ಹೊನ್ನಾಳಿಯಲ್ಲಿ ವಿಜೃಂಭಣೆಯ ನವಮಿ ಬನ್ನಿ ಮಹೋತ್ಸವ

| Published : Oct 05 2025, 01:00 AM IST

ಹೊನ್ನಾಳಿಯಲ್ಲಿ ವಿಜೃಂಭಣೆಯ ನವಮಿ ಬನ್ನಿ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜಯಘೋಷದ ಮಧ್ಯೆ ಅಂಬು ಹೊಡೆಯುವ ಮೂಲಕ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಮೇಜರ್ ಮುಜರಾಯಿ ದೇವಸ್ಥಾನವಾದ ಸುಕ್ಷೇತ್ರ ಮಾರಿಕೊಪ್ಪ ಗ್ರಾಮದ ಶ್ರೀ ಹಳದಮ್ಮ ದೇವಿ ಸನ್ನಿಧಾನದಲ್ಲಿ ಮಹಾನವಮಿ ಹಬ್ಬದ ಪ್ರಯುಕ್ತ ದೊಡ್ಡ ಬನ್ನಿ ಮಹೋತ್ಸವ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜಯಘೋಷದ ಮಧ್ಯೆ ಅಂಬು ಹೊಡೆಯುವ ಮೂಲಕ ವಿಜೃಂಭಣೆಯಿಂದ ನೆರವೇರಿತು.

ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿ ಶುಭ ಕೋರುತ್ತ ತಮ್ಮ ಭಕ್ತಿ ಸರ್ಮರ್ಪಿಸಿದರು. ದಸರಾ ಹಬ್ಬದ ನಂತರದ ಶುಕ್ರವಾರ ಬನ್ನಿ ಮಹೋತ್ಸವ ಆಚರಿಸುವುದು ಈ ಕ್ಷೇತ್ರದ ವೈಶಿಷವಾಗಿದೆ. ಹೊನ್ನಾಳಿ ಪಟ್ಟಣ, ಮಾರಿಕೊಪ್ಪ, ಮಾದೇನಹಳ್ಳಿ, ಸೊರಟೂರು,ಅರಬಗಟ್ಟೆ ಸೇರಿದಂತೆ ವಿವಿಧ ಗ್ರಾಮಗಳ ಮುತ್ತೈದೆಯವರು ಜೋಗಮ್ಮನವರು ಶುಕ್ರವಾರ ಮಧ್ಯಾಹ್ನದಿಂದಲೇ ಉಪವಾಸ ವ್ರತದಿಂದ ಇದ್ದು, ಬನ್ನಿ ಮುಡಿಯುವವರೆಗೂ ದೀಪಗಳನ್ನು ಹಿಡಿದು ಬೆಳಗುತ್ತಾರೆ. ಎತ್ತುಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ ಗಾಡಿಗಳಲ್ಲಿ ಭಕ್ತರು ಆಗಮಿಸಿದರು.

ಹೊನ್ನಾಳಿ, ನ್ಯಾಮತಿ ತಾಲೂಕುಗಳು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಪ್ರತಿ ವರ್ಷದಂಚೆ ಈ ವರ್ಷವೂ ಕೂಡ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು.

ಸಂಪೂರ್ಣ ಗ್ರಾಮೀಣ ಸಂಸ್ಕೃತಿ ಪ್ರತೀಕವಾಗಿ ಭಕ್ತರು ರೂಟ್ಟಿ, ಬುತ್ತಿ ಕಟ್ಟಿಕೊಂಡು ಎತ್ತಿನ ಗಾಡಿ, ಟ್ರ್ಯಾಕ್ಟರ್ ದ್ವಿ-ಚಕ್ರ ವಾಹನಗಳು, ಕಾರು ಸೇರಿದಂತೆ ಇತರೆ ವಾಹನಗಳಲ್ಲಿ ಭಕ್ತರು ಶುಕ್ರವಾರ ಬೆಳಿಗ್ಗೆಯಿಂದಲೇ ಬಂದು ದೇವಿಯ ಆರಾಧನೆಯಲ್ಲಿ ನಿರತರಾಗುತ್ತಾರೆ. ಹೆಚ್ಚಿನ ಸಂಖ್ಯೆಯ ಭಕ್ತರು ಗುರುವಾರ ರಾತ್ರಿಯೇ ದೇವಸ್ಥಾನಕ್ಕೆ ಆಗಮಿಸಿ, ಪ್ರಾಂಗಣದಲ್ಲಿಯೇ ಉಳಿದುಕೊಳ್ಳುತ್ತಾರೆ.

