ಕನ್ನಡಪ್ರಭ ವಾರ್ತೆ ಮೈಸೂರುಭಾರತದಲ್ಲಿ ಥೋರಿಯಂ ನಿಕ್ಷೇಪ ಹೆಚ್ಚಾಗಿದ್ದು, ಅಣು ವಿದ್ಯುತ್‌ ರಿಯಾಕ್ಟರ್‌ ಗಳಲ್ಲಿ ಥೋರಿಯಂ ಬಳಕೆ ಮೂಲಕ ಭಾರತವು ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ರೇಡಿಯೋ ಕೆಮಿಸ್ಟ್ರಿ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ವಿ.ಕೆ. ಮನ್‌ ಚಂದ್ ತಿಳಿಸಿದರು.ಮೈಸೂರು ವಿವಿ ಕ್ರಾಫರ್ಡ್‌ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಅವರು, ಕಳೆದ 70 ವರ್ಷಗಳಲ್ಲಿ ಭಾರತದ ಪರಮಾಣು ಶಕ್ತಿ ಪ್ರಯಾಣ ಕುರಿತು ಮಾತನಾಡಿ, 4ನೇ ಪೀಳಿಗೆಯ ಅಣುಶಕ್ತಿ ತಂತ್ರಜ್ಞಾನವು ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ. ವಿಕಿರಣ ಸೂಸುವ ಅಣು ತ್ಯಾಜ್ಯ ನಿರ್ವಹಣೆ ಮಾಡುತ್ತಿದೆ. ವಿಶ್ವದಲ್ಲಿ 63.5 ಲಕ್ಷ ಟನ್‌ ಥೋರಿಯಂ ಲಭ್ಯವಿದ್ದು, ಭಾರತದಲ್ಲಿ 8.46 ಲಕ್ಷ ಟನ್ ನಿಕ್ಷೇಪವಿದೆ. ಹೀಗಾಗಿ, ಭಾರತವು ಮುಂದಿನ ಶತಮಾನದ ವೇಳೆಗೆ ನಿರ್ಣಾಯಕವಾಗಲಿದೆ ಎಂದರು. ಕಡಿಮೆ ನಿಕ್ಷೇಪವಿರುವ ಯುರೇನಿಯಂ ಅನ್ನು ರಿಯಾಕ್ಟರ್‌ ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಥೋರಿಯಂಗೆ ಉನ್ನತೀಕರಿಸುವ ಯತ್ನಗಳು ನಡೆಯುತ್ತಿದೆ. ಅತ್ಯಾಧುನಿಕ ಪರಮಾಣು ತಂತ್ರಜ್ಞಾನವನ್ನು ಕಳೆದ 7 ದಶಕಗಳಲ್ಲಿ ಅಭಿವೃದ್ಧಿ ಆಗಿದೆ. ದೇಶವು 2047ರ ವೇಳೆಗೆ 100 ಗಿಗಾ ವ್ಯಾಟ್‌ ಅಣು ವಿದ್ಯುತ್‌ ಶಕ್ತಿ ತಯಾರಿಸುವ ಗುರಿ ಹಾಕಿಕೊಂಡಿದೆ. ಪ್ರಸ್ತುತ ಒಟ್ಟು ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಶೇ.2 ರಷ್ಟು ಮಾತ್ರವೇ ಪರಮಾಣು ಶಕ್ತಿಯ ಪಾಲಿದ್ದು, 20 ವರ್ಷಗಳಲ್ಲಿ ಶೇ.9ಕ್ಕೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು.