ಸಾರಾಂಶ
ಬೆಳ್ತಂಗಡಿ: ತಾಲೂಕಿನ ನಾವೂರು ಹಿರಿಯ ಪ್ರಾಥಮಿಕ ಶಾಲೆಯ 1985ನೇ ವರ್ಷದ ಏಳನೇ ತರಗತಿಯ ವಿದ್ಯಾರ್ಥಿಗಳ ಮರು ಸಂಗಮ ‘ರಿ ಯೂನಿಯನ್-25’ ಭಾನುವಾರ ನಡೆಯಿತು. ಮಂಗಳೂರು ಪಂಪ್‌ವೆಲ್‌ನ ಸಭಾಂಗಣವು 40 ವರ್ಷಗಳ ಬಳಿಕದ ಈ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶ-ವಿದೇಶದ ವಿವಿಧ ಭಾಗಗಳಲ್ಲಿದ್ದ ಸಹಪಾಠಿಗಳು ಭಾಗವಹಿಸಿ ಶಾಲಾ ದಿನಗಳ ರಸ ನಿಮಿಷಗಳನ್ನು ಮೆಲುಕು ಹಾಕುವ ಮೂಲಕ ಹಾಗೂ ತಮ್ಮ ಅಧ್ಯಾಪಕರನ್ನು ಗೌರವದಿಂದ ಸ್ಮರಿಸುವ ಮೂಲಕ ಈ ದಿನವನ್ನು ಸ್ಮರಣೀಯಗೊಳಿಸಿದರು.ಹಲವು ವರ್ಷಗಳ ನಂತರ ಬಾಲ್ಯದ ಸ್ನೇಹಿತರು ಪರಸ್ಪರ ಭೇಟಿಯಾಗಿ ಭಾವುಕಗೊಳ್ಳುವ ರೋಮಾಂಚನ ಕ್ಷಣಕ್ಕೆ ಈ ಸಂಗಮ ಸಾಕ್ಷಿಯಾಯಿತು. ಸಹಪಾಠಿ ಮಿತ್ರ ಅಬ್ದುಲ್ ರಝಾಕ್(ಇಂಜಿನಿಯರ್ ದುಬೈ) ಈ ಸಂಗಮವನ್ನು ಆಯೋಜಿಸಿ ಸಹಪಾಠಿಗಳನ್ನು ಆಹ್ವಾನಿಸಿದ್ದರು. ಇವರ ಆಹ್ವಾನ ಸ್ವೀಕರಿಸಿ ಊರಿನಲ್ಲಿರುವ ಹಾಗೂ ಬೆಂಗಳೂರು, ಗೋವಾ, ದುಬೈ, ಕುವೈತ್‌ನಲ್ಲಿ ನೆಲೆಸಿರುವ ಗೆಳೆಯರೂ ಬಿಡುವು ಮಾಡಿಕೊಂಡು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಶೇಷ ಆಹ್ವಾನಿತರಾಗಿದ್ದ ಖ್ಯಾತ ಮೋಟಿವೇಷನಲ್ ಸ್ಪೀಕರ್ ಹಾಗೂ ಕೌನ್ಸಿಲಿಂಗ್ ತಜ್ಞ ರಫೀಕ್ ಮಾಸ್ಟರ್ ಅವರು ತಮ್ಮ ಚಿಂತನೀಯ ಹಾಗೂ ಸ್ಫೂರ್ತಿಯುತ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಹಪಾಠಿ ಮಿತ್ರರು ಹಾಡು ಹಾಗೂ ಮಾತಿನ ಮೂಲಕ ನೆರೆದವರನ್ನು ರಂಜಿಸಿದರು. ಕಾರ್ಯಕ್ರಮದ ಆಯೋಜಕರಾದ ಇಂಜಿನಿಯರ್ ಅಬ್ದುಲ್ ರಝಾಕ್ ಔತಣಕೂಟ ಏರ್ಪಡಿಸಿದ್ದರಲ್ಲದೆ, ಎಲ್ಲರಿಗೂ ವಿಶೇಷ ಉಡುಗೊರೆಯನ್ನೂ ನೀಡಿದರು. ಕೆಲವು ಸಹಪಾಠಿಗಳು ಕುಟುಂಬ ಸಮೇತವಾಗಿ ಆಗಮಿಸಿದ್ದು ವಿಶೇಷವಾಗಿತ್ತು. ಈ ತಂಡದ ವತಿಯಿಂದ ಕಲಿತ ಶಾಲೆಗೆ ವಿಶೇಷ ಕೊಡುಗೆ ನೀಡುವ ಬಗ್ಗೆಯೂ ಚರ್ಚಿಸಲಾಯಿತು.ಫಾ. ವಿನ್ಸೆಂಟ್(ಸಿ.ಒ.ಡಿ.ಪಿ. ಮಂಗಳೂರು), ವರ್ಗೀಸ್ ಪಿ. (ಪೊಲೀಸ್ ಅಧಿಕಾರಿ-ಇಂಟಲಿಜೆನ್ಸ್ ವಿಭಾಗ), ಪೊಲಿಕಾರ್ಪ್ ಡಿಸೋಜ(ಉದ್ಯಮಿ, ಬೆಂಗಳೂರು), ಮುಹಮ್ಮದ್ ನೂರುದ್ದೀನ್(ಕುವೈತ್), ವಿಜಯ ಲೋಬೋ, ವಿಶ್ವನಾಥ, ಡೀಕಯ್ಯ, ರಾಜೇಂದ್ರ, ಕೇಶವ, ಉಮಾವತಿ, ದೀಪಿಕ, ಜೆಸಿಂತ, ವಿನ್ನಿ, ಸೇವರಿನ್, ಜೋಹರಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಆಯೋಜನೆಗಾಗಿ ಇಂಜಿನಿಯರ್ ಅಬ್ದುಲ್ ರಝಾಕ್ ರವರನ್ನು ಹಾಗೂ ಸಹಪಾಠಿಗಳ ವಾಟ್ಸಾಪ್ ಗ್ರೂಪ್ ರಚನೆ ಮತ್ತು ಸಂಯೋಜನೆಗಾಗಿ ಜೊಹರಾ ಅವರನ್ನು ಸನ್ಮಾನಿಸಲಾಯಿತು. ಹಮೀದ್ ಎನ್ಎಸ್ ಕಾರ್ಯಕ್ರಮ ನಡೆಸಿಕೊಟ್ಟರು. ಅಬ್ದುಲ್ ರಝಾಕ್ ನಾವೂರು ಸ್ವಾಗತಿಸಿದರು. ಫಾ.ವಿನ್ಸೆಂಟ್ ಧನ್ಯವಾದ ಸಮರ್ಪಿಸಿದರು.