ಸಾರಾಂಶ
ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಕ್ಕೆ ಕೇಂದ್ರ ನಿಯಂತ್ರಣದ ನಿಯಮ ಜಾರಿಗೊಳಿಸುವಂತೆ ಕೋರಿ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಮನವಿ ಮಾಡಿದ್ದು, ಇದಕ್ಕೆ ಕೇಂದ್ರ ಆಯುಷ್ ಮಂಡಲ ಸಂಪೂರ್ಣ ಸಮ್ಮತಿ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಕ್ಕೆ ಕೇಂದ್ರ ನಿಯಂತ್ರಣದ ನಿಯಮ ಜಾರಿಗೊಳಿಸುವಂತೆ ಕೋರಿ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಮನವಿ ಮಾಡಿದ್ದು, ಇದಕ್ಕೆ ಕೇಂದ್ರ ಆಯುಷ್ ಮಂಡಲ ಸಂಪೂರ್ಣ ಸಮ್ಮತಿ ನೀಡಿದೆ.ಫೆ.೪ರಂದು ದೆಹಲಿಯಲ್ಲಿನ ನಿರ್ಮಾಣ ಭವನದಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವ ಪ್ರತಾಪ್‌ರಾವ್ ಗಣಪತ್ ರಾವ್ ಜಾಧವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯಸಭಾ ಸದಸ್ಯ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಭಾರತದ ಸಿಸ್ಟಮ್ ಆಫ್ ಮೆಡಿಸಿನ್‌ನ ರಾಷ್ಟ್ರೀಯ ಆಯೋಗದ ಸದಸ್ಯ ಬೆಂಗಳೂರಿನ ಎಸ್.ವ್ಯಾಸದ ಚಾನ್ಸಲರ್ ಡಾ. ಎಚ್.ಆರ್. ನಾಗೇಂದ್ರ ಭಾಗವಹಿಸಿದ್ದರು.ಸಭೆಯಲ್ಲಿ ಉಜಿರೆಯಲ್ಲಿರುವ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಮಾಡಿದ ಸೇವೆ, ಸಾಧನೆ ಮತ್ತು ಶಿಕ್ಷಣದ ಗುಣಮಟ್ಟಕ್ಕೆ ರಾಷ್ಟ್ರಮಟ್ಟದ ಮಾನ್ಯತೆಯೂ ಲಭಿಸಿದೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಪ್ರಸ್ತಾವನೆಗೆ ಮಂತ್ರಿಮಂಡಲ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಸಂಸ್ಥೆಗೆ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಮಾನ್ಯತೆ ದೊರಕಿದೆ. ಈ ಬಗ್ಗೆ ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ ಜನವರಿಯಲ್ಲಿ ಧರ್ಮಸ್ಥಳದಲ್ಲಿ ಸಭೆ ನಡೆದಿತ್ತು. ಬಳಿಕ ದೆಹಲಿಯಲ್ಲಿ ಫೆ.೪ರಂದು ಎರಡನೇ ಸಭೆ ಇದಾಗಿತ್ತು.