ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ
ಪ್ರಕೃತಿ ವಿಕೋಪ, ಹವಾಮಾನ ವೈಪರಿತ್ಯ ಜಗತ್ತಿಗೆ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಜನ ತತ್ತರಿಸಿ ಹೋಗಿದ್ದು, ಬದುಕು ಅಸ್ಥಿರವಾಗುತ್ತಿದೆ ಬೀದಿಗೆ ಬರುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಮೂಲ ಕಾರಣ ಪ್ರಕೃತಿ ನಾಶವೇ ಕಾರಣವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ಹೊನ್ನಪ್ಪ ಗೌಡ ಲೇಔಟ್‌ನಲ್ಲಿ ಅರಣ್ಯ ಇಲಾಖೆ ಪ್ರಾದೇಶಿಕ ಅರಣ್ಯ ವಿಭಾಗ ವಿಜಯಪುರ ಹಾಗೂ ಸಿಂದಗಿ ಪ್ರಾದೇಶಿಕ ಅರಣ್ಯ ವಲಯಗಳ ಸಹಯೋಗದಲ್ಲಿ 3. 36 ಎಕರೆ ಭೂ ಪ್ರದೇಶದಲ್ಲಿ ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸಾಲುಮರದ ತಿಮ್ಮಕ್ಕ ರುಕ್ಷೋದ್ಯಾನ ಲೋಕಾರ್ಪಣೆ ಗೊಳಿಸಿ ಮಾತನಾಡಿದರು. ನಮ್ಮ ಪೂರ್ವಜರು ನೈಸರ್ಗಿಕ ಸಂಪತ್ತನ್ನು ಹೆಚ್ಚಾಗಿ ಬಳಕೆ ಮಾಡಿ ಆರೋಗ್ಯಕರವಾದ ಬದುಕನ್ನ ನಡೆಸುತ್ತಿದ್ದರು. ಆದರೆ ಇಂದು ನಾವೆಲ್ಲ ಐಷಾರಾಮಿ ಬದುಕಿನ ಕಡೆಗೆ ವಾಲುತ್ತಿದ್ದೇವೆ. ನಾವು ಬಳಕೆ ಮಾಡುವ ಪ್ರತಿ ವಸ್ತುವಿನಲ್ಲಿ ಮತ್ತು ಸೇವನೆ ಮಾಡುವ ಪ್ರತಿ ಆಹಾರ ಪದಾರ್ಥದಲ್ಲಿ ಮಾಲಿನ್ಯವಿದೆ. ಇದರಿಂದ ಆರೋಗ್ಯವನ್ನು ಹೇಗೆ ಕಾಪಾಡಲು ಸಾಧ್ಯ. ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನ ಆಮ್ಲಜನಕದ ಕೊರತೆಯಿಂದ ಪ್ರಾಣವನ್ನು ಕಳೆದುಕೊಂಡರು. ಕಾರಣ ಪರಿಸರದ ನಾಶದಿಂದ ಈ ದೇಶದಲ್ಲಿ ಸ್ವಚ್ಛಂದವಾಗಿ ಅರಣ್ಯ ಪ್ರದೇಶಗಳು ತಲೆಯೆತ್ತಿ ನಿಂತಿದ್ದರೆ ಕೋವಿಡ್ ನಮ್ಮಿಂದ ದೂರವಾಗುತ್ತಿತ್ತು. ಅರಣ್ಯ ಪ್ರದೇಶದ ಕೊರತೆಯಿಂದ ಇಂತಹ ಸ್ಥಿತಿಗೆ ನಾವೆಲ್ಲ ಬಂದಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.ಸುಮಾರು ಶೇ. 33 ರಷ್ಟು ದೇಶದಲ್ಲಿ ಅರಣ್ಯಕ್ಕೆ ಮೀಸಲಾಗಿರಬೇಕು. ರಾಜ್ಯದಲ್ಲಿ ಶೇ.21ರಷ್ಟು ಪ್ರದೇಶ ಪರಿಸರ ಮತ್ತು ಅರಣ್ಯಕ್ಕೆ ಮೀಸಲಾಗಬೇಕು. ಆದರೆ ಇಂದು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಹಾಳು ಮಾಡುತ್ತಿದ್ದೇವೆ. ಕರ್ನಾಟಕದ ಪಶ್ಚಿಮ ಘಟ್ಟದಿಂದ ಅನೇಕ ಅನುಕೂಲಗಳಿವೆ. ಪ್ರಕೃತಿ ಪರಿಸರ ಸಂರಕ್ಷಣೆ ಮಾಡದಿದ್ದರೆ ಮತ್ತು ಪರಿಸರ ಸಮತೋಲನ ಕಾಪಾಡದಿದ್ದರೆ ನಮ್ಮ ಬದುಕು ಅತ್ಯಂತ ದುಸ್ತರವಾಗಲಿದೆ. ಕಲ್ಯಾಣ ಕರ್ನಾಟಕದಲ್ಲಿ ಶೇ.5 ಅರಣ್ಯ ಪ್ರದೇಶವಿದೆ ಹಂತ ಹಂತವಾಗಿ ಆ ಪ್ರಮಾಣವನ್ನ ಜಾಸ್ತಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ವಿಜಯಪುರ ಜಿಲ್ಲೆಯಲ್ಲಿ ಐದು ಲಕ್ಷ ಸಸಿ ನೆಡಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ಇಲ್ಲಿಯವರೆಗೆ 40 ಲಕ್ಷ ಸಸಿಗಳನ್ನು ನೆಡಲಾಗಿದೆ. ಪರಿಸರ ಉಳಿಯಬೇಕು, ನಾವೆಲ್ಲ ಭೌತಿಕ ಸುಖವನ್ನು ನೋಡದೆ ಆರೋಗ್ಯಕರ ಬದುಕಿನ ಕಡೆಗೆ ಹೆಜ್ಜೆ ಹಾಕಬೇಕು. ಆರೋಗ್ಯಕರ ಭೂಮಿಯನ್ನು ಮುಂದಿನ ಪೀಳಿಗೆಗೆ ನಾವು ಹಸ್ತಾಂತರಿಸಬೇಕು. ಇಂದಿನ ಯುವ ಜನಾಂಗ ದಾರಿತಪ್ಪುತ್ತಿದೆ ಎಂದರು.
