ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ಮೋಲಿಯರ್‌ನ ತಾರ್ತೂಫ್‌ನ ರೂಪಾಂತರಿತ ನಾಟ್ಯದೇವ ಚರಿತೆ ನಾಟಕ ಧಾರ್ಮಿಕ ಬೂಟಾಟಿಕೆಯನ್ನು ಅನಾವರಣಗೊಳಿಸುವ ವಿಡಂಬನಾತ್ಮಕ ವೈಚಾರಿಕ ಅಭಿವ್ಯಕ್ತಿಗೆ ತಾಲೂಕಿನ ರಂಗಗ್ರಾಮ ಶೇಷಗಿರಿ ಸಾಕ್ಷಿಯಾಯಿತು.ಬೆಂಗಳೂರಿನ ರಂಗಶಂಕರ, ಶೇಷಗಿರಿ ಕಲಾ ಕೇಂದ್ರ ಸಂಯುಕ್ತವಾಗಿ ಆಯೋಜಿಸಿದ ಕನ್ನಡ ನಾಟಕೋತ್ಸವ-೨೩ ರ ಮೊದಲ ದಿನ ನಡೆದ ಕೃಷ್ಣ ಹೆಬ್ಬಾಲೆ, ಹೇಮಂತ್‌ಮಾರ ಅವರ ನಾಟ್ಯದೇವ ಚರಿತೆ, ಹೊಸ ತಲೆಮಾರಿನ ಜನಾಂಗಕ್ಕೆ ಯೋಗ, ಧರ್ಮದ ಹೆಸರಿನಲ್ಲಿ ಮೋಸ ಮಾಡುವ, ದುರ್ಬಲ ಮನಸ್ಸುಗಳನ್ನು ದುರುಪಯೋಗ ಮಾಡಿಕೊಳ್ಳುವ, ಬೂಟಾಟಿಕೆ ಕಪಟತನಕ್ಕೆ ಧರ್ಮವನ್ನು ಬಳಸಿಕೊಳ್ಳುವ ಬಗೆಗೆ ಎಚ್ಚರಿಕೆಯ ನೀಡುವ ಈ ನಾಟಕ ಸಮಾಜದಲ್ಲಿ ಅನೈತಿಕೆತೆಯನ್ನು ಬಿತ್ತಿ ಬೆಳೆವವರ ಬಗೆಗೆ ಎಚ್ಚರಿಕೆ ಮೂಡಿಸಿತು. ಕುರುಡು ಭಕ್ತಿಯ ಮೂರ್ಖತನಕ್ಕೆ ನಂಬಿಕೆಯ ದೊಡ್ಡ ಅಸ್ತ್ರ ಪ್ರಯೋಗ ಮಾಡಿ ಮೋಸಗೊಳಿಸುವ ಇಂದಿನ ನಿತ್ಯ ನಿರಂತರ ಪ್ರಸಂಗಗಳಿಗೆ ಕನ್ನಡಿಯಾಗಿತ್ತು.
ಡಿಜಿಟಲ್ ಯುಗದಲ್ಲಿಯೂ ಇಂತಹ ಬೂಟಾಟಿಕೆಗಳಿಗೆ ಬಲಿಯಾಗುವವರ ಬಗೆಗೆ ಖೇದವಿರುವ ಈ ನಾಟಕದ ವಸ್ತು ವಿಷಯ ಇಂದಿನ ಯುವ ಪೀಳಿಗೆಯಲ್ಲಿ ವೈಚಾರಿಕ ಮನೋಭಾವ ಬಿತ್ತಿ, ಸತ್ಯವನ್ನು ಸೆರೆ ಹಿಡಿಯುವ ದೃಢ ಸಂಕಲ್ಪಕ್ಕೆ ಮುನ್ನಡೆ ನೀಡಬೇಕಾದ ಅಗತ್ಯವನ್ನು ನಾಟಕ ಸಹೃದಯರ ಮನ ಮುಟ್ಟಿಸಿತು. ಈ ನಾಟಕ ತಂತ್ರಜ್ಞಾನವನ್ನು ರಂಗಭೂಮಿಯಲ್ಲಿ ಬೆಸೆಯುವ ಮೂಲಕ ಸಾಂಪ್ರದಾಯಿಕ ಮತ್ತು ಆಧುನಿಕತೆಯನ್ನು ಬೆಸೆದು ಕಥೆ ಹೇಳುವಲ್ಲಿ ಯಶಸ್ವಿಯಾಯಿತು.ಪಾತ್ರಗಳಲ್ಲಿ ಅರುಣಕುಮಾರ, ಸಂಚಯ ನಾಗರಾಜ, ಸ್ಪೂರ್ತಿ ಗುಮಾಸ್ತೆ, ಸುದರ್ಶನ, ಸೌಮ್ಯಾ, ಸೀತಾಂಶು, ಚಂದನಾ ನಾಗ, ಉಮಶಂಕರ, ಜಿಯಾನಸಂದೇಶ, ಎಬಿಎಸ್ ವಿಜಯ, ಸೃಷ್ಟಿ ದೇವ, ಜ್ಯೋತಿಬಾ, ದರ್ಶನ, ಲತಾ ಪ್ರಸಾದ, ಅಂಬಿಕಾ, ಸಚಿತ್, ಶಶಾಂಕ, ಶಿವು ಮನೋಜ್ಞ ಅಭಿನಯ ನೀಡಿದರು.
ಸುದರ್ಶನ್ ಹಾಗೂ ಮನೋಜ ಅವರ ರಂಗ ನಿರ್ವಹಣೆ, ಅಕ್ಷರ ವೇಣುಗೋಪಾಲ ಬೆಳಕು, ರವಿ ನಂದೀಶ ಪ್ರಸಾದನ, ಭರತ್‌ದಾವುಡಿ, ಶರತ್ ತಾಂತ್ರಿಕ, ಹರ್ಷಿತಾ ಹಿರಣ್ಮಯಿ ವಸ್ತ್ರವಿನ್ಯಾಸ, ಚೇತನ್ ಯರಗೇರಾ, ಸುರೇಂದ್ರ ನೃತ್ಯ ಸಂಯೋಜನೆ, ಹವೀಶ, ಮೇಘನಾ ಸಂದೀಪ, ಮಂಜುನಾಥ, ಪ್ರಸನ್ನ ಅವರ ಸಂಗೀತ, ಗೌತಮ್‌ಭೀಮ, ಅಜಯ್, ಶ್ರೇಯಸ್, ಮಾಲತೇಶ ಅವರ ರಂಗ ಸಜ್ಜಿಕೆ ನಿರ್ವಹಣೆಯಲ್ಲಿ ನಾಟಕ ಸೊಗಸಾಗಿ ಅಭಿವ್ಯಕ್ತಗೊಂಡಿತು.ಬೆಂಗಳೂರಿನ ರಂಗಶಂಕರ ನಿರ್ದೇಶಕ ಸುರೇಂದ್ರನಾಥ, ಗಜಾನನ ಯುವಕ ಮಂಡಳದ ಕಲಾವಿದ ಪ್ರಭು ಗುರಪ್ಪನವರ, ನಿರ್ದೇಶಕ ಡಾ. ಶ್ರೀಪಾದ ಭಟ್, ಸಂಚಾಲಕ ನಾಗರಾಜ ಧಾರೇಶ್ವರ ಅವರ ಪರಿಶ್ರಮದ ಫಲ ಈ ನಾಟಕೋತ್ಸವ ಹಾಗೂ ರಂಗ ತರಬೇತಿ ಶಿಬಿರ.