ಸಾರಾಂಶ
- ಪ್ರಾದೇಶಿಕತೆ-ರಾಷ್ಟ್ರೀಯತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ರಾಜೇಶ್ ಪದ್ಮಾರ್ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಪ್ರದೇಶವಾರು ಗುಣಲಕ್ಷಣ ಸೂಚಿಸುವ ಪದವೇ ಪ್ರಾದೇಶಿಕತೆ ಆಗಿದೆ. ಎಲ್ಲ ಪ್ರಾದೇಶಿಕತೆ ಸೇರಿ ರಾಷ್ಟ್ರೀಯತೆ ಆಗಿದೆ. ಹಲವು ಪ್ರಾದೇಶಿಕತೆಗಳ ಸಂಗಮವೇ ರಾಷ್ಟ್ರೀಯತೆಯಾಗಿದ್ದು, ವಿವಿಧ ಪ್ರಾದೇಶಿಕತೆಗಳು ರಾಷ್ಟ್ರೀಯತೆಯ ವ್ಯಾಪ್ತಿಗೆ ಬರುತ್ತವೆ. ಇವೆರಡೂ ಒಂದಕ್ಕೊಂದು ಪೂರಕವೇ ಹೊರತು ಬೇರೆ ಬೇರೆಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ರಾಜೇಶ್ ಪದ್ಮಾರ್ ತಿಳಿಸಿದರು. ನಗರದ ಶಾಂತಿ ರಾಯಲ್ ಹಾಲ್‌ನಲ್ಲಿ ಶನಿವಾರ ಸಂಜೆ ವರ್ತಮಾನ ಫೋರಂ ಫಾರ್ ಇಂಟಲೆಕ್ಚುಯಲ್ ಡಿಬೆಟ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಪಾಲ್ಗೊಂಡು ಅವರು ಮಾತನಾಡಿ, ದೇಶಾದ್ಯಂತ ಅನೇಕ ವಿಚಾರ, ನಂಬಿಕೆಗಳಲ್ಲಿ ಏಕರೂಪತೆ ಇದೆ. ಸಮಾನ ಆಚಾರ, ಸಂಸ್ಕೃತಿಗಳ ಪ್ರಕಟೀಕರಣವೇ ರಾಷ್ಟ್ರೀಯತೆ ಆಗಿದೆ. ಅದರ ಅಭಿವ್ಯಕ್ತಿ ಮಾತ್ರ ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆ ಎಂದರು.ಕರ್ನಾಟಕವೇ ಬೇರೆ, ಭಾರತವೇ ಬೇರೆ ಎಂಬ ಚರ್ಚೆ ಈ ಹಿಂದೆ ಇರಲಿಲ್ಲ. ಹಳೆಗನ್ನಡ, ನಡುಗನ್ನಡ, ನವ್ಯ, ನವೋದಯ ಹೀಗೆ ಎಲ್ಲ ಸಾಹಿತ್ಯದ ಕಾಲಘಟ್ಟದಲ್ಲಿ ರಾಷ್ಟ್ರೀಯತೆಯ ಕುರುಹುಗಳು ಕಾಣಸಿಗುತ್ತವೆ. ರಾಮಾಯಣ, ಮಹಾಭಾರತವು ಕನ್ನಡ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿದೆ. ಕನ್ನಡದ ಪುಣ್ಯಕೋಟಿಯ ಗೋವಿನ ಹಾಡಿನಲ್ಲಿ ಉತ್ತರ ಭಾರತದ ಗಂಗಾ ನದಿಯ ಉಲ್ಲೇಖವಿದೆ. ಜನಪದ ಸಾಹಿತ್ಯದಲ್ಲಿ ರಾಷ್ಟ್ರೀಯತೆ, ಪ್ರಾದೇಶಿಕತೆಗಳ ಸಂಗಮವಿದೆ. ಎಲ್ಲ ಸಾಹಿತ್ಯ ದಿಗ್ಗಜರು ಕೃತಿಗಳಲ್ಲಿ ರಾಷ್ಟ್ರೀಯತೆ ಭಾವನೆ ಉಕ್ಕಿ ಹರಿದಿದೆ ಎಂದು ಅವರು ಹೇಳಿದರು.ಪ್ರಾದೇಶಿಕತೆ ಹೆಸರಿನಲ್ಲಿ ಒಂದು ದ್ವೀಪವಾಗಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆಹಾರ, ವ್ಯಾಪಾರ, ವಾಣಿಜ್ಯದಲ್ಲಿ ಬೇರೆ ರಾಜ್ಯಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದೇವೆ. ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಎಲ್ಲಾ ರಾಜ್ಯಗಳ ಕೊಡುಗೆ ಇದೆ. ಒಲಂಪಿಕ್ಸ್ ಕ್ರೀಡೆಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿನ ಕ್ರೀಡಾಪಟುಗಳು ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ. ಸಾಧಕರನ್ನು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಸದೆ, ರಾಷ್ಟ್ರೀಯ ನೆಲೆಯಲ್ಲಿ ಗುರುತಿಸುತ್ತೇವೆ. ಇಂದಿನ ಪ್ಯಾನ್ ಇಂಡಿಯಾ ಸಿನಿಮಾ ಕಾಲದಲ್ಲಿ ಪ್ರಾದೇಶಿಕತೆ ಹಾಗೂ ರಾಷ್ಟ್ರೀಯತೆಯ ಸಮನ್ವಯತೆ ಢಾಳಾಗಿ ಗೋಚರಿಸುತ್ತದೆ ಎಂದು ತಿಳಿಸಿದರು.
ವರ್ತಮಾನ ಸದಸ್ಯ ಎಚ್.ಜಿ.ಪಂಚಾಕ್ಷರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೇಹಾ ಚನ್ನಗಿರಿ ಪ್ರಾರ್ಥಿಸಿದರೆ, ಆದಿತ್ಯ ಬೊಂದಾಡೆ ಸ್ವಾಗತಿಸಿದರು. ನವೀನ್ ವಂದಿಸಿದರು. ಎಸ್.ಪ್ರಸಾದ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.- - -