಲಕ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಎಸ್‍ಎಸ್ ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ, ಪ್ರೊ.ಆರ್.ವಿ. ಚಿಟಗುಪ್ಪಿ ಇದ್ದರು.