ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಕಾಲೇಜಿನಲ್ಲಿ ‘ನೀಲ ಕ್ರಾಂತಿ ಮತ್ತು ಭವಿಷ್ಯದ ಸ್ಥಿರ ಮಾರ್ಗಗಳು’ಕ್‌ ಕಾರ್ಯಾಗಾರ ಸಂಪನ್ನಗೊಂಡಿತು.

ಮಂಗಳೂರು: ಮೀನುಗಾರಿಕಾ ವಿಭಾಗಕ್ಕೆ ಸಂಬಂಧಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂಭತ್ತು ಒಡಂಬಡಿಕೆಗಳಿಗೆ ಮೀನುಗಾರಿಕಾ ವಿಶ್ವವಿದ್ಯಾನಿಲಯ ಸಹಿ ಹಾಕಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಹೆಚ್ಚಿನ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಮೀನಿನ ಮೌಲ್ಯವರ್ಧಿತ ಉತ್ಪಾದನೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಬೀದರ್‌ನ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಸಿ. ವೀರಣ್ಣ ಹೇಳಿದ್ದಾರೆ.

ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ ‘ನೀಲ ಕ್ರಾಂತಿ ಮತ್ತು ಭವಿಷ್ಯದ ಸ್ಥಿರ ಮಾರ್ಗಗಳು’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯಮಂತ್ರಿಯವರು ಈಗಾಗಲೇ ಮತ್ತೊಂದು ಮೀನುಗಾರಿಕಾ ಕಾಲೇಜು ಸ್ಥಾಪನೆಗೆ ಒಪ್ಪಿಗೆ ನೀಡಿದ್ದಾರೆ. ಜತೆಗೆ ನಾಲ್ಕು ಸಂಶೋಧನಾ ಕೇಂದ್ರಗಳ ಅಗತ್ಯವಿದೆ. ಸಿಬ್ಬಂದಿ ಕೊರತೆ ನಡುವೆ ಗುಣಮಟ್ಟದ ಶಿಕ್ಷಣಕ್ಕೆ ಮೀನುಗಾರಿಕಾ ಮತ್ತು ಪಶು ವಿಶ್ವವಿದ್ಯಾನಿಲಯ ಒತ್ತು ನೀಡುತ್ತಿದೆ. ಮೀನುಗಾರಿಕಾ ವಿಜ್ಞಾನ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದು, ತಳಮಟ್ಟದಿಂದ ಇದನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ ಎಂದರು.

ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ 50ರೊಳಗೆ ಸೀಮಿತಗೊಂಡಿದ್ದ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ 65ಕ್ಕೆ ಏರಿಕೆಯಾಗಿದೆ. ಅದನ್ನು 100ಕ್ಕೆ ಏರಿಸುವ ಪ್ರಯತ್ನ ಆಗಬೇಕಾಗಿದೆ ಎಂದರು.

ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನಡೆಸಲಾಗುತ್ತಿರುವ ಸಂಶೋಧನಾ ಕೇಂದ್ರ ಹಾಗೂ ವಿಸ್ತರಣಾ ಘಟಕಗಳ ಕಾಮಗಾರಿ ಮಾರ್ಚ್‌ನೊಳಗೆ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ. ಒಟ್ಟು 7.9 ಕೋ. ರು. ವೆಚ್ಚದಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು, 5 ಕೋಟಿ ರು.ಗಳಲ್ಲಿ ಪ್ರಥಮ ಹಂತದ ಕಾಮಗಾರಿ ನಡೆದಿದೆ. ದ್ವಿತೀಯ ಹಂತದ ಕಾಮಗಾರಿಯೂ ಅಂತಿಮ ಹಂತದಲ್ಲಿದೆ. ಈ ಮೂಲಕ ವಿದ್ಯಾರ್ಥಿಗಳ ಸಂಶೋಧನಾ ಚಟುವಟಿಕೆಗಳು, ಪ್ರದರ್ಶನ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.

ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್ ಮಾತನಾಡಿ, ಕಾಲೇಜಿನಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಮಹಿಳಾ ಹಾಸ್ಟೆಲ್, ಕೇಂದ್ರ ಪ್ರಯೋಗಾಲಯಕ್ಕೆ ಬೇಕಾದ ಉಪಕರಣಗಳನ್ನು ನೀಡಲಾಗಿದೆ. ಕಾಲೇಜಿಗೆ ಬಸ್ಸಿನ ಜತೆಗೆ ಆಂಬುಲೆನ್ಸ್ ನೀಡಲು ಕ್ರಮ ಆಗಿದೆ ಎಂದು ಹೇಳಿದರು.ಹೈದರಾಬಾದ್‌ ಉದಯ ಅಕ್ವಾ ಕೆನೆಕ್ಟ್ಸ್‌ವ್ಯವಸ್ಥಾಪಕ ನಿರ್ದೇಶಕ ಉದಯ ಕೃಷ್ಣನ್ ಚತುರ್ವೇದಿ ಮಾತನಾಡಿ, ಭವಿಷ್ಯದಲ್ಲಿ ಉದ್ಯಮ ಕ್ಷೇತ್ರ ಅದರಲ್ಲೂ ಆಹಾರ ವಲಯದಲ್ಲಿ ಮೀನುಗಾರಿಕಾ ಕ್ಷೇತ್ರ ಉಜ್ವಲ ಸಾಮರ್ಥ್ಯವನ್ನು ಹೊಂದಿದ್ದು, 2047ರ ವೇಳೆಗೆ ಅತ್ಯಧಿಕ ವೇತನ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದರು.

ಮುಕ್ಕ ಶ್ರೀನಿವಾಸ ಕಾಲೇಜಿನ ಕುಲಪತಿ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಗೋವಾ ಮೀನುಗಾರಿಕಾ ಕಾಲೇಜಿನ ನಿದೇಶಕಿ ಡಾ.ಶರ್ಮಿಳಾ ಮೊಂತೆರೊ, ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಎಚ್.ಎನ್. ಆಂಜನೇಯಪ್ಪ, ಬೆಂಗಳೂರು ಭುವಿ ಎಂಟರ್‌ಪ್ರೈಸಸ್‌ನ ಜಿ.ಎಸ್. ಗೋವಿಂದರಾಜು ಇದ್ದರು.ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಸ್ವಾಗತಿಸಿದರು. ಡಾ. ವಿಜಯ ಕುಮಾರ್, ಡಾ. ದೀಪಾಂಜಲಿ ನಿರೂಪಿಸಿದರು.