ನವದುರ್ಗೆಯ ನವರಾತ್ರಿಯು ನವ ಜೀವನಕ್ಕೆ ನಾಂದಿ: ವಿದ್ಯಾನಗರ ಮಹಿಳಾ ಸಂಘದ ಇಂದ್ರಮ್ಮ ಸತೀಶ್ ಶರ್ಮ

| Published : Oct 07 2024, 01:31 AM IST

ನವದುರ್ಗೆಯ ನವರಾತ್ರಿಯು ನವ ಜೀವನಕ್ಕೆ ನಾಂದಿ: ವಿದ್ಯಾನಗರ ಮಹಿಳಾ ಸಂಘದ ಇಂದ್ರಮ್ಮ ಸತೀಶ್ ಶರ್ಮ
Share this Article
  • FB
  • TW
  • Linkdin
  • Email

ಸಾರಾಂಶ

ನವ ದುರ್ಗೆಯರ ಆರಾಧನೆಯ ಆಚರಣೆ ದೈಹಿಕ ಮತ್ತು ಮಾನಸಿಕ ಶಕ್ತಿ ನೀಡುವುದರೊಂದಿಗೆ ನವ ಜೀವನಕ್ಕೆ ಚೈತನ್ಯ ನೀಡುವ ದಿನಗಳಾಗಿವೆ ಎಂದು‌ ವಿದ್ಯಾನಗರ ಮಹಿಳಾ ಸಂಘದ ಗೌರವಾಧ್ಯಕ್ಷೆಯಾದ ಇಂದ್ರಮ್ಮ ಸತೀಶ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು. ಅರಸೀಕೆರೆಯಲ್ಲಿ ನವರಾತ್ರಿ ಮೂರನೇ ದಿನವಾದ ಶನಿವಾರ ಚಂದ್ರಘಂಟಾ ದೇವಿ ಆಚರಣೆ ಸಂದರ್ಭದಲ್ಲಿ ಮಾತನಾಡಿದರು.

ಚಂದ್ರಘಂಟಾ ದೇವಿ ಆರಾಧನೆ । ಬೂದು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಮಹಿಳೆಯರು

ಕನ್ನಡಪ್ರಭ ವಾರ್ತೆ ಅರಸೀಕೆರೆ

ಭಾರತೀಯ ಸಂಸ್ಕೃತಿಯಲ್ಲಿ ನವರಾತ್ರಿ ಹಬ್ಬವು ತನ್ನದೇ ಸ್ಥಾನವನ್ನು ಹೊಂದಿದೆ. ನವ ದುರ್ಗೆಯರ ಆರಾಧನೆಯ ಆಚರಣೆ ದೈಹಿಕ ಮತ್ತು ಮಾನಸಿಕ ಶಕ್ತಿ ನೀಡುವುದರೊಂದಿಗೆ ನವ ಜೀವನಕ್ಕೆ ಚೈತನ್ಯ ನೀಡುವ ದಿನಗಳಾಗಿವೆ ಎಂದು‌ ವಿದ್ಯಾನಗರ ಮಹಿಳಾ ಸಂಘದ ಗೌರವಾಧ್ಯಕ್ಷೆಯಾದ ಇಂದ್ರಮ್ಮ ಸತೀಶ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾನಗರದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ವಿಷ್ಣು ಪಂಚಾಯತನ ಶ್ರೀಕ್ಷೇತ್ರದಲ್ಲಿ ನವರಾತ್ರಿ ಮೂರನೇ ದಿನವಾದ ಶನಿವಾರ ಚಂದ್ರಘಂಟಾ ದೇವಿ ಆಚರಣೆ ಸಂದರ್ಭದಲ್ಲಿ ಬೂದು ಬಣ್ಣದ ಸೀರೆಯೊಂದಿಗೆ ಭಾಗವಹಿಸಿದ್ದ ವಿದ್ಯಾನಗರ ನವ ಸಹಾಯ ಸಂಘದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು..

