ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರ್ ಸೈನ್ಸ್ ಫೌಂಡೇಶನ್, ಅರಣ್ಯ ಔಟ್ ರೀಚ್, ಮೈಸೂರು ಅಂಚೆ ವಿಭಾಗದ ಸಹಯೋಗದಲ್ಲಿ ಜು.20 ರಿಂದ 28 ರವರೆಗೆ ನಡೆಯುವ ರಾಷ್ಟ್ರೀಯ ಪತಂಗ ಸಪ್ತಾಹದ ಅಂಗವಾಗಿ ಪೋಸ್ಟ್ ಕಾರ್ಡ್ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.ಇದರ ಪೋಸ್ಟರ್ ಅನ್ನು ಜೂ. 13 ರಂದು ಪ್ರಧಾನ ಅಂಚೆ ಕಚೇರಿಯ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಡಾ. ಏಂಜಲ್ ರಾಜ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳಿಗೆ ಅಂಚೆ ಕಚೇರಿಯ ಪರಿಚಯವೇ ಇಲ್ಲ ಅದರಲ್ಲೂ ಪೋಸ್ಟ್ ಕಾರ್ಡ್ ಪರಿಚಯವಂತು ಇಲ್ಲವೇ ಇಲ್ಲ. ಪೋಸ್ಟ್ ಕಾರ್ಡ್ ಬರೆಯುವ ಸಂಸ್ಕೃತಿಯು ನಿಂತು ಹೋಗಿದೆ. ವಿದ್ಯಾರ್ಥಿಗಳಿಗೆ ಪೋಸ್ಟ್ ಕಾರ್ಡ್ ಪರಿಚಯಿಸುವುದು, ಪತಂಗ ಸಪ್ತಾಹ, ಪತಂಗಗಳ ಮಹತ್ವ ತಿಳಿಸುವುದು, ಪತಂಗಗಳಿಗೂ ಮತ್ತು ಚಿಟ್ಟೆಗಳಿಗೂ ಇರುವ ವ್ಯತ್ಯಾಸ ತಿಳಿಸುವುದಕ್ಕಾಗಿ ಈ ರಾಜ್ಯಮಟ್ಟದ ಪೋಸ್ಟ್ ಕಾರ್ಡ್ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರ್ ಸೈನ್ಸ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ಜಿ.ಬಿ. ಸಂತೋಷ್ ಕುಮಾರ್ ಸ್ಪರ್ಧೆಯ ವಿವರ ನೀಡಿದರು.
ಸ್ಪರ್ಧೆಯು ಪ್ರಾಥಮಿಕ ಮತ್ತು ಪ್ರೌಢಶಾಲೆ ಎರಡು ವಿಭಾಗಗಳಲ್ಲಿ ನಡೆಯಲಿದ್ದು, ಪ್ರಾಥಮಿಕ ವಿಭಾಗಕ್ಕೆ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗಕ್ಕೆ, 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದು.ವಿದ್ಯಾರ್ಥಿಗಳು ಭಾರತದ ಪತಂಗಗಳು ವಿಷಯಕ್ಕೆ ಸಂಬಂಧಿಸಿದಂತೆ ಅಂಚೆ ಪೋಸ್ಟ್ ಕಾರ್ಡ್ ನಲ್ಲಿ ಯಾವುದೇ ತಂತ್ರ ಅಥವಾ ಸಾಧನ ಬಳಸಿ ಚಿತ್ರವನ್ನು ಸ್ವತಃ ರಚಿಸಿ ತಮ್ಮ ಹೆಸರು, ತರಗತಿ ಶಾಲೆ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಜಿ.ಬಿ. ಸಂತೋಷ್ ಕುಮಾರ್, ನಂ. 621 ಸಂಗೀತ, ಸಾತಗಳ್ಳಿ ಲೇಔಟ್, ಶಕ್ತಿ ನಗರ ಪೋಸ್ಟ್, ಮೈಸೂರು 570 029 ಈ ವಿಳಾಸಕ್ಕೆ ಜು. 15ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕು.
ಎರಡು ವಿಭಾಗಗಳಿಗೆ ಪ್ರತ್ಯೇಕವಾಗಿ ಮೂರು ಬಹುಮಾನ ನೀಡಲಾಗುವುದು. ಮೊದಲ ಬಹುಮಾನಕ್ಕೆ 1000 ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನಕ್ಕೆ 500 ನಗದು ಮತ್ತು ತೃತೀಯ ಬಹುಮಾನಕ್ಕೆ 250 ನಗದು ನೀಡಲಾಗುವುದು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನಾ ಪತ್ರ ನೀಡಲಾಗುವುದು.ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆಪಾಲಕ ವಿ.ಎಲ್. ನವೀನ್, ಮೈಸೂರ್ ಸೈನ್ಸ್ ಫೌಂಡೇಶನ್ ನ ಅಧ್ಯಕ್ಷ ಕೃಷ್ಣೇಗೌಡ, ಅರಣ್ಯ ಔಟ್ರಿಚ್ ಸಂಸ್ಥೆಯ ಪರಿಸರವಾದಿ ಮತ್ತು ವನ್ಯಜೀವಿ ಫೋಟೋಗ್ರಾಫರ್ ಸಪ್ತಗಿರಿ, ಡಾ.ಎನ್.ಎಂ. ಶಾಮಸುಂದರ್, ಮೈಸೂರ್ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಡಾ.ಟಿ. ಶಿವಲಿಂಗಸ್ವಾಮಿ ಮತ್ತು ಸದಸ್ಯೆ ಮಂಜುಳಾ ಸಿ. ಪುರಂದರ್ ಇದ್ದರು.