ಸಾರಾಂಶ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕವಿಗಳಿಗೆ ಪ್ರಕೃತಿಯ ಮಡಿಲಲ್ಲಿ ಏಕಾಗ್ರತೆಯಿಂದ ಕಥೆ, ಕವನ ಬರೆಯಲು ಸ್ಫೂರ್ತಿ ಸಿಗಲಿದೆ ಎಂದು ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ್ ಹೇಳಿದರು.ಸೌತಿಕೆರೆಯ ಉದ್ಯಾನವನದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅರಣ್ಯ ಇಲಾಖೆಯ ಆಶ್ರಯದಲ್ಲಿ ನಡೆದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪ್ರಕೃತಿ ಮಧ್ಯೆ ಇದ್ದು ಯಾವುದೇ ಕತೆ, ಕವನ ಬರೆದರೂ ನೈಜವಾಗಿ ಮೂಡಿ ಬರುತ್ತದೆ. ಕನ್ನಡವನ್ನು ಉಳಿಸುವುದು, ಬೆಳೆಸುವುದು ಬೇಡ ಅದನ್ನು ಬಳಸಿದರೆ ತಾನಾಗಿಯೇ ಉಳಿಯುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದರಿಂದ ಕನ್ನಡ ಭಾಷೆ ಅವನತಿ ಹಂತದಲ್ಲಿದೆ. ಕನ್ನಡ ಬಳಸಿದರೆ ಕನಿಷ್ಠ, ಇಂಗ್ಲೀಷ್ ಬಳಸಿದರೆ ಶ್ರೇಷ್ಠ ಎಂಬ ಮನೋಭಾವನೆ ತೆಗೆದು ಹಾಕಬೇಕು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒತ್ತಡದ ಜೀವನದಿಂದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆಯಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆ ಬರುತ್ತಿದೆ. ಹಿತಮಿತ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಎಲ್ಲಾ ಇಲಾಖೆಯವರು ಸೇರಿ ಕನ್ನಡದ ತೇರನ್ನು ಎಳೆಯಬೇಕಾಗಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತು ವತಿಯಿಂದ ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಾ ಸ್ಪರ್ಧೆ ಆಯೋಜಿಸಲಾಗುವುದು. ಕಸಾಪ ವಿವಿಧ ಇಲಾಖೆಯ ಸಹಯೋಗದಿಂದ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಇಲಾಖೆಯಲ್ಲಿರುವ ಸಾಹಿತಿಗಳು, ಕವಿಗಳನ್ನು ಗುರುತಿಸುತ್ತಿದ್ದೇವೆ ಎಂದರು. ಅತಿಥಿಯಾಗಿದ್ದ ಅಗ್ನಿಶಾಮಕದಳದ ಸಂತೋಷ್ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಕೆ.ಎಸ್.ರಾಜಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ.ಆಕರ್ಷ್, ಅಗ್ನಿಶಾಮಕದಳದ ಸಹಾಯಕ ಠಾಣಾಧಿಕಾರಿ ದೇವೇಂದ್ರ ನಾಯ್ಕ, ಅರಣ್ಯ ಇಲಾಖೆಯ ಪಿ.ಮಂಜಯ್ಯ, ಸೀನಿಯರ್ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್ ಕರ್, ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ಉಪಸ್ಥಿತರಿದ್ದರು. ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಕಾರ್ಯಕ್ರಮ ನಿರೂಪಿಸಿದರು. ನಂದೀಶ್ ವಂದಿಸಿದರು.