ಏಷ್ಯಾದ ಮೊದಲ ಅಣು ಶಕ್ತಿ ಕೇಂದ್ರವು ಮಹಾರಾಷ್ಟ್ರದ ಟ್ರಾಂಬೆಯಲ್ಲಿ ಸ್ಥಾಪನೆಯಾಯಿತು. 22 ರಿಯಾಕ್ಟರ್‌ ಗಳು ಸದ್ಯ ಕಾರ್ಯಾಚರಿಸುತ್ತಿವೆ. ದೇಶದ ಜನಸಂಖ್ಯೆ ಹೆಚ್ಚುತ್ತಿದ್ದು, 24 ಗಂಟೆಯೂ ನಿಯಮಿತವಾಗಿ ವಿದ್ಯುತ್‌ ಉತ್ಪಾದಿಸುವ ಶೂನ್ಯ ಇಂಗಾಲದ ಶಕ್ತಿ ಮೂಲಗಳು ಅಗತ್ಯವಾಗಿವೆ. ಜಾಗತಿಕವಾಗಿ ಇಂಗಾಲ ಹೊರಸೂಸುವಿಕೆ ತಡೆಗಟ್ಟಲು ಕಲ್ಲಿದ್ದಲಿನ ಶಾಖೋತ್ಪನ್ನಿ ಘಟಕಗಳನ್ನು ತಗ್ಗಿಸಬೇಕಿದೆ. ಜಗತ್ತಿನಾದ್ಯಂತ 400 ಹೆಚ್ಚು ರಿಯಾಕ್ಟರ್‌ ಗಳು ಸ್ಥಾಪನೆಯಾಗುತ್ತಿವೆ ಎಂದು ಅವರು ತಿಳಿಸಿದರು. ದೇಶವು 2030ರ ವೇಳೆಗೆ 500 ಗಿಗಾ ವ್ಯಾಟ್‌ ಪಳೆಯುಳಿಕೆ (ಫಾಸಿಲ್) ಇಂಧನ ರಹಿತ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಶೇ.51 ರಷ್ಟು ಶಕ್ತಿಯನ್ನು ನವೀಕೃತ ಇಂಧನ ಮೂಲಗಳಿಂದ ಪಡೆಯಬೇಕಿದೆ. ಒಂದು ಶತಕೋಟಿ ಟನ್‌ ಗೆ ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಬೇಕಿದ್ದು, 2070ರ ವೇಳೆಗೆ ಸೂಸುವಿಕೆಯನ್ನು ಶೂನ್ಯಗೊಳಿಸಬೇಕಿದೆ. ಹೀಗಾಗಿ, ಅಣು ಶಕ್ತಿ ಸೇರಿದಂತೆ ಹಸಿರು ಇಂಧನ ಪ್ರಮಾಣವನ್ನು ತಗ್ಗಿಸುವ ಎಲ್ಲಾ ತಂತ್ರಜ್ಞಾನವನ್ನು ಉನ್ನತೀಕರಿಸುವ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌, ಕುಲಸಚಿವೆ ಎಂ.ಕೆ. ಸವಿತಾ ಇದ್ದರು.----ಕೋಟ್...ದೇಶದ ಪರಮಾಣು ಶಕ್ತಿ ಕಾರ್ಯಕ್ರಮಗಳು ವಿದ್ಯುತ್ ಉತ್ಪಾದನೆ ಹಾಗೂ ರಕ್ಷಣಾ ಬಳಕೆಗೆ ಮಾತ್ರವಲ್ಲದೇ ಆರೋಗ್ಯ, ಕೃಷಿ, ವಿಕಿರಣ ತಂತ್ರಜ್ಞಾನ, ಆಹಾರ ಮತ್ತು ಗುಣಮಟ್ಟ ಕಾಪಾಡಲು, ಶುದ್ಧ ನೀರು, ಕೈಗಾರಿಕೆ, ಲೇಸರ್‌ ತಂತ್ರಜ್ಞಾನಕ್ಕೆ ಬಳಸಬಹುದು. ಕೃಷಿ ಇಳುವರಿ ಹೆಚ್ಚಿಸಲು ಬಿತ್ತನೆ ಬೀಜ ಸಂವರ್ಧನೆಗೆ ಬಳಸಬಹುದು.- ಪ್ರೊ.ವಿ.ಕೆ. ಮನ್‌ ಚಂದ್, ನಿವೃತ್ತ ವಿಜ್ಞಾನಿ