ಶರನ್ನವರಾತ್ರಿ, ದಸರಾ ಬನ್ನಿ ಮಹೋತ್ಸವ ನಡೆಯುವ ಸ್ಥಳಕ್ಕೆ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಜತೆಗೆ ಪ್ರಧಾನ ಅರ್ಚಕ ಮಲ್ಲಿಕಾರ್ಜುನ್ ಉಪವಾಸ ವ್ರತದೊಂದಿಗೆ ಶಮಿ ವೃಕ್ಷದ ಮುಂಭಾಗದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೂರು ಬಾಣಗಳನ್ನು (ಅಂಬು) ಹೊಡೆಯುತ್ತಾರೆ. ಬಾಣಗಳು ಯಾವ ದಿಕ್ಕಿಗೆ ಹೋಗುತ್ತವೆ ಎಂಬುದರ ಆಧಾರದ ಮೇಲೆ ಭಕ್ತರು ಮಳೆ-ಬೆಳೆ ಹಾಗೂ ರೈತರು-ನಾಡಿನ ಭವಿಷ್ಯವನ್ನು ಲೆಕ್ಕ ಹಾಕುವ ಪದ್ಧತಿ ಇದೆ.

ಅಂಬು ಹೊಡೆಯುವ ಸಂಪ್ರದಾಯದ ನಂತರ ಭಕ್ತರು ಪರಸ್ಪರ ಬನ್ನಿ ಪತ್ರೆ ವಿನಿಮಯ ಮಾಡಿಕೊಂಡರು. ಮಾರಿಕೊಪ್ಪ ಗ್ರಾಮದ ಶ್ರೀಹಳದಮ್ಮ ದೇವಿ ಬನ್ನಿ ಉತ್ಸವದಲ್ಲಿ ಶಾಸಕ ಡಿ.ಜಿ.ಶಾಂತನಗೌಡ,ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ತಹಶೀಲ್ದಾರ್ ರಾಜೇಶ್‌ ಕುಮಾರ, ಮುಜರಾಯಿ ಇಲಾಖೆ ಆಡಳಿತಾಧಿಕಾರಿ ಕೃಷ್ಣಪ್ಪ,ರಾಜಸ್ವ ನೀರಿಕ್ಷಕ ರಮೇಶ್, ಶಿರಸ್ತೇದಾರ ಜಯರಾಂ, ಪೊಲೀಸ್ ವೃತ್ತ ನಿರೀಕ್ಷಕ ಸುನಿಲ್ ಕುಮಾರ, ಗ್ರಾಮದ ಮುಖಂಡರಾದ ಹನುಮಂತಪ್ಪ, ಹಳದಪ್ಪ, ಚಿನ್ನಪ್ಪ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬ್ರಾಹ್ಮಿ ಮುಹೂರ್ತದಲ್ಲಿ ತುಂಗಭದ್ರಾ ನದಿಯಲ್ಲಿ ಗಂಗಾ ಪೂಜೆ:

ಪ್ರತಿ ವರ್ಷವೂ ಬನಿಮಹೋತ್ಸವದ ದಿನ ಬೆಳಗಿನ ಜಾನ ಸುಮಾರು 3 ಗಂಟೆಗೆ ಶ್ರೀ ಹಳದಮ್ಮ ದೇವಿ ಹಾಗೂ ಧರಿಯಪ್ಪ ದೇವರುಗಳು ಸುಂದರವಾಗಿ ವಿವಿಧ ಪುಪ್ಪಗಳಿಂದ ಅಲಂಕರಿಸಿದ ಪಲ್ಲಕ್ಕಿಗಳನ್ನು ವಿವಿಧ ವಾದ್ಯಮೇಳಗೊಂದಿಗೆ ತುಂಗಭದ್ರಾ ನದಿಗೆ ಹೋಗಿ ಅಲ್ಲಿ ಗಂಗಾ ಪುಜೆ ನೆರವೇರಿಸಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ ಈ ಸಂದರ್ಭದಲ್ಲಿ ಹರಕೆ ಹೊತ್ತ ಪಟ್ಟಣದ ಭಕ್ತರು ಹೊಸಸೀರೆ ಕುಪ್ಪಸ ಊಡಿಯಕ್ಕಿಯನ್ನು ಸಮರ್ಪಿಸಿ ಹಣ್ಣು ಕಾಯಿ ನೈವೈದ್ಯವನ್ನು ದೇವಿಗೆ ಸಮರ್ಪಿಸುತ್ತಾರೆ. ನಂತರ ಸಂಜೆ ವೇಳೆಗೆ ಮಾರಿಕೊಪ್ಪಕ್ಕೆ ತೆರಳಿ ಅಲ್ಲಿ ಬನ್ನಿಮಂಟಪದಲ್ಲಿ ಬನ್ಮಿ ಮಹೋತ್ಸವ ನಡೆಯುವುದು ಸಂಪ್ರದಾಯವಾಗಿದೆ.