ಉತ್ತಮ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ. ವಿದ್ಯಾರ್ಥಿಗಳು ಶ್ರೇಷ್ಠ ಗುರಿ ಹೊಂದಿ ಸತತವಾದ ಪರಿಶ್ರಮದಿಂದ ಸಾಧಿಸುವುದಕ್ಕೆ ಸಾಧ್ಯವಿದೆ. ಮನುಷ್ಯನು ಸರಿ ಹೋದರೆ ಬೇರೆಲ್ಲವೂ ಸರಿ
ಕನ್ನಡಪ್ರಭ ವಾರ್ತೆ ಮೈಸೂರು
ಉತ್ತಮ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ ಎಂದು ಮೈಸೂರಿನ ವಿವೇಕ ವಂಶಿ ಫೌಂಡೇಷನ್ ಸ್ಥಾಪಕ ಎಸ್.ಬಿ. ನಿತ್ಯಾನಂದ ಅಭಿಪ್ರಾಯಪಟ್ಟರು.ಮೈಸೂರಿನ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ 2026- 27ನೇ ಸಾಲಿನ ಸಾಂಸ್ಕೃತಿಕ ಸಾಹಿತ್ಯಕ ಮತ್ತು ಕ್ರೀಡಾ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ. ವಿದ್ಯಾರ್ಥಿಗಳು ಶ್ರೇಷ್ಠ ಗುರಿ ಹೊಂದಿ ಸತತವಾದ ಪರಿಶ್ರಮದಿಂದ ಸಾಧಿಸುವುದಕ್ಕೆ ಸಾಧ್ಯವಿದೆ. ಮನುಷ್ಯನು ಸರಿ ಹೋದರೆ ಬೇರೆಲ್ಲವೂ ಸರಿ ಹೋಗುವುದು ಎಂದರು.
ದೇಶವನ್ನು ಬದಲಾಯಿಸದೆ ನಮ್ಮನ್ನು ಬದಲಾಯಿಸಿಕೊಂಡರೆ ದೇಶದ ಪ್ರಗತಿ ಸಾಧ್ಯವಿದೆ. ಶ್ರೇಷ್ಠ ಸಾಧಕರ ಬದುಕಿನ ಸಾಧನೆಯನ್ನು ಅಧ್ಯಯನ ಮಾಡಿ ಎಂದು ಸಲಹೆ ನೀಡಿ ಎಂದರು.ಮುಖ್ಯ ಅತಿಥಿಯಾಗಿದ್ದ ಅಂತಾರಾಷ್ಟ್ರೀಯ ಕ್ರೀಡಾಪಟು ರೀನಾ ಜಾರ್ಜ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಗುರಿ ಸಾಧಿಸಿ ಎಂದರು.
ಯುವ ಉದ್ಯಮಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಎಂ.ಆರ್. ವಿದ್ಯಾ ಮಾತನಾಡಿ, ತಮ್ಮ ಜೀವನಕ್ಕೆ ಮಹಿಳಾ ಕಾಲೇಜು ಅಮೂಲ್ಯವಾದ ಕೊಡುಗೆ ನೀಡಿದೆ. ವ್ಯಕ್ತಿತ್ವ ವಿಕಸನ ಹೊಂದಲು ಉತ್ತಮ ಕೌಶಲ್ಯ ಅಳವಡಿಸಿಕೊಳ್ಳಿ. ಗುರು ಹಿರಿಯರಿಗೆ, ಪೋಷಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ಸೃಜನಶೀಲತೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮೂಹ ಮಾಧ್ಯಮವನ್ನು ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಬಳಸಬೇಕು ಎಂದು ಸಲಹೆ ನೀಡಿದರು.ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ರೇಚಣ್ಣ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಜೆ. ಪುಷ್ಪಲತಾ, ಕ್ರೀಡಾ ವೇದಿಕೆ ಸಂಚಾಲಕಿ ಎ. ರಶ್ಮಿ ಇದ್ದರು. ಕಾಲೇಜಿನ ಅಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಪಾಲ್ಗೊಂಡಿದ್ದರು.
ಧಾತ್ರಿ ಮತ್ತು ತಂಡದವರು ಪ್ರಾರ್ಥಿಸಿದರು. ಪಿ. ನಮ್ರತಾ ಅಂತಿಮ ಬಿಸಿಎ ವಿದ್ಯಾರ್ಥಿನಿ ಗಣ್ಯರನ್ನು ಸ್ವಾಗತಿಸಿದರು. ಅಂತಿಮ ಬಿಸಿಎ ವಿದ್ಯಾರ್ಥಿನಿ ಎಂ. ಶುಭಾ ವಂದಿಸಿದರು. ಡಿ.ವೈ. ತೃಪ್ತಿ ಕಾರ್ಯಕ್ರಮ ನಿರೂಪಿಸಿದರು.