ನರಸಿಂಹರಾಜಪುರರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಗಾಂಧಿ ತತ್ವ ಅಡಗಿದೆ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಉದಯಕುಮಾರ್ ತಿಳಿಸಿದರು.
- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಶಿಬಿರದಲ್ಲಿ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಗಾಂಧಿ ತತ್ವ ಅಡಗಿದೆ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಉದಯಕುಮಾರ್ ತಿಳಿಸಿದರು.
ಭಾನುವಾರ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಶಿಬಿರದ 2ನೇ ದಿನ ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಮಹಾತ್ಮಾ ಗಾಂಧೀಜಿ ಹುಟ್ಟಿ 100 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ 1969 ರಿಂದ ಎನ್.ಎಸ್.ಎಸ್.ಶಿಬಿರಗಳು ಪ್ರಾರಂಭವಾಯಿತು. ಮಹಾತ್ಮಾ ಗಾಂಧೀಜಿ ಕನಸು ಕಂಡ ಗ್ರಾಮ ಸ್ವರಾಜ್ಯ, ಗ್ರಾಮ ಸ್ವಚ್ಛತೆ, ಸೇವೆಯನ್ನು ರಾಷ್ಟೀಯ ಸೇವಾ ಯೋಜನೆಯಲ್ಲಿ ಅಳವಡಿ ಸಲಾಗಿದೆ. 7 ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮ ಸ್ವಚ್ಛತೆ, ಕೆರೆ ಅಭಿವೃದ್ಧಿ, ನದಿ ಮೂಲ ಸ್ವಚ್ಛತೆ ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಎನ್.ಜಿ.ಓ. ರಾಜಕೀಯ ಹಿಡಿತಕ್ಕೆ ಸಿಕುತ್ತಿದೆ.ಕೆಲವು ಎನ್.ಜಿ.ಓ.ಗಳು ಪ್ರಕೃತಿ, ಅರಣ್ಯ ಉಳಿಸಿ ಎಂದು ಹೋರಾಟ ಮಾಡುತ್ತಾರೆ. ಆದರೆ, ಮನುಷ್ಯರ ಬದುಕುವ ಹಕ್ಕನ್ನು ಕಡೆಗಣಿಸುತ್ತಾರೆ. ಪ್ರಕೃತಿ, ಕಾಡು, ನೀರು ಎಲ್ಲವೂ ಉಳಿಯಬೇಕಾಗಿದೆ. ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಹಸ್ತಾಂತರಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿಯೇ ಅದ್ಭುತವಾಗಿ ಸೃಷ್ಟಿ ಮಾಡುತ್ತಿದೆ. ಪ್ರಕೃತಿ ವಿರುದ್ಧ ಹೋದರೆ ಭೂಕಂಪ, ಸುನಾಮಿ, ಅತಿಯಾದ ಮಳೆ ಬಂದು ಜನರನ್ನು ವಿನಾಶಕ್ಕೆ ದೂಡುತ್ತದೆ ಎಂದರು.ವಿದ್ಯಾರ್ಥಿಗಳು ಕೇವಲ ಡಿಗ್ರಿ ಮಾಡಿದರೆ ಸಾಲದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ ಜ್ಞಾನ, ಕೌಶಲ್ಯ ಅಭಿವೃದ್ಧಿ, ಅಧ್ಯಯನ ಅತಿ ಅಗತ್ಯ. ಕಾಲ,ಕಾಲಕ್ಕೆ ಅಪ್ ಗ್ರೇಡ್ ಆಗಬೇಕಾಗಿದೆ. ಕಾಲದ ಜೊತೆ ನಾವು ಓಡಬೇಕಾದ ಅನಿವಾರ್ಯತೆ ಇದೆ ಎಂದು ಸಲಹೆ ನೀಡಿದರು.
ಅತಿಥಿಯಾಗಿದ್ದ ಸೀತೂರು ವಿ.ಎಸ್.ಎಸ್.ಎನ್. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಕಂಡ ಕನಸು ಸೀತೂರು ಗ್ರಾಮದಲ್ಲಿ ಸಾಕಾರಗೊಂಡಿದೆ. ಸೀತೂರಿನಲ್ಲಿ ಉತ್ತಮ ಸಹಕಾರ ಸಂಘ, ಶಾಲೆ, ಗ್ರಾಪಂ ಇದೆ. 1949 ರಲ್ಲಿ ಸೀತೂರು ಸಹಕಾರ ಸಂಘ ಪ್ರಾರಂಭವಾಯಿತು.1960 ರಲ್ಲಿ ಸಹಕಾರ ಕಾಯ್ದೆಯಡಿ ನೋಂದಾಯಿತ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಸಹಕಾರ ವ್ಯಾಪ್ತಿಯಲ್ಲಿ ಉದ್ಯೋಗಕ್ಕೆ ವಿಫುಲ ಅವಕಾಶವಿದ್ದು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದು ಎಂದರು.ಅತಿಥಿಯಾಗಿದ್ದ ಸೀತೂರು ವಿ.ಎಸ್.ಎಸ್.ಎನ್.ಉಪಾಧ್ಯಕ್ಷೆ ಎಂ.ಎಸ್. ಗೀತಾ ಮಾತನಾಡಿ, ಎನ್.ಎಸ್.ಎಸ್. ಶಿಬಿರಾರ್ಥಿಗಳು 7 ದಿನ ಕಲಿತಿರುವುದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿ ಕೊಳ್ಳಬೇಕು. ವ್ಯಕ್ತಿತ್ವ ಬೆಳೆದರೆ ಸಮಾಜದಲ್ಲಿ ಸ್ಥಾನ, ಮಾನ ಸಿಗಲಿದೆ ಎಂದರು.
ಸಭೆಯಲ್ಲಿ ಮುಖಂಡ ಮಂಜುನಾಥ್, ಎಸ್.ಎಸ್. ಎಸ್. ಶಿಬಿರಾಧಿಕಾರಿ ಡಾ.ಸತೀಶ್ ಎಸ್.ಡಿ, ಪ್ರೊ. ಶಂಕರ ನಾಯ್ಕ್ ಜೆ.ಎಸ್, ಕವನ, ಅಪ್ರಿನ್ , ನಿಶ್ಮಿತ ಇದ್ದರು.