ನವರಾತ್ರಿ ಹಬ್ಬದ ಒಂಭತ್ತು ದಿನಗಳು ಸಹ ಒಂದೊಂದು ಇತಿಹಾಸದೊಂದಿಗೆ ಧಾರ್ಮಿಕ ಮತ್ತು ವೈಜ್ಞಾನಿಕ ಸಂದೇಶಗಳನ್ನು ನೀಡುತ್ತವೆ. ಈ ದಿನಗಳಲ್ಲಿ ಮಹಿಳೆಯರು ಸಡಗರ ಸಂಭ್ರಮದಿಂದ ನವದುರ್ಗೆಯರಿಗೆ ಪ್ರಿಯವಾದ ಬಣ್ಣಗಳ ಉಡುಗೆಗಳನ್ನು ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ದುರ್ಗೆ ಅವತಾರವು ಲೋಕ ಕಲ್ಯಾಣಾರ್ಥವಾಗಿ ಅವತರಿಸಿದ ಶಕ್ತಿ ದೇವತೆ ಕೂಡ ಆಗಿದೆ. ಇಂತಹ ದಿನಗಳಲ್ಲಿ ತಾಯಂದಿರು ತಮ್ಮ ಮಕ್ಕಳನ್ನು‌ ಸ್ಥಳೀಯ ದೇವಸ್ಥನಗಳಿಗೆ ಕರೆದುಕೊಂಡು ಹೋಗಿ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಡಬೇಕು. ಮನೆಯಲ್ಲಿ ಮೊಬೈಲ್ ಹೊರತುಪಡಿಸಿ ಹೊರಗೊಂದು ಸುಂದರ ಪ್ರಪಂಚ ಮತ್ತು ವಿಚಾರಗಳಿವೆ ಎಂದು ಮಕ್ಕಳಿಗೆ ಅರಿವು ಮೂಡಿಸಿದಾಗ ಮಾತ್ರ ನಮ್ಮ ಸನಾತನ ಸಂಸ್ಕೃತಿ ಸಂಸ್ಕಾರ ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಗರಸಭೆ ಸದಸ್ಯೆ ಶ್ವೇತ ರಮೇಶ್ ನಾಯ್ಡು ಮಾತನಾಡಿ, ದೇವಾಲಯಗಳು ಮನಸ್ಸಿಗೆ ಶಾಂತಿ ನೀಡುವ ಶ್ರದ್ಧಾ ಕೇಂದ್ರಗಳಾಗಿವೆ. ನಮ್ಮ ಹಿರಿಯರು ಇಂತಹ ಧಾರ್ಮಿಕ ಕೇಂದ್ರಗಳೊಂದಿಗೆ ಒಡನಾಟ ಇಟ್ಟುಕೊಂಡು ನಮ್ಮ ಸನಾತನ ಧರ್ಮದ ಅಗಾಧವಾದ ಸಂದೇಶ ಮತ್ತು ಮೌಲ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವುಗಳನ್ನು ಪ್ರಸ್ತುತ ಯುವ ಜನಾಂಗಕ್ಕೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನವರಾತ್ರಿ ಹಬ್ಬವು ನೊಂದವರಿಗೆ ಆತ್ಮಸ್ಥೈರ್ಯ ನೀಡುವ ಹಬ್ಬ ಕೂಡ ಆಗಿದೆ. ಇಂತಹ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸಲು ಅವಕಾಶ ಮಾಡಿಕೊಟ್ಟಿರುವ ವಿದ್ಯಾನಗರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ವಿಷ್ಣು ಪಂಚಾಯತನ ಶ್ರೀಕ್ಷೇತ್ರದ ಅವಧೂತ ಸತೀಶ್ ಶರ್ಮಾಜಿ, ಆಡಳಿತ ವರ್ಗ ಮತ್ತು ಭಕ್ತ ವೃಂದಕ್ಕೆ ಆಭಾರಿಯಾಗಿದ್ದೇವೆ. ವಿಷ್ಣು ಪಂಚಾಯತನ ದೇವಸ್ಥಾನ ಭಾರತದಲ್ಲಿ ಪ್ರಥಮವಾಗಿದ್ದು, ಈ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರೊಂದಿಗೆ ಶ್ರೀ ವಿಘ್ನೇಶ್ವರ, ಶ್ರೀ ಸೂರ್ಯನಾರಾಯಣ, ಶ್ರೀ ಅಂಬಿಕಾ ದೇವಿ, ಈಶ್ವರ ಮತ್ತು ಪಂಚಮುಖಿ ಆಂಜನೇಯ ಹಾಗೂ ನಾಗರಕಟ್ಟೆ ಈ ಕ್ಷೇತ್ರದ ವಿಶೇಷವಾಗಿದೆ ಎಂದರು.

ವಿದ್ಯಾನಗರ ಮಹಿಳೆ ಸ್ವ ಸಹಾಯ ಸಂಘದ ರಾಧಮ್ಮ, ಗೀತಾ ಶಿವಕುಮಾರ್, ವಿದ್ಯಾ ಪುರುಷೋತ್ತಮ್, ರೂಪ ಪರಮೇಶ್, ಮಂಜುಳಾ ರಾಜು, ಅನಿತಾ, ಮಣಿ, ನಂದಿನಿ, ಹೇಮಲತಾ, ಅನ್ನಪೂರ್ಣ, ವಕೀಲೆ ದೇವಿ ಹಾಗೂ ನಗರದ ವಿವಿಧೆಡೆಯಿಂದ ಆಗಮಿಸಿದ ಮಹಿಳೆಯರು ಇದ್ದರು.