ಕನ್ನಡಪ್ರಭ ವಾರ್ತೆ ಪಾಂಡವಪುರ
ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳ ನಿರ್ದೇಶನದ ಮೇರೆಗೆ ಜುಲೈ 11ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ಅದರ ಅಂಗವಾಗಿ ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿಯೂ ಅದಾಲತ್ ನಡೆಯಲಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಕರಣಗಳ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಯನ್ನು ಖುದ್ದಾಗಿ, ಆನ್‌ಲೈನ್, ವಿಡಿಯೋ ಕಾನ್ಸರೆನ್ಸ್, ಇ-ಮೇಲ್, ವಾಟ್ಸಾಪ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.ಲೋಕ ಅದಾಲತ್ ಹಿನ್ನೆಲೆಯಲ್ಲಿ ಪೂರ್ವಭಾವಿ ಪೀಠಗಳನ್ನು ನಡೆಸಲಾಗುತ್ತಿದೆ. ಟೆಲಿಫೋನ್ ಬಿಲ್, ವಿದ್ಯುತ್ ಬಿಲ್, ಸಣ್ಣ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು ಹಾಗೂ ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನಲ್ಲಿ ರಾಜಿ ಸಂಧಾನಕ್ಕೆ ಯೋಗ್ಯವಾಗಿರುವ ಒಟ್ಟು 896 ಪ್ರಕರಣಗಳನ್ನು ಲೋಕ ಅದಾಲತ್‌ಗೆ ಗುರುತಿಸಲಾಗಿದೆ. ಅವುಗಳಲ್ಲಿ ಎಂವಿಸಿ ಪ್ರಕರಣಗಳು 125, ಎಂಎಂಆರ್‌ಡಿ ಪ್ರಕರಣಗಳು 5. ಎಲ್‌ಸಿ ಪ್ರಕರಣಗಳು 4. ವಿಭಾಗದ ದಾವೆ ಪ್ರಕರಣಗಳು 100, ಇತರೆ ಸಿವಿಲ್ ಪ್ರಕರಣಗಳು 150, ನಿರ್ದಿಷ್ಟ ಪರಿಹಾರಕ್ಕಾಗಿ ದಾವೆಗಳು 130, ಕ್ರಿಮಿನಲ್ ಪ್ರಕರಣಗಳು 57 ಹಾಗೂ ಎನ್‌ಐ ಆಕ್ಟ್ (ಚೆಕ್ ಬೌನ್ಸ್) ಪ್ರಕರಣಗಳು 325 ಸೇರಿವೆ ಎಂದು ವಿವರಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ಆದೇಶದಂತೆ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದ ದಂಡ ಹಾಗೂ ಪರಿಹಾರ ಮೊತ್ತಗಳಲ್ಲಿ ಶೇ.50 ರಿಯಾಯಿತಿ ನೀಡಲಾಗುತ್ತಿದೆ. ಜೂನ್ 21ರಿಂದ ಜುಲೈ 10ರವರೆಗೆ ಬಾಕಿ ಇರುವ ಅಪಘಾತ ಪ್ರಕರಣಗಳಲ್ಲಿ ಶೇ.50 ಮೊತ್ತ ಪಾವತಿಸಿದರೆ ಉಳಿದ ಶೇ.50ರಷ್ಟು ಮೊತ್ತವನ್ನು ಮನ್ನಾ ಮಾಡುವ ವಿಶೇಷ ಅವಕಾಶ ಕಲ್ಪಿಸಲಾಗಿದೆ ಎಂದರು.
ಚೆಕ್ ಬೌನ್ಸ್ ಪ್ರಕರಣಗಳ ಇತ್ಯರ್ಥಕ್ಕಾಗಿ ಜುಲೈ 18 2026 ರಿಂದ ನವೆಂಬರ್ 21, 2026ರ ವರಗೆ ವಿಶೇಷ ಲೋಕ ಅದಾಲತ್ ಆಯೋಜಿಸಲು ನಿರ್ದೇಶನ ಬಂದಿದೆ. ಉಭಯ ಪಕ್ಷಗಳಿಗೆ ನೋಟಿಸ್ ನೀಡಿ ರಾಜಿ ಸಾಧ್ಯತೆಗಳ ಪರಿಶೀಲನೆ ನಡೆಸಲಾಗುವುದು.ತಾಲೂಕಿನಲ್ಲಿ ದಿನಾಂಕ 2026ರ ಜೂ.1 ಅನ್ವಯ ಒಟ್ಟು 6434 ಪ್ರಕರಣದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿಗಾಗಿ ತೆಗೆದುಕೊಳ್ಳಲಾಗಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು, ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಎಸ್.ಪೂಜಾಶ್ರೀ, ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶ್ರೀಧರ್ ಹಾಗೂ ದ್ವಿತೀಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪಿ.ಮದನ್ ಉಪಸ್ಥಿತರಿದ್ದರು.