ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಜನ್ಮದಿನದ ಸಂಸ್ಮರಣಾರ್ಥವಾಗಿ ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶಾಲಾಕ್ಯತಂತ್ರ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ‘ಉನ್ಮೀಲನಮ್ - 2026’ ಶನಿವಾರ ನಡೆಯಿತು.
ಉಡುಪಿ: ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಜನ್ಮದಿನದ ಸಂಸ್ಮರಣಾರ್ಥವಾಗಿ ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಶಾಲಾಕ್ಯತಂತ್ರ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ‘ಉನ್ಮೀಲನಮ್ - 2026’ ಶನಿವಾರ ನಡೆಯಿತು.ಬೆಂಗಳೂರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ. ಸಂಜಯ್ ಕೆ.ಎಸ್. ಅವರು ಕಾರ್ಯಾಗಾರ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಶಾಲಾಕ್ಯತಂತ್ರ ವಿಭಾಗದಿಂದ ಇಂದ್ರಿಯ ಪ್ರಕಾಶ ಸಂಶೋಧನಾ ಪ್ರಬಂಧದ ಕಿರುಹೊತ್ತಿಗೆ ಅನಾವರಣಗೊಳಿಸಲಾಯಿತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ ಎಸ್. ಮತ್ತು ರಾಷ್ಟ್ರೀಯ ಕಾರ್ಯಾಗಾರದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ಗಾಯತ್ರಿ ಜಿ. ಹೆಗ್ಡೆ ಉಪಸ್ಥಿತರಿದ್ದರು. ಶಾಲಾಕ್ಯತಂತ್ರ ವಿಭಾಗ ಮುಖ್ಯಸ್ಥ ಡಾ. ಜಯಕೃಷ್ಣ ನಾಯಕ್ ಸ್ವಾಗತ ಕೋರಿ ಪ್ರಾಸ್ತಾವನೆಗೈದರು, ಸಂಘಟನಾ ಕಾರ್ಯದರ್ಶಿ ಡಾ. ಸುಷ್ಮಾ ಪ್ರಶಾಂತ್ ವಂದಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ತ್ರಿಶೂರ್‌ನ ಸುನೇತ್ರಿ ಆಯುರ್ವೇದ ಆಶ್ರಮದ ನಿರ್ದೇಶಕ ವೈದ್ಯ ಎಂ. ಪ್ರಸಾದ್, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಕಾಲೇಜಿನ ಶಾಲ್ಯಾಕ್ಯತಂತ್ರ ವಿಭಾಗದ ಪ್ರಾಧ್ಯಾಪಕ ಡಾ. ಉದಯ ಶಂಕರ್ ಹಾಗೂ ಕೇರಳದ ಕೆ.ಎಂ.ಸಿಟಿ ಆಯುರ್ವೇದ ಕಾಲೇಜಿನ ಶಾಲಾಕ್ಯತಂತ್ರ ವಿಭಾಗದ ಮುಖ್ಯಸ್ಥ ಡಾ. ಸೈಪುದ್ದೀನ್ ಗುರುಕ್ಕಲ್ ಪಿ. ಅವರು ವೈಜ್ಞಾನಿಕ ಉಪನ್ಯಾಸ ನೀಡಿದರು. ರಾಷ್ಟ್ರಾದ್ಯಂತ ವಿವಿಧ ಸಂಸ್ಥೆಗಳಿಂದ 510 ಪ್ರತಿನಿಧಿಗಳು ಆಗಮಿಸಿದ್ದರು, ಸುಮಾರು ೩೫೦ ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಮತ್ತು ಭಿತ್ತಿಪತ್ರಗಳು ಮಂಡನೆಯಾದವು.