ಸಾರಾಂಶ
ಚಿತ್ರದುರ್ಗ: ಕೋವಿಡ್ ಹೊಸ ತಳಿಯ ಬಗ್ಗೆ ಯಾರೂ ಕೂಡ ಹಗುರವಾಗಿ ಪರಿಗಣಿಸಬಾರದು. ಜಿಲ್ಲೆಯಲ್ಲಿ ಕೋವಿಡ್ ಹರಡದಂತೆ ಹಾಗೂ ಸಂಭವನೀಯ ಪರಿಸ್ಥಿತಿ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಿರ್ವಹಣೆಗೆ ವೈದ್ಯಕೀಯ ಸೌಲಭ್ಯಗಳ ಸಿದ್ಧತೆ ಮಾಡಿಕೊಳ್ಳಲು ವಿಶೇಷ ಕಾರ್ಯ ಯೋಜನೆ ರೂಪಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಹಾಗೂ ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್‍ನ ಜೆಎನ್-01 ಹೊಸ ತಳಿ ಕೇರಳದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು, ರಾಜ್ಯಕ್ಕೂ ಕಾಲಿಟ್ಟಿದೆ. ಇದರ ಜೊತೆಗೆ ದೇಶದಲ್ಲಿಯೂ ಕೂಡ ವ್ಯಾಪಕವಾಗುವ ಸಾಧ್ಯತೆಗಳಿವೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ, ಕೆಲವು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.ರಾಜ್ಯದಲ್ಲಿ ಕೋವಿಡ್‌ನಿಂದ 3 ಸಾವು ಸಂಭವಿಸಿದೆ ಎಂದು ವರದಿ ಬಂದಿದ್ದು, ಸಾವಿಗೆ ಏನೇ ಕಾರಣ ಹೇಳಿದ್ದರೂ, ಈ ಹಿಂದಿನ ಅನುಭವದ ಆಧಾರದಲ್ಲಿ ಇದನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಈ ಹಿಂದೆಯೂ ಕೂಡ ನಿಧಾನವಾಗಿ ಕಾಣಿಸಿಕೊಂಡ ಕೋವಿಡ್ ಬಳಿಕ ತೀವ್ರ ಗಂಭೀರ ಪರಿಸ್ಥಿತಿ ಉಂಟು ಮಾಡಿತ್ತು. ಹೀಗಾಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಜ್ವರ ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಆಯಾ ದಿನದಂದೇ ಫಲಿತಾಂಶ ಸಿಗುವಂತಾಗಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವನೀಯ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್, ಐಸಿಯು, ಬೆಡ್, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ, ಮತ್ತು ಅಗತ್ಯ ಔಷಧಿ ಉಪಕರಣ ಸಿದ್ಧವಾಗಿರಿಸಿಕೊಳ್ಳಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಗತ್ಯ ಉಪಕರಣಗಳ ಪರಿಶೀಲನೆ ನಡೆಸಬೇಕು. ಒಂದು ವೇಳೆ ಯಾವುದೇ ದುರಸ್ಥಿಗಳಿದ್ದಲ್ಲಿ ಕೂಡಲೇ ಮಾಡಿಸಬೇಕು, ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಬೇಕು ಎಂದರು.ಆಕ್ಸಿಜನ್ ಘಟಕ ಹಸ್ತಾಂತರವಾಗಿಲ್ಲ:
ಸಿಎಸ್‍ಆರ್ ನಿಧಿಯಡಿ ಹಿಂದೆ ಮೆಡಿಕಲ್ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದ್ದು, ಈವರೆಗೂ ಅವು ಸಂಬಂಧಿಸಿದ ಆಸ್ಪತ್ರೆಗಳಿಗೆ ಹಸ್ತಾಂತರವಾಗಿಲ್ಲ. ಕೆಲವೆಡೆ ಸಂಪರ್ಕವನ್ನೇ ನೀಡಿಲ್ಲ. ಹೀಗಾಗಿ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು. ವೆಂಟಿಲೇಟರ್ ಬಳಕೆ ದೀರ್ಘ ಕಾಲದಿಂದ ಮಾಡದೇ ಇರುವುದರಿಂದ ಇವುಗಳ ಸೆನ್ಸಾರ್ ಉಪಕರಣ ಹಾಳಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸೆನ್ಸಾರ್ ಖರೀದಿಸಿ ದುರಸ್ತಿಗೊಳಿಸುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು.ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಜಿಲ್ಲಾಸ್ಪತ್ರೆಯಲ್ಲಿ ಸಂತೆಯ ರೀತಿ ವಾತಾವರಣ ಇರುವುದನ್ನು ಗಮನಿಸಿಸಲಾಗಿದೆ. ಸ್ವಚ್ಛತೆಯ ಕೊರತೆ ಇದೆ. ಪರಿಸ್ಥಿತಿ ಇದೇ ರೀತಿ ಆದರೆ, ಕೋವಿಡ್ ನಿರ್ವಹಣೆ ತುಂಬಾ ಕಷ್ಟಕರವಾಗುತ್ತದೆ. ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಕ್ರಮ ಕೈಗೊಂಡು, ಅಲ್ಲಿನ ಪರಿಸ್ಥಿತಿ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಶಂಕಾಸ್ಪದ ಪ್ರಕರಣಗಳಿಗೆ ಸಂಬಂಧಿಸಿ 72 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. ಮುಂದೆಯೂ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಡಿಹೆಚ್‍ಒ ಡಾ.ರೇಣುಪ್ರಸಾದ್ ಮಾತನಾಡಿ, ಕೋವಿಡ್ ಜೆಎನ್-01 ಹೊಸ ತಳಿ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್ ಧರಿಸುವುದು, ಕೈಯನ್ನು ಆಗಾಗ್ಗೆ ಸಾಬೂನಿನಿಂದ ಸ್ವಚ್ಛಗೊಳಿಸುವುದು, ರೋಗ ಲಕ್ಷಣಗಳಿದ್ದವರು ಸಾರ್ವಜನಿಕರೊಂದಿಗೆ ಬೆರೆಯಬಾರದು. ವೈದ್ಯರ ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
1460 ಬೆಡ್‌ಗಳು ಲಭ್ಯ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 312 ಐಸೋಲೇಷನ್ ಬೆಡ್‍ಗಳು, ಆಕ್ಸಿಜನ್ ನೀಡಬಹುದಾದ ಸಂಪರ್ಕವಿರುವ 245 ಬೆಡ್‍ಗಳು ಹಾಗೂ ಇತರೆ 102 ಸೇರಿ ಒಟ್ಟು 660 ಬೆಡ್‍ಗಳು ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ 800 ಬೆಡ್ ಸೇರಿ ಒಟ್ಟಾರೆ 1460 ಬೆಡ್ ಬಳಸಿಕೊಳ್ಳಬಹುದಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 62 ವೆಂಟಿಲೇಟರ್‌ಗಳಲ್ಲಿ 23 ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 303 ಆಕ್ಸಿಜನ್ ಕಾನ್ಸಂಟ್ರೇಟರ್ಸ್, 606 ಆಕ್ಸಿಜನ್ ಸಿಲಿಂಡರ್ ಲಭ್ಯವಿದೆ. ವೈದ್ಯಕೀಯ ಆಕ್ಸಿಜನ್ ಪ್ಲಾಂಟ್‍ಗೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯಲ್ಲಿ 500 ಲೀ, 300 ಲೀ.ಹಾಗೂ 1000 ಲೀ ಸಾಮರ್ಥ್ಯದ ಪ್ಲಾಂಟ್, ಹೊಸದುರ್ಗದಲ್ಲಿ 500 ಲೀ, ಹಿರಿಯೂರಿನಲ್ಲಿ 250 ಲೀ. ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಇನ್ಸ್ಟಾಲೇಶನ್ ಪೂರ್ಣಗೊಂಡಿದೆ. ಆದರೆ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹೊಳಲ್ಕೆರೆಯಲ್ಲಿ ಪೂರ್ಣಗೊಂಡಿಲ್ಲವೆಂದು ಡಾ.ರೇಣುಪ್ರಸಾದ್ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.