ಭರವಸೆ ನೀಡಿದರು.ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮಾತನಾಡಿ, ಈ ಸುಂದರ ಉದ್ಯಾನವನವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ನಿರ್ಮಿಸಿದ್ದಾರೆ. ಸಿಂದಗಿ ಪಟ್ಟಣದಲ್ಲಿ ಸುಮಾರು 195ಕ್ಕೂ ಹೆಚ್ಚು ಉದ್ಯಾನವನಗಳಿವೆ. ಅಲ್ಲಿ ಸುಮಾರು 10,000ಕ್ಕೂ ಹೆಚ್ಚು ಸಸಿಗಳನ್ನು ನೆಡಲು ಮತ್ತು ಅವುಗಳ ಅಭಿವೃದ್ಧಿಗೆ ಸಚಿವರು ಐದು ಕೋಟಿ ಅನುದಾನವನ್ನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಿಂದಗಿ ಕ್ಷೇತ್ರ ಅತ್ಯಂತ ವ್ಯವಸ್ಥಿತವಾಗಿ ಮತ್ತು ಅಭಿವೃದ್ಧಿಪಥದಲ್ಲಿ ಸಾಗುತ್ತಿದ್ದು, ಜನತೆಗೆ ಎಲ್ಲ ರೀತಿಯ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಲು ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಇಲಾಖೆ ಅನುಮತಿ ನೀಡಿದ್ದು, ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಅನುದಾನ ತಂದು ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ನಿರ್ಮಿಸುತ್ತೇನೆ ಎಂದು ಹೇಳಿದರು.ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿದರು. ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚೌಹಾನ್, ವಿಜಯಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ್ ಕುಸುನಾಳ, ಪುರಸಭೆ ಉಪಾಧ್ಯಕ್ಷ ಸಂದೀಪ್ ಚೌರ್ ವೇದಿಕೆ ಮೇಲಿದ್ದರು. ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೋಟ್‌ಪ್ರತಿ ಕ್ಷೇತ್ರದ ಶಾಸಕರಿಗೆ ಸರ್ಕಾರ ಕ್ಷೇತ್ರಗಳ ಅಭಿವೃದ್ಧಿಗೆ ₹ 50 ಕೋಟಿ ಅನುದಾನ ನೀಡುತ್ತಿದೆ. ಅರಣ್ಯ ಇಲಾಖೆಯಿಂದ ಪ್ರತಿ ಶಾಸಕರಿಗೆ ಒಂದು ಕೋಟಿ ಅನುದಾನ ಬಿಡುಗಡೆ ಬಿಡುಗಡೆ ಮಾಡಿದ್ದು, ಸಿಂದಗಿ ಶಾಸಕ ಅಶೋಕ ಮನಗೂಳಿ ನಮ್ಮ ಮೇಲೆ ಒತ್ತಡ ಹೇರಿ ಉದ್ಯಾನವನದ ನಿರ್ಮಾಣಕ್ಕೆ ಎರಡು ಕೋಟಿ ಮಂಜೂರು ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿಂದಗಿ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಸಚಿವರಿಗೆ ಖುದ್ದಾಗಿ ನಾನೇ ಭೇಟಿಯಾಗಿ ಹೆಚ್ಚು ಅನುದಾನವನ್ನ ಬಿಡುಗಡೆ ಮಾಡುವೆ.ಈಶ್ವರ ಖಂಡ್ರೆ, ಅರಣ್ಯ ಸಚಿವ