ಸಾರಾಂಶ
- ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಮನೆ-ಮನೆಗೆ ಕರಪತ್ರ ಹಂಚಿ ಮನವರಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಳೆದ ವರ್ಷಗಳಿಂದ ರೈತರಿಗೆ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ದೇಶಾದ್ಯಂತ ಆಂದೋಲನ ನಡೆಸುತ್ತಿರುವಂತೆ ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಮನೆ-ಮನೆಗೆ ಕರಪತ್ರ ಹಂಚಿ ಮನವರಿಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರು ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಇವರನ್ನೊಳಗೊಂಡ ತಂಡ ಶನಿವಾರ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ತಮ್ಮ ಆಂದೋಲನದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ 10 ವರ್ಷಗಳಲ್ಲಿ ರೈತರಿಗೆ ಸುಳ್ಳು ಹೇಳುತ್ತಾ ಬಂದಿದ್ದು ಕರ್ನಾಟಕ ರಾಜ್ಯ ರೈತ ಸಂಘ, ಸರ್ವೋದಯ ಕರ್ನಾಟಕ ಪಕ್ಷ ಸೇರಿದಂತೆ 540 ರೈತ ಪರ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಸಂಯುಕ್ತ ಕಿಸಾನ್ ವತಿಯಿಂದ ದೇಶದಾದ್ಯಂತ ಎನ್‌ಡಿಎ ಮಿತ್ರ ಪಕ್ಷ ಸೋಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ನರೇಂದ್ರ ಮೋದಿಯವರು 10 ವರ್ಷಗಳ ಹಿಂದೆ ಚುನಾವಣೆಗೆ ಸ್ಪರ್ಧಿಸಿದಾಗ ತಾವು ಜಯಗಳಿಸಿ ಅಧಿಕಾರ ವಹಿಸಿ ಕೊಂಡ ತಕ್ಷಣ ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ವರದಿ ಜಾರಿಗೊಳಿಸಲು ಮೊದಲ ಸಭೆಯಲ್ಲಿ ತೀರ್ಮಾನಿಸಿ ಮೊಟ್ಟಮೊದಲ ಕಾರ್ಯಕ್ರಮವಾಗಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರ ವಹಿಸಿ ಕೊಂಡ ನಂತರ ಆಶ್ವಾಸನೆ ಈಡೇರಿಸಲಿಲ್ಲ ಎಂದು ಆರೋಪಿಸಿದರು.ರೈತರ ಸಾಲ ಮನ್ನಾ ಮಾಡದ ಮೋದಿ ಅವರು ಕಾರ್ಪೊರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲಮನ್ನಾ ಮಾಡುವ ಮೂಲಕ ರೈತರಿಗೆ ಮಾಡಿದ ಮೊದಲ ಮೋಸ ಎಂದ ಅವರು, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಬೆಲೆ ಏರಿಕೆ ಮೂಲಕ ಕೃಷಿ ವೆಚ್ಚ ದ್ವಿಗುಣವಾಗುವಂತೆ ಮಾಡಿದರು ಎಂದು ಹೇಳಿದರು.
ಫಸಲ್ ಭೀಮಾ ಹೆಸರಿನಲ್ಲಿ ರೈತರ ಜೇಬಿನಿಂದ ಹಣ ಕಿತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗುವಂತೆ ಮಾಡಿ ದರು. 2019 ರಿಂದ ಯಾವುದೇ ರೈತರಿಗೆ ಸರಿಯಾದ ಪರಿಹಾರ ಕೊಡಲಿಲ್ಲ. ಚುನಾವಣಾ ಬಾಂಡ್ ಭ್ರಷ್ಟಾಚಾರಕ್ಕೆ ಹೊಸ ಆಯಾಮವಾಗಿದ್ದು ಆರ್‌ಎಸ್‌ಎಸ್‌ನ ಕಪಿಮುಷ್ಠಿಯಲ್ಲಿರುವ ನರೇಂದ್ರ ಮೋದಿಯವರು ರೈತರ ಪರವಾಗಿ ಇಲ್ಲ ಎಂದು ದೂರಿದರು.ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಈ ಚುನಾವಣೆಗೆ ಸಂಬಂಧಿಸಿದಂತೆ ರೈತ ಸಂಘ ಅತ್ಯಂತ ಜವಾಬ್ದಾರಿಯಿಂದ ತೀರ್ಮಾನ ಕೈಗೊಂಡು ಕಳೆದ 17ರಿಂದ ಅಭಿಯಾನ ಕೈಗೊಂಡಿದೆ. ಕಳೆದ 10 ವರ್ಷಗಳ ಅವಧಿಯ ನರೇಂದ್ರ ಮೋದಿ ಆಡಳಿತ ಅತ್ಯಂತ ಕೆಟ್ಟದಾಗಿ ನಡೆಯುತ್ತಿದ್ದು, ಕೃಷಿ ಕ್ಷೇತ್ರ ಕಾರ್ಪೊರೇಟ್ ಕಂಪನಿಗಳಿಗೆ ಹೋಗದಂತೆ ತಡೆದು ಸರಿದಾರಿಗೆ ತರುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ರಾಜ್ಯ ಸಮಿತಿ ಸದಸ್ಯ ಎಂ.ಸಿ. ಬಸವರಾಜ್, ಮುಖಂಡ ಕೆ.ಕೆ. ಕೃಷ್ಣೇಗೌಡ, ಕಡೂರು ತಾಲೂಕು ಅಧ್ಯಕ್ಷ ಆನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.20 ಕೆಸಿಕೆಎಂ 4
ರಾಜ್ಯ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ತಂಡ ಶನಿವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್‌ನಲ್ಲಿ ತಮ್ಮ ಆಂದೋಲನದ ಕರಪತ್ರ ಬಿಡುಗಡೆ ಗೊಳಿಸಿತು.